ADVERTISEMENT

ಬಾದಾಮಿ | ಆಟೊ ಚಾಲಕರಿಂದ ಪ್ರವಾಸಿಗರ ಸುಲಿಗೆ

ಬಾದಾಮಿ: ಚಾಲುಕ್ಯರ ಸ್ಮಾರಕ ಪ್ರದೇಶದಲ್ಲಿ ಸೌಲಭ್ಯಗಳ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2025, 4:43 IST
Last Updated 17 ಮಾರ್ಚ್ 2025, 4:43 IST
ಬಾದಾಮಿ ಮೇಣಬಸದಿ ಆವರಣದಲ್ಲಿ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಪ್ರದೇಶವು ಪರ್ಯಾಯವಾಗಿ ಆಟೊ ನಿಲ್ದಾಣವಾಗತೊಡಗಿದೆ
ಬಾದಾಮಿ ಮೇಣಬಸದಿ ಆವರಣದಲ್ಲಿ ಪ್ರವಾಸಿಗರ ವಾಹನಗಳ ಪಾರ್ಕಿಂಗ್ ಪ್ರದೇಶವು ಪರ್ಯಾಯವಾಗಿ ಆಟೊ ನಿಲ್ದಾಣವಾಗತೊಡಗಿದೆ   

ಬಾದಾಮಿ: ಚಾಲುಕ್ಯರ ಸ್ಮಾರಕಗಳನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ರಸ್ತೆ ಸಂಪರ್ಕ, ಕಾರ್ ಪಾರ್ಕಿಂಗ್, ರಕ್ಷಣೆ, ಲಗೇಜ್ ಕೊಠಡಿ, ಮೂತ್ರಾಲಯ, ಶೌಚಾಲಯ, ಸಮರ್ಪಕ ಆಟೊ ಸೇವೆ ಮತ್ತಿತರ ಸೌಲಭ್ಯಗಳು ದೊರೆಯದೇ ಪ್ರವಾಸ ಪ್ರಯಾಸವಾಗತೊಡಗಿದೆ.

ಮೇಣಬಸದಿ ಆವರಣದಲ್ಲಿ ಕಾರ್ ಪಾರ್ಕಿಂಗ್ ಸ್ಥಳವಿದ್ದರೂ ಕೆಲವು ಆಟೊ ಚಾಲಕರು ಅಂಬೇಡ್ಕರ್ ವೃತ್ತದಲ್ಲಿಯೇ ಕಾರು ನಿಲ್ಲಿಸಿ, ‘ಕಾರ್ ಪಾರ್ಕಿಂಗ್ ಭರ್ತಿಯಾಗಿದೆ, ಜಾಗ ಇಲ್ಲ. ಆಟೊದಲ್ಲೇ ಹೋಗಿ’ ಎಂದು ದುಂಬಾಲು ಬೀಳುತ್ತಿದ್ದಾರೆ.

‘ಅಂಬೇಡ್ಕರ್ ವೃತ್ತದಿಂದ ಮೇಣಬಸದಿ ಅರ್ಧ ಕಿ.ಮೀ. ದೂರವೂ ಇಲ್ಲ. ಅಲ್ಲಿಗೆ ಹೋಗಲು ಆಟೊದವರು ಪ್ರವಾಸಿಗರಿಂದ ₹500 ತೆಗೆದುಕೊಳ್ಳುತ್ತಾರೆ. ಮೇಣಸಬಸದಿಯಿಂದ ಅರ್ಧ ಕಿ.ಮೀ. ದೂರದ ಭೂತನಾಥ ದೇವಾಲಯಕ್ಕೆ ತೆರಳಲು ಕೆಲವು ಆಟೊ ಚಾಲಕರು ₹500 ಪಡೆಯುತ್ತಿದ್ದಾರೆ’ ಎಂದು ವಿಜಯಪುರದಿಂದ ಬಂದ ಪ್ರವಾಸಿ ಸುರೇಶ ಪಾಟೀಲ ಹೇಳಿದರು.

