ಬಾದಾಮಿ: ನಗರ ಮತ್ತು ಗ್ರಾಮೀಣ ಪ್ರದೇಶಗಳಿಗೆ ಹೋಗುವ ವಿದ್ಯಾರ್ಥಿಗಳು ನಿತ್ಯ ಬಸ್‌ಗಳಿಗೆ ಜೋತು ಬಿದ್ದು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದುಕೊಂಡು ಪ್ರಯಾಣಿಸುತ್ತಿರುವ ದೃಶ್ಯ ಇಲ್ಲಿ ಸರ್ವೆ ಸಾಮಾನ್ಯವಾಗಿದೆ.
ಈಗಷ್ಟೇ ಶಾಲಾ ಕಾಲೇಜುಗಳು ಆರಂಭವಾಗಿವೆ. ಬಸ್ ನಿಲ್ದಾಣಗಳು ಪ್ರಯಾಣಿಕರಿಂದ ಮತ್ತು ಶಾಲಾ ವಿದ್ಯಾರ್ಥಿಗಳಿಂದ ಭರ್ತಿಯಾಗಿವೆ. ಬಸ್ ಹತ್ತಲು ಓಟದ ಸ್ಪರ್ಧೆಯಂತೆ ಅತ್ತಿಂದಿತ್ತ ಓಡುವುದು ಮತ್ತು ಬಸ್ಸುಗಳಿಗೆ ಮುತ್ತಿಗೆ ಹಾಕುವ ದೃಶ್ಯಗಳು ಸಾಮಾನ್ಯವಾಗಿದೆ.
ಬಾಗಲಕೋಟೆ, ಗುಡೂರ, ಅಮೀನಗಡ, ಕುಳಗೇರಿ, ಗಜೇಂದ್ರಗಡ, ಕೆರೂರ ಮತ್ತು ಗದಗ ಕಡೆಗೆ ಸಂಚರಿಸುವ ಬಸ್ಸುಗಳು ನಿತ್ಯ ಭರ್ತಿಯಾಗಿ ಸಂಚರಿಸುತ್ತವೆ. ವಿದ್ಯಾರ್ಥಿಗಳು ಬಸ್ ಬಾಗಿಲಿನಲ್ಲಿ ನಿಂತು ಪ್ರಾಣಾಪಾಯದಿಂದ ಸಂಚರಿಸುವುದನ್ನು ಕಾಣಬಹುದು. ಚಿಕ್ಕಮುಚ್ಚಳಗುಡ್ಡ ಸರ್ಕಾರಿ ಆದರ್ಶ ಶಾಲೆಯಲ್ಲಿ 500 ಕ್ಕೂ ಅಧಿಕ ವಿದ್ಯಾರ್ಥಿಗಳು ಬಸ್ ಅವಲಂಬಿಸಿದ್ದಾರೆ. ಬಾದಾಮಿ, ಬೇಲೂರ, ಕೆರೂರ, ಕಟಗೇರಿ, ಕುಳಗೇರಿ, ಪಟ್ಟದಕಲ್ಲು ಮತ್ತು ಗುಳೇದಗುಡ್ಡ ವಿವಿಧ ಗ್ರಾಮಗಳಿಂದ ಶಾಲೆಗೆ ಬರುವರು.
ಬಾದಾಮಿ ಪಟ್ಟಣದಿಂದ ಮುನ್ನೂರಕ್ಕೂ ಅಧಿಕ ಮಕ್ಕಳು ಆದರ್ಶ ಶಾಲೆಗೆ ಹೋಗುವರು. ಸಾರಿಗೆ ಸಂಸ್ಥೆಯಿಂದ ಇಲ್ಲಿಗೆ ಒಂದೇ ವಿಶೇಷ ಬಸ್ ಹೋಗುತ್ತಿದೆ. ವಿದ್ಯಾರ್ಥಿಗಳು ನಾ ಮುಂದೆ ನೀ ಮುಂದೆ ಎಂದು ಹತ್ತಲು ನೂಕು ನುಗ್ಗಲು ಉಂಟಾಗಿ ಬೀಳುವರು. ಈಚೆಗೆ ಮಕ್ಕಳು ಬಸ್ಸಿನ ಚಕ್ರದ ಕೆಳಗೆ ಬಿದ್ದು ಗಾಯಗೊಂಡ ಘಟನೆಯನ್ನು ನೆನಪಿಸಬಹುದಾಗಿದೆ.
ಮಹಿಳೆಯರಿಗೆ ಉಚಿತ ಬಸ್ ಪಾಸ್ ಇರುವುದರಿಂದ ಮಂಗಳವಾರ ಮತ್ತು ಶುಕ್ರವಾರ ಬನಶಂಕರಿ ದೇವಾಲಯಕ್ಕೆ ಹುಬ್ಬಳ್ಳಿ ,ಇಳಕಲ್ ಮತ್ತು ಗದಗದಿಂದ ಬಸ್ಸುಗಳು ಭರ್ತಿಯಾಗಿ ಬರುತ್ತವೆ. ಗ್ರಾಮೀಣ ಪ್ರದೇಶದ ಮಹಿಳೆಯರೂ ಸಹ ಬಸ್ಸಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಚರಿಸುವರು. ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಅವಕಾಶವೇ ಇಲ್ಲದಂತಾಗಿದೆ ಎನ್ನುತ್ತಾರೆ ವಿದ್ಯಾರ್ಥಿಗಳು.
