ADVERTISEMENT

ವೀರಶೈವ ಲಿಂಗಾಯತ ಸಮಾನತೆಯ ಧರ್ಮ: ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ

ಚರ‍‍ಪಟ್ಟಾಧಿಕಾರಿ ಮಹೋತ್ಸವದಲ್ಲಿ ಧಾರ್ಮಿಕ ಚಿಂತನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 7:08 IST
Last Updated 7 ಫೆಬ್ರುವರಿ 2026, 7:08 IST
ಬಾಗಲಕೋಟೆಯಲ್ಲಿ ಶುಕ್ರವಾರ ಚರಪಟ್ಟಾಧಿಕಾರಿ ಮಹೋತ್ಸವ ಅಂಗವಾಗಿ ನಡೆದ ಧರ್ಮ ತತ್ವ ಚಿಂತನ ಕಾರ್ಯಕ್ರಮದಲ್ಲಿ ಹಾನಗಲ್‌ ಕುಮಾರೇಶ್ವರರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು
ಬಾಗಲಕೋಟೆಯಲ್ಲಿ ಶುಕ್ರವಾರ ಚರಪಟ್ಟಾಧಿಕಾರಿ ಮಹೋತ್ಸವ ಅಂಗವಾಗಿ ನಡೆದ ಧರ್ಮ ತತ್ವ ಚಿಂತನ ಕಾರ್ಯಕ್ರಮದಲ್ಲಿ ಹಾನಗಲ್‌ ಕುಮಾರೇಶ್ವರರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು   

ಬಾಗಲಕೋಟೆ: ಶಿಕ್ಷಣ, ದಾಸೋಹ, ಉದ್ಯೋಗ ನೀಡುವ ಮೂಲಕ ಎಲ್ಲರ ಪ್ರಗತಿಗೆ ವೀರಶೈವ ಲಿಂಗಾಯತ ಸಮಾಜ ಕಾರಣವಾಗಿದೆ ಎಂದು ಸವದತ್ತಿ ಮೂಲಿಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ನಿರಂಜನ ಚರಪಟ್ಟಾಧಿಕಾರ ಮಹೋತ್ಸವ ಅಂಗವಾಗಿ ಚರಂತಿಮಠದ ಆವರಣದಲ್ಲಿ ಶುಕ್ರವಾರ ನಡೆದ ಧರ್ಮತತ್ವ ಚಿಂತನೆ ಸಮಾರಂಭದಲ್ಲಿ ‘ಷಟಸ್ಥಲ’ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಸ್ವತಂತ್ರ ವಿಚಾರಗಳಿಗೆ ಅವಕಾಶ ಕೊಟ್ಟಿದೆ. ವ್ಯಕ್ತಿಯ ವಿಕಾಸ, ಆತ್ಮಾವಲೋಕನ ಸಹಾಕರ, ಸಾಮಾಜಿಕ ಚಿಂತನೆಯ ಮೌಲ್ಯಗಳನ್ನು ಹೊಂದಿರುವ, ಸರ್ವಧರ್ಮಕ್ಕೂ ಸಾರ್ವತ್ರಿಕವಾದ ತತ್ವಗಳನ್ನು ಒಳಗೊಂಡ, ಸ್ತ್ರೀಪರ ಚಿಂತನೆ ಮತ್ತು ಸಮಾನತೆ ಬೋಧಿಸುವ ಧರ್ಮವು ಶ್ರೇಷ್ಠವಾಗಿದೆ ಎಂದರು.

ಇಂತಹ ಮೌಲ್ಯಗಳು ವೀರಶೈವ ಪಂರಂಪರೆಯಲ್ಲಿದ್ದು, ಅವುಗಳನ್ನು ಉಳಿಸಿ, ಬೆ‌ಳೆಸಬೇಕು. ವೀರಶೈವದಲ್ಲಿ ಸಮಯನ್ವತೆಯಲ್ಲಿ ಅಷ್ಟಾಚಾರ, ಪಂಚಾಚಾರ, ಷಟಸ್ಥಲಗಳು ಪ್ರಮುಖ ಚಿಂತನೆಗಳಾಗಿವೆ. ಲೌಕಿಕ ಭಕ್ತಿಯಿಂದ ಮುಕ್ತರಾಗಿ ಬಯಕೆಗಳನ್ನು ತೊರೆದು ದೇವರಿಗೆ ಶರಣಾಗುವುದು ನೈಜ ಭಕ್ತಿ ಎಂದು ಹೇಳಿದರು.

