ADVERTISEMENT

ರಬಕವಿ ಬನಹಟ್ಟಿ | ಕಾಲುವೆ ನಿರ್ಮಾಣ: ಬಾರದ ಪರಿಹಾರ

ವಿಶ್ವಜ ಕಾಡದೇವರ
Published 22 ಜುಲೈ 2025, 2:16 IST
Last Updated 22 ಜುಲೈ 2025, 2:16 IST
<div class="paragraphs"><p>ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಹದ್ದಿಯಲ್ಲಿಯ ಕಾಲುವೆಯನ್ನು ಮುಚ್ಚಿ ಮೇಲೆ ಬೆಳೆ ಬೆಳೆದಿರುವುದು</p></div>

ರಬಕವಿ ಬನಹಟ್ಟಿ ತಾಲ್ಲೂಕಿನ ನಾವಲಗಿ ಹದ್ದಿಯಲ್ಲಿಯ ಕಾಲುವೆಯನ್ನು ಮುಚ್ಚಿ ಮೇಲೆ ಬೆಳೆ ಬೆಳೆದಿರುವುದು

   

ರಬಕವಿ ಬನಹಟ್ಟಿ: ರಬಕವಿ ಬನಹಟ್ಟಿ, ಜಮಖಂಡಿ ಹಾಗೂ ಮುಧೋಳದ ಹದಿನೈದಕ್ಕೂ ಹೆಚ್ಚು ಗ್ರಾಮಗಳ ರೈತರ 7,200 ಹೆಕ್ಟೇರ್‌ ಭೂ ಪ್ರದೇಶಕ್ಕೆ ನೀರು ಒದಗಿಸುವ ನಿಟ್ಟಿನಲ್ಲಿ 2017-18ರಲ್ಲಿ ವೆಂಕಟೇಶ್ವರ ಏತ ನೀರಾವರಿ ಯೋಜನೆಯನ್ನು ಆರಂಭಿಸಲಾಗಿತ್ತು. ಯೋಜನೆ ಆರಂಭಗೊಂಡು ಏಳೆಂಟು ವರ್ಷಗಳೇ ಗತಿಸಿದರೂ ಇನ್ನೂ ನಾವಲಗಿ ಭಾಗದ ವ್ಯಾಪ್ತಿಯಲ್ಲಿ ಬರುವ ಕಾಲುವೆಗಳಿಗೆ ನೀರು ಹರಿದಿಲ್ಲ, ಕಾಲುವೆ ನಿರ್ಮಾಣಕ್ಕೆ ಭೂಮಿಯನ್ನು ನೀಡಿದ ರೈತರಿಗೆ ಪರಿಹಾರ ಕೂಡಾ ಬಂದಿಲ್ಲ.

₹ 174.42 ಕೋಟಿ ಆಡಳಿತಾತ್ಮಕ ಮೊತ್ತದ ಆದೇಶದ ಕಾಮಗಾರಿ ಅಪೂರ್ಣವಾಗಿದೆ. ಅತ್ತ ರೈತರ ಜಮೀನುಗಳಿಗೆ ನೀರು ಬರಲಿಲ್ಲ ಮತ್ತು ಇತ್ತ ಪರಿಹಾರ ಧನವೂ ಬಾರದೆ ಇರುವುದರಿಂದ ನಾವಲಗಿ ಗ್ರಾಮದ ಬಹುತೇಕ ಕಡೆಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿ ಹಾಯ್ದು ಹೋಗಿರುವ ಕಾಲುವೆಗಳನ್ನು ವ್ಯವಸ್ಥಿತವಾಗಿ ಮುಚ್ಚಿ ಅದರ ಮೇಲೆ ಬೆಳೆಗಳನ್ನು ಬೆಳೆದಿದ್ದಾರೆ.

ADVERTISEMENT

ಯೋಜನೆಯ ಮುಖ್ಯ ಕಾಲುವೆಯು 5.05 ಕಿ.ಮೀ ಉದ್ದವಾಗಿದ್ದು, ಇದರ ಸಿದ್ದಾಪುರ ವಲಯದ ಕಾಲುವೆಯು 18.85 ಕಿ.ಮೀ ಮತ್ತು ನಾವಲಗಿ ವ್ಯಾಪ್ತಿಯಲ್ಲಿ 15.50 ಕಿ.ಮೀ ಉದ್ದವಾಗಿದೆ. ರಬಕವಿ– ಬನಹಟ್ಟಿ ತಾಲ್ಲೂಕಿನ ಕುಲಹಳ್ಳಿ ಬಳಿ ಜಾಕವೆಲ್ ನಿರ್ಮಾಣವಾಗಿದೆ. ಜಾಕವೆಲ್‌ಗೆ ನೀರು ಪೂರೈಕೆ ಮಾಡುವ ಸ್ಥಳ, ಜಾಕವೆಲ್ ನಿರ್ಮಾಣ ಹಾಗೂ ಪೈಪ್‌ಲೈನ್‌ ಅಳವಡಿಕೆ ಮಾಡಲು ಬಳಸಿಕೊಂಡ ಭೂಮಿಗಳಿಗೆ ಹಾಗೂ ಮುಖ್ಯ ಕಾಲುವೆ ಹಾಯ್ದು ಹೋದ ಜಮೀನುಗಳ ರೈತರಿಗೆ ಪರಿಹಾರ ನೀಡಲಾಗಿದೆ.