ಗದಗ-ಬಾಗಲಕೋಟೆ ಮತ್ತು ಬಾಗಲಕೋಟೆ-ಗದಗ ಬಸ್ ಮುಚ್ಚಳಗುಡ್ಡ ಕ್ರಾಸಿನಲ್ಲಿ ನಿಲ್ಲಿಸಲು ಆದೇಶವಿದ್ದರೂ ಚಾಲಕರು ನಿಲ್ಲಿಸುವುದಿಲ್ಲ ಎಂದು ಆದರ್ಶ ಶಾಲೆಯ ಶಿಕ್ಷಕರು ಮತ್ತು ಮಕ್ಕಳು ದೂರುತ್ತಾರೆ.
ಚಿಕ್ಕಮುಚ್ಚಳಗುಡ್ಡ ಕ್ರಾಸ್ ಸಮೀಪ ಸರ್ಕಾರಿ ಆದರ್ಶ ಶಾಲೆ, ಕಿತ್ತೂರ ಚನ್ನಮ್ಮ ಶಾಲೆ, ಮೊರಾರ್ಜಿ ಶಾಲೆಗಳು ಮತ್ತು ಮೆಟ್ರಕ್ ನಂತರದ ಮೂರು ವಿದ್ಯಾರ್ಥಿನಿಯರ ವಸತಿ ನಿಲಯಗಳಿವೆ. ನಿತ್ಯ ಸಾವಿರಾರು ವಿದ್ಯಾರ್ಥಿಯರು ಬಸ್ಸಿಗೆ ಸಂಚರಿಸುವುರು. ಆದರೆ ಇಲ್ಲಿ ಗದಗ-ಬಾಗಲಕೋಟೆ ಬಸ್ಸುಗಳು ನಿಲುಗಡೆಯಾಗುವುದಿಲ್ಲ. ಕಾಲೇಜಿಗೆ ಹೋಗುವುದು ಮತ್ತು ವಸತಿ ನಿಲಯಕ್ಕೆ ಬರುವುದು ತೊಂದರೆಯಾಗಿದೆ. ಗದಗ-ಬಾಗಲಕೋಟೆ ಮತ್ತು ಬಾಗಲಕೋಟೆ-ಗದಗ ಬಸ್ಸು ನಿಲುಗಡೆ ಮಾಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.
‘ಸರ್ಕಾರಿ ಆದರ್ಶ ಶಾಲೆಗೆ ಬಸ್ ಸೌಕರ್ಯವನ್ನು ಕಲ್ಪಿಸಬೇಕು’ ಎಂದು ಚಿಕ್ಕಮುಚ್ಚಳಗುಡ್ಡ ಆದರ್ಶ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಶಂಕರರಾವ್ ಕುಲಕರ್ಣಿ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕರಿಗೆ ಆಗ್ರಹಿಸಿದ್ದಾರೆ.
ಶಾಲೆಗೆ ಬಸ್ ಸೌಲಭ್ಯಕ್ಕೆ ಆಗ್ರಹ ಗದಗ- ಬಾಗಲಕೋಟೆ ಬಸ್ ನಿಲುಗಡೆಗೆ ಕ್ರಮ ಭರವಸೆ ಬಾಗಲಕೋಟೆಗೆ ಮತ್ತೆ 4 ಹೊಸ ಬಸ್ ಸೌಲಭ್ಯ
‘ ಆದರ್ಶ ಶಾಲೆಗೆ ಈಗ ಒಂದು ವಿಶೇಷ ಬಸ್ ಹೋಗುತ್ತಿದೆ. ಕೆರೂರ- ಬಾದಾಮಿ ಬಸ್ ವಾಯಾ ಆದರ್ಶ ಶಾಲೆಗೆ ಬರುವಂತೆ ಮತ್ತು ಗದಗ-ಬಾಗಲಕೋಟೆ ಬಾಗಲಕೋಟೆ-ಗದಗ ಬಸ್ ಚಿಕ್ಕಮುಚ್ಚಳಗುಡ್ಡ ಕ್ರಾಸಿನಲ್ಲಿ ಕಡ್ಡಾಯವಾಗಿ ನಿಲುಗಡೆ ಮಾಡುವಂತೆ ಚಾಲಕ ಮತ್ತು ನಿರ್ವಾಹಕರಿಗೆ ಸೂಚಿಸಲಾಗುವುದುಅಶೋಕ ಕೋರಿ ಸಾರಿಗೆ ಸಂಸ್ಥೆಯ ಘಟಕ ವ್ಯವಸ್ಥಾಪಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.