ADVERTISEMENT

ನಿತ್ಯ ಆದಾಯ ತರುವ ತರಕಾರಿ: ಎರಡೂವರೆ ಎಕರೆಯಲ್ಲಿ ಹತ್ತಾರು ಬೆಳೆ ಬೆಳೆದ ರೈತ

ವಿಶ್ವಜ ಕಾಡದೇವರ
Published 9 ಜನವರಿ 2026, 7:38 IST
Last Updated 9 ಜನವರಿ 2026, 7:38 IST
ರಬಕವಿ ಬನಹಟ್ಟಿ ಸಮೀಪದ ರೈತ ಪ್ರಕಾಶ ಕಾಲತಿಪ್ಪಿ ತಮ್ಮ ತೋಟದಲ್ಲಿ ಗಜ್ಜರಿ ಬೆಳೆದಿದ್ದಾರೆ
ರಬಕವಿ ಬನಹಟ್ಟಿ ಸಮೀಪದ ರೈತ ಪ್ರಕಾಶ ಕಾಲತಿಪ್ಪಿ ತಮ್ಮ ತೋಟದಲ್ಲಿ ಗಜ್ಜರಿ ಬೆಳೆದಿದ್ದಾರೆ   

ರಬಕವಿ ಬನಹಟ್ಟಿ: ಸಮೀಪದ ರೈತ ಪ್ರಕಾಶ ಕಾಲತಿಪ್ಪಿ ಅವರು ತಮ್ಮ ಎರಡೂವರೆ ಎಕರೆ ತೋಟದಲ್ಲಿ ಹಲವು ಬಗೆಯ ತರಕಾರಿ ಬೆಳೆದು ಕೈ ತುಂಬ ಆದಾಯ ಕಂಡುಕೊಳ್ಳುತ್ತಿದ್ದಾರೆ. ದೀರ್ಘಾವಧಿಯ ವಾಣಿಜ್ಯ ಬೆಳೆ ಬೆಳೆಯವುದಕ್ಕಿಂತ ತರಕಾರಿ ಬೆಳೆದು ಲಾಭ ಮಾಡಿಕೊಳ್ಳಬಹುದು ಎಂಬುದು ಅವರ ಅರಿವಿಗೆ ಬಂದಿದೆ.

ಪ್ರಕಾಶ ಅವರು ಗಜ್ಜರಿ, ಹೂಕೋಸು, ಬೀಟ್‌ರೂಟ್, ಅವರೆಕಾಯಿ, ಹಾಗಲಕಾಯಿ, ಹೀರೆಕಾಯಿ ಬೆಳೆಯುತ್ತಾರೆ. ಋತುಮಾನಕ್ಕೆ ತಕ್ಕಂತೆ ತರಕಾರಿ ಬೆಳೆಯುವುದರಿಂದ ಅವರು ವರ್ಷವಿಡೀ ಒಂದಿಲ್ಲೊಂದು ಬೆಳೆಯಿಂದ ಆದಾಯ ಪಡೆಯುತ್ತಿರುತ್ತಾರೆ. ಸದ್ಯ ಅವರ ತೋಟದಲ್ಲಿ ಗಜ್ಜರಿ, ಹೂಕೋಸು, ಹಾಗಲಕಾಯಿ, ಹೀರೆಕಾಯಿಗಳನ್ನು ಸೊಂಪಾಗಿ ಬೆಳೆದಿವೆ.

