ADVERTISEMENT

ವಿಶ್ವ ಪರಂಪರೆ ಹಿರಿಮೆಯ ಪಟ್ಟದಕಲ್ಲು: ಪ್ರವಾಸೋದ್ಯಮಕ್ಕೆ ಬೇಕಿದೆ ಕಾಯಕಲ್ಪ

ಐಹೊಳೆ, ಚಾಲುಕ್ಯರ ರಾಜಧಾನಿ ಬಾದಾಮಿ

ಬಸವರಾಜ ಹವಾಲ್ದಾರ
Published 13 ಆಗಸ್ಟ್ 2022, 5:50 IST
Last Updated 13 ಆಗಸ್ಟ್ 2022, 5:50 IST
ಪಟ್ಟದಕಲ್ಲು ದೇವಾಲಯಗಳ ಸಮುಚ್ಚಯ
ಪಟ್ಟದಕಲ್ಲು ದೇವಾಲಯಗಳ ಸಮುಚ್ಚಯ   

ಬಾಗಲಕೋಟೆ: ಚಾಲುಕ್ಯರ ರಾಜಧಾನಿ ಬಾದಾಮಿ, ವಾಸ್ತುಶಿಲ್ಪ ತೊಟ್ಟಿಲು ಐಹೊಳೆ, ವಿಶ್ವ ಪರಂಪರೆ ಪಟ್ಟಿಯಲ್ಲಿರುವ ಪಟ್ಟದಕಲ್ಲು ಸೇರಿದಂತೆ ಹಲವು ಪ್ರವಾಸಿ ತಾಣಗಳನ್ನು ಜಿಲ್ಲೆ ಹೊಂದಿದೆ. ಆದರೆ, ಅವುಗಳು ಅಭಿವೃದ್ಧಿಯಾಗಬೇಕಾದಷ್ಟು ಆಗಿಲ್ಲ. ರಸ್ತೆ, ವಸತಿ, ಪ್ರವಾಸಿತಾಣಗಳ ರಕ್ಷಣೆ ಕಾರ್ಯದಲ್ಲಿ ಸುಧಾರಣೆ ಕಾಣಬೇಕಿದೆ.

ಬಾದಾಮಿ ಕೋಟೆಗೆ ಎದುರಾಗಿ ಗುಹಾ ದೇವಾಲಯಗಳನ್ನು ನಿರ್ಮಿಸಲಾಗಿದೆ. ಕಲ್ಲನ್ನು ಮೇಣದಂತೆ ಕೆತ್ತಿರುವುದರಿಂದ ಮೇಣದ ಬಸದಿಗಳೂ ಎಂದು ಕರೆಯಲಾಗುತ್ತದೆ. ಮಾಲೆಗುತ್ತಿ, ಲಕುಲೀಶ, ಭೂತನಾಥ ದೇವಾಲಯಗಳು ಪ್ರಸಿದ್ಧವಾಗಿವೆ. ವಸ್ತು ಸಂಗ್ರಹಾಲಯಕ್ಕೆ ಹೋಗುವ ದಾರಿ ಸರಿಯಾಗಿಲ್ಲ.ಅನತಿ ದೂರದಲ್ಲಿರುವ ಬನಶಂಕರಿ ಜಾತ್ರೆ ದೊಡ್ಡ ಪ್ರಮಾಣದಲ್ಲಿ ತಿಂಗಳುಗಟ್ಟಲೇ ನಡೆಯುತ್ತದೆ. ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಆದರೆ, ಅಷ್ಟು ಜನರಿಗೆ ಬೇಕಾದ ಮೂಲಸೌಕರ್ಯಗಳ ಕೊರತೆ ಕಾಡುತ್ತದೆ.

