ADVERTISEMENT

ರಬಕವಿ ಬನಹಟ್ಟಿ: ₹50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2026, 6:17 IST
Last Updated 12 ಫೆಬ್ರುವರಿ 2026, 6:17 IST
ರಬಕವಿ ಬನಹಟ್ಟಿ ತಾಲ್ಲೂಕಿನ ಪಶು ವೈದ್ಯಕೀಯ ಆಸ್ಪತ್ರೆಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.
ರಬಕವಿ ಬನಹಟ್ಟಿ ತಾಲ್ಲೂಕಿನ ಪಶು ವೈದ್ಯಕೀಯ ಆಸ್ಪತ್ರೆಗೆ ಶಾಸಕ ಸಿದ್ದು ಸವದಿ ಭೂಮಿ ಪೂಜೆ ನೆರವೇರಿಸಿದರು.   

ರಬಕವಿ ಬನಹಟ್ಟಿ: ‘ರಬಕವಿ ಬನಹಟ್ಟಿ ತಾಲ್ಲೂಕಿನ ಪಶು ವೈದ್ಯಕೀಯ ಆಸ್ಪತ್ರೆಯ ನಿರ್ಮಾಣಕ್ಕೆ ಸೂಕ್ತ ಸ್ಥಳವನ್ನು ನೀಡುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯವನ್ನು ತೋರಿದ್ದು, ಈಗ ಇದ್ದ ಸ್ಥಳದಲ್ಲಿಯೇ ₹50 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯ ಕಟ್ಟಡ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗುವುದು’ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

ಇಲ್ಲಿನ ಪಶು ಆಸ್ಪತ್ರೆಯ ಆವರಣದಲ್ಲಿಯೇ ನೂತನ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು.

‘ಬನಹಟ್ಟಿ ಬಸ್ ನಿಲ್ದಾಣದ ಹತ್ತಿರದ ಜಾಗವನ್ನು ನೀಡುವ ನಿಟ್ಟಿನಲ್ಲಿ ಗಮನ ನೀಡಲಾಗಿತ್ತು. ಇದು ಲೋಕೋಪಯೋಗಿ ನಿವೇಶನವಾಗಿತ್ತು. ಈ ಕುರಿತು ಬಾಗಲಕೋಟೆ ಜಿಲ್ಲಾಧಿಕಾರಿಗಳು ಕೂಡಾ ನಮ್ಮ ಗಮನಕ್ಕೆ ತೆಂದಿದ್ದರು. ಆದರೆ ಈಗ ಆ ಸ್ಥಳದ ಕುರಿತು ಸಮಸ್ಯೆಯಾಗಿದೆ. ಜಿಲ್ಲಾಧಿಕಾರಿಗೆ, ಉಪವಿಭಾಗಾಧಿಕಾರಿಗೆ ಮತ್ತು ತಹಶೀಲ್ದಾರ್‌ಗೆ ಸೂಕ್ತ ದಾಖಲೆಗಳನ್ನು ನೀಡುವಂತೆ ಎರಡು ವರ್ಷಗಳಿಂದ ತಿಳಿಸಲಾಗಿತ್ತು. ಆದರೆ ಯಾವುದೆ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ADVERTISEMENT

‘ಸುಸಜ್ಜಿತ ಪಶು ಆಸ್ಪತ್ರೆಯಿಂದ ರೈತರಿಗೆ ಅನುಕೂಲವಾಗುತ್ತದೆ. ಆದರೆ ಸರ್ಕಾರಕ್ಕೆ ಮತ್ತು ಅಧಿಕಾರಿಗಳಿಗೆ ರೈತರಿಗೆ ಅನುಕೂಲವಾಗುವ ಕಾರ್ಯವನ್ನು ಮಾಡುವುದು ಬೇಡವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಲಾಖೆಯ ಉಪನಿರ್ದೇಶಕ ಡಾ. ಶಿವಾನಂದ ಕರಡಿಗುಡ್ಡ, ತಾಲ್ಲೂಕು ಪಶು ವೈದ್ಯಾಧಿಕಾರಿ ಡಾ.ಬಸವರಾಜ ಗೌಡರ, ಜಯವಂತ ಮಿಳ್ಳಿ, ಈಶ್ವರ ಬಿರಾದಾರ ಪಾಟೀಲ, ಭೀಮಶಿ ಪಾಟೀಲ, ಗೌರಿ ಮಿಳ್ಳಿ, ಶ್ರೀಶೈಲ ಬೀಳಗಿ, ಪ್ರವೀಣ ಧಬಾಡಿ ಹಾಗೂ ತಾಲ್ಲೂಕಿನ ಪಶು ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.