ಮಾರುಕಟ್ಟೆಯಲ್ಲಿ ಇಪ್ಪತ್ತು ಕೆ.ಜಿ. ಗಜ್ಜರಿ ₹600ರಿಂದ ₹700ವರೆಗೆ, ಇಪ್ಪತ್ತು ಕೆ.ಜಿ. ಬೀಟ್‌ರೂಟ್ ₹1,200, ಹನ್ನೆರಡು ಹೂಕೋಸು ₹250ರಿಂದ ₹300, ಇಪ್ಪತ್ತು ಕೆ.ಜಿ. ಹಾಗಲಕಾಯಿ ₹500ರವರೆಗೆ ಮತ್ತು ಕೆ.ಜಿ. ಅವರೆಕಾಯಿ ₹35ರಿಂದ ₹40ರ ವರೆಗೆ ಮಾರಾಟವಾಗುತ್ತಿದೆ. ಸಂಕ್ರಮಣದ ಸಂದರ್ಭದಲ್ಲಿ ಈ ತರಕಾರಿ ಬೆಲೆ ಕೂಡ ಹೆಚ್ಚಾಗಲಿದೆ.

ADVERTISEMENT

‘ಗೊಬ್ಬರ, ಬೀಜ, ಸಸಿ, ಕಳೆ ತೆಗೆಯುವುದು ಮತ್ತು ಕಾರ್ಮಿಕರ ಕೂಲಿ ಸೇರಿದಂತೆ ಪ್ರತಿ ಎಕರೆಗೆ ₹10ಸಾವಿರದಿಂದ ₹12 ಸಾವಿರದ ವರೆಗೂ ಖರ್ಚಾಗುತ್ತದೆ. ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಂತೆ ಕಟಾವು ಮಾಡಿ ಮಾರಾಟ ಮಾಡುತ್ತೇವೆ. ರಬಕವಿ ಬನಹಟ್ಟಿ, ಜಮಖಂಡಿ, ಮುಧೋಳ, ಅಥಣಿ ಮಾರುಕಟ್ಟೆಯಲ್ಲಿಯೇ ಸಾಕಷ್ಟು ಬೇಡಿಕೆ ಇರುವುದರಿಂದ ಮತ್ತು ಉತ್ತಮ ಬೆಲೆಯೂ ಸಿಗುತ್ತಿರುವುದರಿಂದ ಸುತ್ತಲಿನ ಮಾರುಕಟ್ಟೆಗೆ ತರಕಾರಿಯನ್ನು ಪೂರೈಸುತ್ತಿದ್ದೇವೆ’ ಎಂದು ಖರ್ಚುವೆಚ್ಚ ಹಾಗೂ ಮಾರುಕಟ್ಟೆ ಲೆಕ್ಕಾಚಾರ ಬಿಚ್ಚಿಟ್ಟರು ರೈತ ಪ್ರಕಾಶ ಕಾಲತಿಪ್ಪಿ.

‘ಗಜ್ಜರಿಗೆ ಬೇಕಾಗುವ ಬೀಜವನ್ನು ನಾವೇ ತಯಾರಿ ಮಾಡಿಕೊಳ್ಳುತ್ತೇವೆ. ಬೀಟ್‌ರೂಟ್, ಹೂಕೋಸು ಸೇರದಂತೆ ಇನ್ನುಳಿದ ಸಸಿಗಳನ್ನು ಘಟಪ್ರಭಾದಿಂದ ತೆಗೆದುಕೊಂಡು ಬರುತ್ತೇವೆ’ ಎಂದು ಅವರು ಮಾಹಿತಿ ನೀಡಿದರು.

ಪ್ರಕಾಶ ತೋಟದಲ್ಲಿ ಬೆಳೆದ ಬೀಟ್‌ರೂಟ್
ಮಾರುಕಟ್ಟೆಗೆ ಕಳಿಸಲು ಸಿದ್ಧವಾದ ಹೂಕೋಸು
ತರಕಾರಿ ಬೆಳೆದರೆ ನಷ್ಟವಿಲ್ಲ. ಇದಕ್ಕೆ ದಿನವೂ ಬೇಡಿಕೆ ಇರುವುದರಿಂದ ನಿತ್ಯವೂ ಮಾರುಕಟ್ಟೆಗೆ ಕಳಿಸುತ್ತೇವೆ ದಿನಾಲೂ ಆದಾಯ ಪಡೆಯುತ್ತಿದ್ದೇವೆ
ಪ್ರಕಾಶ ಕಾಲತಿಪ್ಪಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.