ಐಹೊಳೆಯಲ್ಲಿನ ದೇವಾಲಯಗಳ ಕಲೆಯನ್ನು ವಾಸ್ತುಶಿಲ್ಪಗಳ ತೊಟ್ಟಿಲು ಎನ್ನಲಾಗುತ್ತದೆ. ದುರ್ಗಾ, ಲಾಡಖಾನ, ಸೂರ್ಯನಾರಾಯಣ, ಗೌಡರ, ಚಕ್ರ ಸೇರಿದಂತೆ 120ಕ್ಕೂ ಹೆಚ್ಚು ದೇವಾಲಯಗಳಿವೆ. ಅವುಗಳಲ್ಲಿ ಕೆಲವು ನಿರ್ವಹಣೆಯ ಕೊರತೆಯಿಂದ ಬಳಲುತ್ತಿವೆ. ಐಹೊಳೆ ಗ್ರಾಮವು ದೇವಾಲುಯಗಳ ನಡುವೆಯೇ ಇರುವುದರಿಂದ ಇವು ಪುರಾತತ್ವ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ. ಮನೆಗಳು ಬಿದ್ದರೆ, ಅನುಮತಿ ಪಡೆಯಲು ಅಲೆದಾಡಬೇಕಾಗಿದೆ. ದೇವಾಲಯಗಳ ಸಂರಕ್ಷಣೆ ದೃಷ್ಟಿಯಿಂದ ಆ ಗ್ರಾಮವನ್ನು ಸ್ಥಳಾಂತರಕ್ಕೆ ಸರ್ಕಾರದ ಪ್ರಸ್ತಾವವೊಂದು ಮುಂದಿತ್ತು. ಜಾಗವನ್ನೂ ಗುರುತಿಸಲಾಗಿತ್ತು. ಆದರೆ, ಆ ಯೋಜನೆ ಮುಂದೆ ಸಾಗಲಿಲ್ಲ.

ADVERTISEMENT

ಪಟ್ಟದಕಲ್ಲು ವಿಶ್ವ ಪರಂಪರೆ ಪಟ್ಟಿಯಲ್ಲಿದೆ. ಮಲಪ್ರಭಾ ನದಿ ತೀರದಲ್ಲಿರುವ ಹಿಂದೂ ದೇವಾಲಯ ನಿರ್ಮಾಣದ ವಾಸ್ತುಶಿಲ್ಪ ಸಂಸ್ಕೃತಿಯ ಸಂಗಮವಾಗಿದೆ. ಸಂಗಮೇಶ್ವರ, ವಿರೂಪಾಕ್ಷ, ಮಲ್ಲಿಕಾರ್ಜುನ, ಕಾಡಸಿದ್ಧೇಶ್ವರ ಸೇರಿದಂತೆ ಹಲವು ದೇವಾಲಯಗಳಿವೆ. ಉದ್ಯಾನ ನಿರ್ವಹಣೆ ಚೆನ್ನಾಗಿದೆ.

ಸಂಗಮನಾಥ ಹಾಗೂ ವಿಶ್ವಗುರು ಬಸವಣ್ಣನ ಐಕ್ಯಮಂಟಪ ಹೊಂದಿರುವ ಕೂಡಲಸಂಗಮಕ್ಕೂ ಲಕ್ಷಾಂತರ ಭಕ್ತರು ಬರುತ್ತಾರೆ. ಐಕ್ಯಮಂಟಪ ನಿರ್ಮಾಣ ಬಿಟ್ಟರೆ, ಉಳಿದ ಕೆಲಸಗಳು ಅರೆಬರೆಯಾಗಿವೆ. ಇದರ ಅಭಿವೃದ್ಧಿಗಾಗಿ ಕೂಡಲಸಂಗಮ ಪ್ರಾಧಿಕಾರ ರಚಿಸಲಾಗಿದೆ. ದೆಹಲಿಯ ಅಕ್ಷರಧಾಮ ಮಾದರಿಯಲ್ಲಿ ಅಭಿವೃದ್ಧಿಗೆ ₹139.50 ಕೋಟಿ ಬಿಡುಗಡೆ ಮಾಡಲಾಗಿದೆ. ಬಸವ ಇಂಟರ್‌ನ್ಯಾಷನಲ್‌ ಸೆಂಟರ್‌ ಕಟ್ಟಡ ಪೂರ್ಣಗೊಂಡಿಲ್ಲ. ಆರು ಛತ್ರಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಅವುಗಳಿಗೆ ಉದ್ಘಾಟನೆ ಭಾಗ್ಯ ದೊರೆತಿಲ್ಲ. ವಚನಗಳ ಮೂಲಕ ಬದುಕಿನ ಸತ್ಯ ದರ್ಶನ ಮಾಡಿದ ಅವರ ತತ್ವಗಳ ಪ್ರಚಾರದ ಬದಲು ಕಟ್ಟಡಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ.