‘ಈಗಾಗಲೇ ಉಪ ಕಾಲುವೆಗಳ ನಿರ್ಮಾಣಕ್ಕಾಗಿ ಹಾಯ್ದು ಹೋದ ಭೂಮಿಗಳ ಸಂಯುಕ್ತ ಮೋಜಣಿ ಸರ್ವೆ ಕಾರ್ಯ ಮುಕ್ತಾಯಗೊಂಡಿದ್ದು, ಮುಂದಿನ ಹಂತ ಪ್ರಗತಿಯಲ್ಲಿದೆ. 2017-18 ರಲ್ಲಿ ರೈತರಿಗೆ ನೀಡಲಾದ ನೋಟಿಸ್‌ಗಳು ಅಸಿಂಧುಗೊಂಡಿದ್ದು, ಈಗ ಮತ್ತೆ 2022 ರಲ್ಲಿ ಹೊಸ ಪ್ರಸ್ತಾವನೆ ಕಳುಹಿಸಲಾಗಿದೆ. ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು. ಈಗಾಗಲೇ ನೀರು ಪೂರೈಕೆಯ ಕಾರ್ಯ ಕೂಡಾ ನಡೆದಿದೆ’ ಎಂದು ಹಿಪ್ಪರಗಿಯ ಕರ್ನಾಟಕ ನೀರಾವರಿ ನಿಗಮ ನಿಯಮಿತ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ನಾರಾಯಣ ದಿವಟೆ ತಿಳಿಸಿದರು.

2014 ರ ಜನವರಿಯಲ್ಲಿ ಶಾಸಕ ಸಿದ್ದು ಸವದಿ ಪ್ರಾಯೋಗಿಕವಾಗಿ ನೀರುಪೂರೈಕೆ ಕಾರ್ಯಕ್ಕೆ ಚಾಲನೆ ನೀಡಿದರು. ನಂತರ ಆರೇಳು ತಿಂಗಳುಗಳ ನಂತರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ನೀರು ಪೂರೈಕೆ ಕಾರ್ಯಕ್ಕೆ ಮತ್ತೊಮ್ಮೆ ಚಾಲನೆ ನೀಡಿದರು.

‘ಸಿದ್ಧಾಪುರ ಭಾಗದಲ್ಲಿಯ ಕಲಹಳ್ಳಿ, ಹುಲ್ಯಾಳ, ಮರೆಗುದ್ದಿ, ಬುದ್ನಿ, ಮಾಲಾಪುರ ಮತ್ತು ನಾವಲಗಿ ಭಾಗದಲ್ಲಿ ಚಿಮ್ಮಡ ಮತ್ತು ಜಗದಾಳ ಗ್ರಾಮದ ರೈತರು ಇದುವರೆಗೆ ಪರಿಹಾರ ಧನದಿಂದ ವಂಚಿತರಾಗಿದ್ದಾರೆ’ ಎನ್ನುತ್ತಾರೆ ರೈತರಾದ ಆನಂದ ಕಂಪು, ಹಣಮಂತ ಮಗದುಮ್, ಮುತ್ತಪ್ಪ ಜನವಾಡ, ಮಲ್ಲಪ್ಪ ಜನವಾಡ, ಸುತಾರ.

‘ಈ ಭಾಗದ ಜಮೀನುಗಳಲ್ಲಿ ಕಾಲುವೆ ಹಾಯ್ದು ಹೋದರೂ ಇದುವರೆಗೆ ನೀರು ಬಂದಿಲ್ಲ. ನಮ್ಮ ಮೇಲ್ಭಾಗದಲ್ಲಿರುವ ರೈತರು ತಮ್ಮ ಜಮೀನುಗಳಲ್ಲಿಯ ಕಾಲುವೆಗಳನ್ನು ಮುಚ್ಚಿದ್ದಾರೆ. ಆದಷ್ಟು ಬೇಗನೆ ಎಲ್ಲ ಸಮಸ್ಯೆಗಳು ನಿವಾರಣೆಯಾಗಿ ರೈತರ ಜಮೀನುಗಳಿಗೆ ನೀರು ಬರಬೇಕು ಮತ್ತು ಪರಿಹಾರ ನೀಡುವ ನಟ್ಟಿನಲ್ಲಿ ಅಧಿಕಾರಿಗಳು ಗಮನ ನೀಡಬೇಕು’ ಎನ್ನುತ್ತಾರೆ ರೈತ ಸಿದ್ದು ಗೌಡಪ್ಪನವರ.

‘ನಮ್ಮ ಭೂಮಿಯಲ್ಲಿಯೂ ಕಾಲುವೆ ಹಾಯ್ದು ಹೋಗಿದೆ. ಸರ್ವೆ ಕಾರ್ಯಕ್ಕೆ ಮತ್ತು ಪರಿಹಾರಕ್ಕಾಗಿ ಸರ್ವೆ ಕಾರ್ಯಾಲಯಕ್ಕೆ, ಉಪವಿಭಾಗಾಧಿಕಾರಿಗಳ ಕಾರ್ಯಾಲಯ ಹಾಗೂ ಸಂಬಂಧಪಟ್ಟ ಕಾರ್ಯಾಲಯಗಳಿಗೆ ಹತ್ತಾರು ಬಾರಿ ಹೋಗಿ ಭೇಟಿಯಾಗಿ ವಿನಂತಿಸಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಇಲ್ಲಿಯ ರೈತರಾದ ಶಿವು ಭದ್ರನವರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.