ADVERTISEMENT

ಧರ್ಮ ಲಾಂಛನ ಸ್ವೀಕಾರ ಮತ್ತು ಲಿಂಗದ ಮೇಲೆ ಅಚಲ ನಿಷ್ಠೆ ಹೊಂದಬೇಕು. ಮನಸ್ಸಿನ ಪ್ರಸನ್ನತೆ ಪಡೆದುಕೊಳ್ಳುವುದರ ಮೂಲಕ ಲಿಂಗವನ್ನು ಪ್ರಾಣವನ್ನಾಗಿಸಿ ಅಂಗಲಿಂಗ ಸಾಮರಸ್ಯ ಸಾಧಿಸುವುದು ಧರ್ಮ ಸಾಧಕನ ಮಾರ್ಗವಾಗಿದೆ ಎಂದರು.

ಬೆಳಗಾವಿ ಕಾರಂಜಿಮಠದ ಶಿವಯೋಗಿ ದೇವರು ಮಾತನಾಡಿ, ಪಂಚಾಚಾರಗಳನ್ನು ಅರಿತು ನಡೆಯುವುದು ಭಕ್ತಿಯ ಪಥವಾಗಿದೆ. ಭಕ್ತಿಯಿಂದ ಮುಕ್ತಿ ಸಾಧ್ಯ. ಲಿಂಗಾಚಾರ, ಸದಾಚಾರ, ಶಿವಾಚಾರ, ಗಣಾಚಾರ, ಮೃತ್ಯಾಚಾರಗಳನ್ನು ಮೈಗೂಡಿಸಿಕೊಂಡರೆ ಭಕ್ತನಾಗಲು ಯೋಗ್ಯರಾಗುತ್ತಾರೆ. ನಮ್ಮೊಳಗಿನ ಜ್ಞಾನವೇ ಲಿಂಗವಾಗಿದ್ದು ಅದರೊಳಗೆ ಅಂತರ್ಮುಖಿಯಾಗುವುದು ಲಿಂಗಾಚಾರವಾಗಿದೆ. ಪ್ರಾಮಾಣಿಕ ದುಡಿಮೆ ಮತ್ತು ತನು, ಮನ, ಧನದ ಸಮರ್ಪಣೆ ಸದಾಚಾರವಾಗಿದೆ ಎಂದು ಹೇಳಿದರು.

ಶಿವಯೋಗಮಂದಿರ ಸಂಸ್ಥೆ ವ್ಯವಸ್ಥಾಪಕ ಜಿ.ಕೆ ಹಿರೇಮಠ ಮಾತನಾಡಿ ಕುರಿತು ಉಪನ್ಯಾಸ ನೀಡಿ ಆಂತರಿಕ ಸದ್ಗುಣಗಳು ಹೊರಹೋಗದಂತೆ ಮತ್ತು ಬಾಹ್ಯ ದುರ್ಗುಣಗಳು ಒಳಗೆ ಬಾರದಂತೆ ತಡೆಯಲು ಅಷ್ಟಾವರಣಗಳಿವೆ. ಮಾನವನನ್ನು ಶರಣನನ್ನಾಗಿಸುವ ಮೂಲಕ ವಿಶ್ವ ಮಾನವ ಪ್ರಜ್ಞೆ ಜಾಗೃತಗೊಳಿಸುತ್ತವೆ. ಅಷ್ಟಾವರಣಗಳು ಸಂಸ್ಕೃತಿಯ ಮೂಲ ಬೇರುಗಳಾಗಿವೆ ಎಂದರು.

ಮುಖ್ಯ ಅತಿಥಿಯಾಗಿದ್ದ ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಹಸಿದವರಿಗೆ ಅನ್ನ ನೀಡುವುದೇ ನಿಜವಾದ ಧರ್ಮ. ಎಲ್ಲರೂ ಐಕ್ಯತೆಯಿಂದ ಬಾಳಲಿ ಎಂದರು.

ಮಾಜಿ ಸಚಿವ ಅಜಯಕುಮಾರ ಸರನಾಯಕ ಮಾತನಾಡಿದರು. ಭೋವಿ ಗುರುಪೀಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಚರಂತಿಮಠದ ಪ್ರಭಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮೀಜಿ, ಅನವಾಲದ ಕೈಲಾಸಪತಿ ಸ್ವಾಮೀಜಿ, ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ, ಜಿ.ಎನ್.ಪಾಟೀಲ, ಮಹೇಶ ಅಥಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.