ADVERTISEMENT

ನಗರಸಭೆಯು ಜನ ಸ್ನೇಹಿಯಾಗಿರಲಿ: ಅಧಿಕಾರಿಗಳಿಗೆ ಶಾಸಕ ಸಿದ್ದು ಸವದಿ ಸೂಚನೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 4:31 IST
Last Updated 8 ನವೆಂಬರ್ 2025, 4:31 IST
ರಬಕವಿ ಬನಹಟ್ಟಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ ಮಾತನಾಡಿದರು
ರಬಕವಿ ಬನಹಟ್ಟಿ ನಗರಸಭೆಯ ಸಾಮಾನ್ಯ ಸಭೆಯಲ್ಲಿ ನಗರಸಭೆಯ ಅಧ್ಯಕ್ಷೆ ವಿದ್ಯಾ ಧಬಾಡಿ ಮಾತನಾಡಿದರು   

ರಬಕವಿ ಬನಹಟ್ಟಿ: ನಗರಸಭೆಯಿಂದ ಉತಾರೆಗಳನ್ನು ಮತ್ತು ಇನ್ನಿತರ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾರ್ವಜನಿಕರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ನಗರಸಭೆಯ ಮೇಲೆ ಸಾಕಷ್ಟು ಆರೋಪಗಳಿವೆ. ಮುಂದಿನ ದಿನಗಳಲ್ಲಿ ಈ ರೀತಿಯಾಗದಂತೆ ಅಧಿಕಾರಿಗಳು ಗಮನ ನೀಡಬೇಕು. ನಗರಸಭೆಯು ಜನಸ್ನೇಹಿಯಾಗಿರಬೇಕು ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ರಬಕವಿ ಬನಹಟ್ಟಿ ನಗರಸಭೆಯ ಸಭಾಭವನದಲ್ಲಿ ಗುರುವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.

ಎಸ್‌ಎ‍ಫ್‌ಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ ಹಾಗೂ 15ನೇ ಹಣಕಾಸು ಯೋಜನೆಯಲ್ಲಿ ಉಳಿತಾಯವಾಗಿರುವ ₹62.80 ಲಕ್ಷ ಹಣದ ಬಳಕೆಗೆ ಸಭೆಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಯಾಯಿತು. ನಂತರ ಉಳಿತಾಯದ ಮೊತ್ತವನ್ನು ನಗರಸಭೆಯ 31 ವಾರ್ಡ್ ಗಳಿಗೂ ಬಳಕೆ ಮಾಡುವಂತೆ ನಿರ್ಧಾರ ಕೈಗೊಳ್ಳಲಾಯಿತು.

ADVERTISEMENT

ನಗರಸಭೆಯ ಪರವಾಣಿಗೆ ಇಲ್ಲದೆ ನಗರಸಭೆಯ ವ್ಯಾಪ್ತಿಯಲ್ಲಿ 250ಕ್ಕೂ ಹೆಚ್ಚು ಅಂಗಡಿಗಳು ಕಾರ್ಯ ಮಾಡುತ್ತಿವೆ. ಇವರು ನಗರಸಭೆಯಿಂದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇದರಿಂದ ನಗರಸಭೆಗೆ ಸಾಕಷ್ಟು ಹಾನಿಯಾಗುತ್ತಿದೆ ಎಂದು ಕಾಂಗ್ರೆಸ್ ಸದಸ್ಯ ಬಸವರಾಜ ಗುಡೋಡಗಿ ತಿಳಿಸಿದರು.

ರಬಕವಿ ಬನಹಟ್ಟಿ ನಗರಸಭೆಯ ತೆರಿಗೆ ವಸೂಲಾತಿ ಶೂನ್ಯವಾಗಿದ್ದು, ನಗರಸಭೆಯ ವ್ಯಾಪ್ತಿಯಲ್ಲಿ ಇನ್ನೂ ಸಾಕಷ್ಟು ಶ್ರೀಮಂತರು ತೆರಿಗೆಯನ್ನು ಪಾವತಿಸಿಲ್ಲ. ಅಂಥವರಿಗೆ ನೋಟಿಸ್ ನೀಡುವಂತೆ ಸೂಚನೆ ನೀಡಲಾಯಿತು. 

