ADVERTISEMENT

ಬಾಗಲಕೋಟೆ | ಸಂಚಾರ ನಿಯಮ ಉಲ್ಲಂಘನೆ: ದಂಡ ವಸೂಲಿ ಹೆಚ್ಚಳ

ಪಾರ್ಕಿಂಗ್‌, ಫುಟ್‌ಪಾತ್ ಸೇರಿದಂತೆ ಮೌಲಸೌಲಭ್ಯಗಳ ಕೊರತೆ

ಬಸವರಾಜ ಹವಾಲ್ದಾರ
Published 6 ಮೇ 2025, 6:11 IST
Last Updated 6 ಮೇ 2025, 6:11 IST
ಬಾಗಲಕೋಟೆಯ ನವನಗರದಲ್ಲಿ ಫುಟ್‌ಪಾತ್ ಜಾಗದಲ್ಲಿಯೇ ವಾಹನಗಳನ್ನು ನಿಲ್ಲಿಸಿರುವುದು
ಬಾಗಲಕೋಟೆಯ ನವನಗರದಲ್ಲಿ ಫುಟ್‌ಪಾತ್ ಜಾಗದಲ್ಲಿಯೇ ವಾಹನಗಳನ್ನು ನಿಲ್ಲಿಸಿರುವುದು   

ಬಾಗಲಕೋಟೆ: ನಗರದಲ್ಲಿ ಸಂಚಾರಿ ಪೊಲೀಸರು ಸಂಚಾರಿ ನಿಯಮಗಳ ಉಲ್ಲಂಘನೆಗಾಗಿ ದಂಡ ವಸೂಲಿ ಮಾಡುತ್ತಿದ್ದಾರೆ. 2023ರಲ್ಲಿ ₹1.28 ಕೋಟಿ ದಂಡ ವಸೂಲಿ ಮಾಡಿದ್ದರೆ, 2024ರಲ್ಲಿ ₹3.62 ಕೋಟಿ ದಂಡ ವಸೂಲಿ ಮಾಡಿದ್ದಾರೆ. ಆದರೆ, ವಾಹನ ಸವಾರರು, ಪಾದಚಾರಿಗಳಿಗೆ ಸಿಬೇಕಾದ ಸೌಲಭ್ಯಗಳತ್ತ ಗಮನ ಹರಿಸುತ್ತಿಲ್ಲ.

2023ರಲ್ಲಿ ಹೆಲ್ಮೆಟ್‌ ಹಾಕದ 3,051 ವಾಹನ ಸವಾರರಿಗೆ ₹26 ಲಕ್ಷ ದಂಡ ವಿಧಿಸಲಾಗಿದೆ. 2024ರಲ್ಲಿ ಹೆಲ್ಮೆಟ್‌ ಹಾಕದ 22,556 ವಾಹನ ಸವಾರರಿಗೆ ₹1.12 ಕೋಟಿ ದಂಡ ಹಾಕಲಾಗಿದೆ. ಈ ವರ್ಷ ಮಾರ್ಚ್ ಅಂತ್ಯದವರೆಗೆ ಈಗಾಗಲೇ 5,407 ಜನ ಹೆಲ್ಮೆಟ್ ಹಾಕದವರಿಗೆ ₹27 ಲಕ್ಷ ದಂಡ ವಿಧಿಸಲಾಗಿದೆ.

ತ್ರಿಚಕ್ರ ವಾಹನಗಳಲ್ಲಿ ನಿಗದಿಗಿಂತ ಹೆಚ್ಚು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿರುವುದಕ್ಕೆ ಹೆಚ್ಚಿನ ದಂಡ ವಿಧಿಸಲಾಗಿದೆ. ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ 2023ರಲ್ಲಿ 7,218 ವಾಹನ ಚಾಲಕರಿಗೆ ₹14.79 ಲಕ್ಷ ದಂಡ ಹಾಕಲಾಗಿದೆ.

ADVERTISEMENT

ನಾಲ್ಕು ಚಕ್ರ ವಾಹನಗಳಲ್ಲಿಯೂ ಹೆಚ್ಚಿನ ಪ್ರಯಾಣಿಕರನ್ನು ಕರೆದುಕೊಂಡು ಹೋಗಿದ್ದಕ್ಕಾಗಿ 2023ರಲ್ಲಿ 13 ಸಾವಿರ ಪ್ರಕರಣ ದಾಖಲಿಸಿ, ₹26.57 ಲಕ್ಷ ದಂಡ, 2024ರಲ್ಲಿ 32 ಸಾವಿರ ಪ್ರಕರಣ ದಾಖಲಿಸಿ ₹76.98 ಲಕ್ಷ ದಂಡ ವಿಧಿಸಲಾಗಿದೆ.

