ಮಾತೆ ಗಂಗಾದೇವಿ
ಕೂಡಲಸಂಗಮ (ಬಾಗಲಕೋಟೆ ಜಿಲ್ಲೆ): ‘ವೀರಶೈವರು ಬಸವಣ್ಣ ಅವರನ್ನು ಒಪ್ಪಿಕೊಳ್ಳದೇ ಸಮಾಜ ಒಡೆಯುವ ಕಾರ್ಯ ಮಾಡುತ್ತಿದ್ದಾರೆ. ಲಿಂಗಾಯತ ಸ್ವತಂತ್ರ ಧರ್ಮದ ಮಾನ್ಯತೆಗೆ ವೀರಶೈವರೇ ಅಡ್ಡಿ ಆಗಿದ್ದಾರೆ’ ಎಂದು ಕೂಡಲಸಂಗಮ ಬಸವ ಧರ್ಮ ಪೀಠದ ಅಧ್ಯಕ್ಷೆ ಮಾತೆ ಗಂಗಾದೇವಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಲಿಂಗಾಯತ-ವೀರಶೈವ ಎಂದೂ ಒಂದಾಗಲು ಸಾಧ್ಯವಿಲ್ಲ. ಲಿಂಗಾಯತ ಧರ್ಮಕ್ಕೆ ತಳಕು ಹಾಕಿಕೊಳ್ಳುವುದನ್ನು ವೀರಶೈವರು ಬಿಡಬೇಕು. ಬೇಕಾದರೆ ಪ್ರತ್ಯೇಕ ಧರ್ಮ ಕೇಳಲಿ‘ ಎಂದು ಹೇಳಿದರು.
‘ವೀರಶೈವರು ಕರೆಯುವ ಸಭೆಗೆ ಹೋಗುವವರು ಯಾರು ಎಂದು ಭಕ್ತರಿಗೆ ಗೊತ್ತಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ಹೋರಾಟದಲ್ಲಿ 104 ಉಪಜಾತಿಗಳು, ಬಸವಣ್ಣನೇ ಧರ್ಮ ಗುರು ಎಂದು ಒಪ್ಪಿಕೊಳ್ಳುವ ಯಾರೇ ಬಂದರೂ ಮುಕ್ತ ಅವಕಾಶ ಇದೆ’ ಎಂದರು.
‘ಹಲವು ವರ್ಷಗಳಿಂದ ಲಿಂಗಾಯತರನ್ನು ದಾರಿ ತಪ್ಪಿಸುವ ಕಾರ್ಯವನ್ನು ವೀರಶೈವರು ಮಾಡಿದ್ದಾರೆ. ಇವರ ಷಡ್ಯಂತ್ರಕ್ಕೆ ಬಸವ ಭಕ್ತರು ಒಳಗಾಗಬಾರದು’ ಎಂದು ದೂರಿದರು.
‘ಬಸವ ಸಂಸ್ಕೃತಿ ಅಭಿಯಾನ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಯಶಸ್ಸು ಖಂಡಿದೆ. ಇದನ್ನು ಸಹಿಸದ ಕೆಲ ವೀರಶೈವ ಮಠಾಧೀಶರ ಮಾತಿಗೆ ಬೆಲೆ ಕೊಡಬೇಡಿ. ಜಾತಿವಾರು ಸಮೀಕ್ಷೆಯಲ್ಲಿ ಎಲ್ಲ ಬಸವ ಭಕ್ತರು ಧರ್ಮ ಕಾಲಂನಲ್ಲಿ ಲಿಂಗಾಯತ, ಜಾತಿ ಕಾಲಂನಲ್ಲಿ ತಮ್ಮ ಉಪಜಾತಿ ಬರೆಸಬೇಕು‘ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.