ಸಿಬ್ಬಂದಿ ಕೊರತೆ: ನಗರಸಭೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಕಾರ್ಯಗಳು ವಿಳಂಬವಾಗುತ್ತಿವೆ. ಮುಖ್ಯವಾಗಿ ನಗರಸಭೆಗೆ ಬೇಕಾಗಿರುವ ಎಂಜಿನಿಯರ್ ಇಲ್ಲದೆ ಇರುವುದರಿಂದ ತಾಂತ್ರಿಕ ಕಾರ್ಯಗಳು ವಿಳಂಬವಾಗುತ್ತಿವೆ ಎಂದು ಸದಸ್ಯರು ತಿಳಿಸಿದರು.

ನಗರಸಭೆಯಿಂದ ಖರೀದಿ ಮಾಡಲಾದ ಹಿತಾಚಿ ವಾಹನ ಬಳೆಯಾಗದೆ ಇರುವುದರ ಬಗ್ಗೆ ಶಾಸಕ ಸಿದ್ದು ಸವದಿ ಬೇಸರ ವ್ಯಕ್ತ ಪಡಿಸಿದರು.

ಶಾಸಕ ಸಿದ್ದು ಸವದಿ ಮಾತನಾಡಿ, ರಬಕವಿ ಬನಹಟ್ಟಿ ನಗರಸಭೆಗೆ ಖಾಯಂ ಎಂಜಿನಿಯರ್‌ ನೀಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆಯಲು ತಿಳಿಸಿದರು. ತಾವು ಕೂಡಾ ಜಿಲ್ಲಾಧಿಕಾರಿ ಜೊತೆಗೆ ಚರ್ಚೆ ಮಾಡುವುದಾಗಿ ತಿಳಿಸಿದರು.

ಸಭೆಯಲ್ಲಿ ಹಲವಾರು ವಿಷಯಗಳಿಗೆ ದೃಢೀಕರಣವನ್ನು ನೀಡುವುದರ ಜೊತೆಗೆ ವಿವಿಧ ಯೋಜನೆಗಳಿಗೆ ಅನುಮತಿಯನ್ನು ಕೂಡಾ ನೀಡಲಾಯಿತು.

ಬನಹಟ್ಟಿ ನಗರದ ಎಸ್ ಬಿ ಐ ಮುಂಭಾಗದಲ್ಲಿರುವ ವೃತ್ತಕ್ಕೆ ಜೇಡರ ದಾಸಿಮಯ್ಯ ನಾಮಕರಣ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ಯಲ್ಲಪ್ಪ ಕಟಗಿ, ಶಿವಾನಂದ ಬುದ್ನಿ, ಅರುಣ ಬುದ್ನಿ, ಸಂಜಯ ತೆಗ್ಗಿ ಯುನಿಸ್ ಚೌಗಲಾ, ಪ್ರಭಾಕರ ಮುಳೆದ, ಗೌರಿ ಮಿಳ್ಳಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ನಗರಸಭೆಯ ಸದಸ್ಯರು ಇಂಧೋರ ನಗರದ ಅಧ್ಯಯನ ಪ್ರವಾಸದ ಪ್ರಮುಖ ಮಾಹಿತಿಗಳನ್ನು ಸಭೆಯಲ್ಲಿ ಹಂಚಿಕೊಂಡರು.

ಉಪಾಧ್ಯಕ್ಷೆ ದೀಪಾ ಗಾಡಿವಡ್ಡರ, ಪೌರಾಯುಕ್ತ ರಮೇಶ ಜಾಧವ, ಬಾಬುರಾವ ಕಮತಗಿ, ಸುನೀಲ ಬಬಲಾದಿ, ಮುಖೇಶ ಬನಹಟ್ಟಿ, ಶೋಭಾ ಹೊಸಮನಿ, ಶಾರೂಕಖಾನ ಖಲೀಫಾ, ಮಹಾವೀರ ದೈಗೊಂಡ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.