ಮಹಾಕೂಟ, ಶಿವಯೋಗ ಮಂದಿರದಲ್ಲಿ ಮಠಾಧೀಶರಾಗಲಿರುವ ವಟುಗಳಿಗೆ ಅಧ್ಯಯನಕ್ಕೆ ವ್ಯವಸ್ಥೆ,ಚಿಕ್ಕಸಂಗಮದಲ್ಲಿ ಕೃಷ್ಣಾ ಹಾಗೂ ಘಟಪ್ರಭಾ ಸಂಗಮವಾಗಿದ್ದು, ಸಂಗಮೇಶ್ವರ ದೇವಾಲಯವಿದೆ. ಹಿನ್ನೀರಿನ ನೋಟ ಬಹಳ ಸುಂದರವಾಗಿದೆ.ತುಳಸಿಗೇರಿ, ಆಚನೂರಿನ ಆಂಜನೇಯ ದೇವಸ್ಥಾನ ಸೇರಿದಂತೆ ಹಲವು ಧಾರ್ಮಿಕ, ಪ್ರವಾಸಿ ತಾಣಗಳಿವೆ.

ಇಳಕಲ್‌ ತಾಲ್ಲೂಕಿನ ಸಿದ್ದನಕೊಳ್ಳ, ದಮ್ಮೂರ, ಬಾದಾಮಿಯ ಅಕ್ಕ–ತಂಗಿಯರ ಜಲಧಾರೆ, ಗುಳೇದಗುಡ್ಡ ಬಳಿಯ ಕೋಟೆಕಲ್‌ನ ಕಿರು ಜಲಧಾರೆಗಳನ್ನು ವೀಕ್ಷಿಸಲು ಸಾವಿರಾರು ಜನರು ಹೋಗುತ್ತಾರೆ. ಪ್ರವಾಸಿಗರಿಗೆ ಹೋಗಲು ರಸ್ತೆ ನಿರ್ಮಾಣದ ಅವಶ್ಯಕತೆ ಇದೆ.

ಪಟ್ಟದಕಲ್ಲಿನಲ್ಲಿ ಪ್ಲಾಜಾ ನಿರ್ಮಾಣ ಕಾರ್ಯ ಸಾಗಿದೆ. ಬಾದಾಮಿಯಲ್ಲಿ ತ್ರಿಸ್ಟಾರ್‌ ಹೋಟೆಲ್‌ ಆಗಬೇಕಿದೆ. ಐಹೊಳೆಯಲ್ಲಿ ಮೂಲಸೌಲಭ್ಯಗಳನ್ನು ಒದಗಿಸಲು 40 ಎಕರೆ ಭೂಮಿ ವಶಪಡಿಸಿಕೊಳ್ಳಲಾಗಿದ್ದು, ಅಲ್ಲಿ ಎಟಿಎಂ, ಪ್ರಾಥಮಿಕ ಆರೋಗ್ಯ ಕೇಂದ್ರ, ಕೆಫೆಟೇರಿಯಾ ಮುಂತಾದ ಸೌಲಭ್ಯ ಒದಗಿಸುವ ಕೆಲಸ ಆಗಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.