2023ರಲ್ಲಿ ಕೇವಲ 10 ಪ್ರಕರಣಗಳಲ್ಲಿ ಟ್ರ್ಯಾಕ್ಟರ್ ಚಾಲಕರ ವಿರುದ್ಧ ವಿವಿಧ ಪ್ರಕರಣ ದಾಖಲಿಸಿ, ₹24 ಸಾವಿರ ದಂಡ ವಿಧಿಸಲಾಗಿದೆ. 2024ರಲ್ಲಿ 70 ಪ್ರಕರಣಗಳಲ್ಲಿ ₹67 ಸಾವಿರ ದಂಡ ಹಾಕಲಾಗಿದೆ. 

2023ರಲ್ಲಿ ಲಾರಿ/ಬಸ್‌ಗಳ ವಿರುದ್ಧ 1,068 ಪ್ರಕರಣಗಳಲ್ಲಿ ₹39 ಲಕ್ಷ ದಂಡ, 2024ರಲ್ಲಿ 3,470 ಪ್ರಕರಣಗಳಲ್ಲಿ ₹59.96 ಲಕ್ಷ ದಂಡ ವಿಧಿಸಲಾಗಿದೆ.

ಜಾಗೃತಿ ಕೊರತೆ: ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಅರಿವಿನ ಕೊರತೆ ಇದೆ. ಅರಿವಿದ್ದವರೂ ಅವುಗಳ ಪಾಲನೆ ಮಾಡುತ್ತಿಲ್ಲ. ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆಯುತ್ತಿದೆಯಾದರೂ, ಅದರ ಪ್ರಮಾಣ ಹೆಚ್ಚಿಸಬೇಕು.

ಕಟ್ಟಡಗಳಲ್ಲಿಲ್ಲ ಪಾರ್ಕಿಂಗ್‌ ಸೌಲಭ್ಯ: ನವನಗರದಲ್ಲಿ ಹೊಸ, ಹೊಸ ವಾಣಿಜ್ಯ ಮಳಿಗೆಗಳು ತಲೆ ಎತ್ತುತ್ತಿವೆ. ಬಹುತೇಕ ಕಟ್ಟಡಗಳಲ್ಲಿ ಸೂಕ್ತವಾದ ಪಾರ್ಕಿಂಗ್‌ ವ್ಯವಸ್ಥೆಯಿಲ್ಲ. ಪರಿಣಾಮ ವಾಹನಗಳನ್ನು ರಸ್ತೆ ಬದಿಯಲ್ಲಿಯೇ ನಿಲ್ಲಿಸಲಾಗುತ್ತಿದೆ. ಇದರಿಂದ ಸಂಚಾರ ವ್ಯವಸ್ಥೆ ಅಸ್ತವ್ಯಸ್ತವಾಗುತ್ತಿದೆ. ಪಾರ್ಕಿಂಗ್‌ ಸೌಲಭ್ಯದ ಬಗ್ಗೆ ಗಮನ ಹರಿಸಬೇಕಾದ ಕಂದಾಯ, ಪೊಲೀಸ್ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ದೂರುತ್ತಾರೆ ರಾಜಶೇಖರ ಮಡಿವಾಳರ.

ನವನಗರದ ಬಹುತೇಕ ಕಡೆಗಳಲ್ಲಿ ಫುಟ್‌ಪಾತ್ ನಿರ್ಮಿಸಲಾಗಿತ್ತು. ಈಗ ಅದನ್ನು ರಸ್ತೆಗೆ ಸಮಗೊಳಿಸಿ ಫುಟ್‌ಪಾತ್ ಇಲ್ಲದಂತೆ ಮಾಡಲಾಗಿದೆ. ಇದರಿಂದಾಗಿ ಸಾರ್ವಜನಿಕರು ರಸ್ತೆಯಲ್ಲಿಯೇ ನಡೆದುಕೊಂಡು ಹೋಗುವಂತಾಗಿದೆ. ಇದರಿಂದಲೂ ಅಪಘಾತಗಳ ಸಂಖ್ಯೆ ಹೆಚ್ಚಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.