ADVERTISEMENT

ಇಲ್ಲಿನ ಆಟೊ ಚಾಲಕರಿಗೆ ಯಾವುದೇ ನಿಯಂತ್ರಣವಿಲ್ಲ, ತಮಗೆ ತಿಳಿದಂತೆ ಪ್ರವಾಸಿಗರ ಕಡೆಯಿಂದ ಹಣವನ್ನು ವಸೂಲಿ ಮಾಡುತ್ತಿದ್ದಾರೆ ಎಂಬುದು ಪ್ರವಾಸಿಗರ ಆರೋಪವಾಗಿದೆ.

‘ಮಹಾಕೂಟ, ಪಟ್ಟದಕಲ್ಲು ಮತ್ತು ಐಹೊಳೆಗೆ ಹೋಗಲು ಆಟೊ ಮತ್ತು ಕಾರಿನ ಬಾಡಿಗೆ ನಿಗದಿ ಇಲ್ಲ. ಸಂಬಂಧಿಸಿದ ಇಲಾಖೆ ದರ ನಿಗದಿ ಮಾಡಿ ಹೋಟೆಲ್, ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್, ಸ್ಮಾರಕಗಳ ಸಮೀಪ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಫಲಕವನ್ನು ಅಳವಡಿಸಬೇಕಿದೆ. ಕಾರ್ ಮತ್ತು ಆಟೊ ಚಾಲಕರಿಗೂ ತಿಳಿಸಬೇಕಿದೆ’ ಎಂದು ನಿಸರ್ಗ ಬಳಗದ ಅಧ್ಯಕ್ಷ ಎಸ್.ಎಚ್. ವಾಸನ ಹೇಳಿದರು.

‘ಒಬ್ಬಿಬ್ಬರು ಪ್ರವಾಸಿಗರಿದ್ದಾಗ ಆಟೊದಲ್ಲಿ ವಿವಿಧ ತಾಣಗಳಿಗೆ ಕರೆದೊಯ್ಯುತ್ತಾರೆ. ಆ ಪ್ರವಾಸಿಗರ ರಕ್ಷಣೆ ಜವಾಬ್ದಾರಿ ಯಾರದು. ಪ್ರವಾಸಿಗರನ್ನು ಕರೆದೊಯ್ಯುವ ಮುನ್ನ ವಾಹನ ಚಾಲಕರು ಪೊಲೀಸ್ ಇಲಾಖೆಗೆ ತಿಳಿಸಬೇಕು’ ಎಂದು ಅವರು ಸಲಹೆ ನೀಡುತ್ತಾರೆ.

ಮೇಣಬಸದಿ ಮತ್ತು ಭೂತನಾಥ ದೇವಾಲಯ ಸ್ಮಾರಕಗಳ ಸಂಪರ್ಕಕ್ಕಾಗಿ ಪ್ರವಾಸಿಗರಿಗೆ ಸೂಕ್ತ ಸೌಲಭ್ಯ ಕಲ್ಪಿಸಲು ಪ್ರವಾಸೋದ್ಯಮ ಇಲಾಖೆಯಿಂದ ಪಾರ್ಕಿಂಗ್ ಪ್ಲಾಜಾ ನಿರ್ಮಾಣ ಮತ್ತು ಹೊಂಡದ ದಂಡೆಯ 96 ಮನೆಗಳ ಸ್ಥಳಾಂತರದ ಬಳಿಕ ಅನುಕೂಲವಾಗಲಿದೆ. ಈ ಎರಡೂ ಕಾಮಗಾರಿ ಸರ್ಕಾರ ಕೈಗೊಳ್ಳಬೇಕಿದೆ.

ಮೇಣಬಸದಿ ಆವರಣದಲ್ಲಿ ಪ್ರವಾಸಿಗರನ್ನು ಕರೆತರುವ ಆಟೊಗಳಿಗೆ ಮಾತ್ರ ಅವಕಾಶವಿದೆ. ಖಾಲಿ ಆಟೊಗಳನ್ನು ನಿಲ್ಲಿಸದಂತೆ ಕ್ರಮವನ್ನು ಕೈಗೊಳ್ಳಲಾಗುವುದು.
ಅಜೇಯ ಜನಾರ್ದನ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಸಹಾಯಕ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.