ಬಾಗಲಕೋಟೆ: ‘ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲೇ ಆಲಮಟ್ಟಿ ಜಲಾಶಯದ ಗೇಟುಗಳನ್ನು 524.256 ಮೀಟರ್‌ಗೆ ಎತ್ತರಿಸುವ ತೀರ್ಮಾನ ಕೈಗೊಂಡು ಗೇಟ್ ಅಳವಡಿಕೆಗೆ ಸಿದ್ಧತೆ ಮಾಡಿಕೊಂಡಿದ್ದೆ. ಯುಕೆಪಿ ಜಾರಿಗೆ ಪ್ರಯತ್ನ ಮಾಡುವೆ’ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ ಹೇಳಿದರು.
ನವನಗರದ ಕಲಾಭವನದಲ್ಲಿ ಎಸ್.ಆರ್.ಪಾಟೀಲ ಸಮೂಹ ಸಂಸ್ಥೆ, ಸಪ್ನ ಬುಕ್ ಹೌಸ್ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ತಮ್ಮ ಕೃತಿ ‘ವಿಶ್ವಸಂಸ್ಕೃತಿಯ ಮಹಾಯಾನ ಸಂಪುಟ-3’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಯೋಜನೆ ಕಾಮಗಾರಿಗಳಿಗೆ ವೇಗ ನೀಡಲೆಂದೇ ಕೃಷ್ಣಾ ಭಾಗ್ಯ ಜಲನಿಗಮ ಸ್ಥಾಪನೆ ಮಾಡಿದ್ದೆ. ರಿಸರ್ವ್ ಬ್ಯಾಂಕ್‍ಗೆ ಮನವರಿಕೆ ಮಾಡಿಕೊಟ್ಟು ಬಾಂಡ್‍ಗಳನ್ನು ಬಿಡುಗಡೆ ಮಾಡಲಾಗಿತ್ತು. ಮುಂದೆ 519.60 ಮೀಟರ್‌ಗೆ ತೀರ್ಮಾನವಾಗಿ ಗೇಟ್‍ಗಳನ್ನು ಕತ್ತರಿಸಲಾಯಿತು. ಆಲಮಟ್ಟಿ ವಿಚಾರದಲ್ಲಿ ಆಡಳಿತಾತ್ಮಕ, ಕಾನೂನಾತ್ಮಕ ತೊಡಕುಗಳಲ್ಲಿ ಮನಸ್ಸು ಮಾಡಿದರೆ ಬಗೆಹರಿಸಬಹುದಾಗಿದೆ. ಇದಕ್ಕೆ ನಾನೂ ಕೈಜೋಡಿಸುವೆ ಎಂದರು.
ಆಶಯ ನುಡಿಗಳನ್ನಾಡಿದ ಸಾಹಿತಿ ಸರಜೂ ಕಾಟ್ಕರ್, ಮುತ್ಸದ್ಧಿ ರಾಜಕಾರಣಿ ಸ್ವಾರ್ಥರಹಿತರಾಗಿ ಜನರ ಕಲ್ಯಾಣದ ಬಗ್ಗೆ ಚಿಂತನೆ ಮಾಡುತ್ತಾರೆ. ಅದಕ್ಕೆ ಮೊಯಿಲಿ ಉದಾಹರಣೆಯಾಗಿದ್ದಾರೆ. ಇಂತಹವರ ಸಂಖ್ಯೆ ರಾಜಕಾರಣದಲ್ಲಿ ಹೆಚ್ಚಿದ್ದರೆ ರಾಜ್ಯ ಬಂಗಾರದ ನಾಡಾಗುತ್ತಿತ್ತು ಎಂದರು.
ಉತ್ತರ ಕರ್ನಾಟಕ ನಿರ್ಲಕ್ಷ್ಯ ಗಮನಿಸಿದ್ದ ಮೊಯಿಲಿ ಅವರು ಬೆಳಗಾವಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದರು. ಅದರ ಪರಿಣಾಮ ಈಗ ಸುವರ್ಣಸೌಧ ನಿರ್ಮಾಣವಾಗಿದೆ. ಮೊಯಿಲಿ ಅವರು ದೂರದೃಷ್ಟಿ ಹೊಂದಿದ್ದಾರೆ ಎಂದು ಹೇಳಿದರು.
ಧಾರವಾಡದ ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ವೀರಣ್ಣ ರಾಜೂರ ಮಾತನಾಡಿ, ಒಬ್ಬ ವ್ಯಕ್ತಿ ಜೀವಮಾನದಲ್ಲಿ ಒಂದು ಮಹಾಕಾವ್ಯವ ರಚಿಸಬಹುದು. ಆದರೆ, ನಾಲ್ಕು ಮಹಾಕಾವ್ಯಗಳನ್ನು ರಚಿಸಿದ ಕೀರ್ತಿ ವೀರಪ್ಪ ಮೊಯಿಲಿ ಅವರಿಗೆ ಸಲ್ಲುತ್ತದೆ. ರಾಜಕಾರಣಿಗಳನ್ನು ಕಾಣುತ್ತೇವೆ. ಅದರಲ್ಲಿ ಸಾಹಿತ್ಯ, ಸಂಸ್ಕøತಿ ಆಸಕ್ತರನ್ನೂ ಕಾಣಬಹುದು ಆದರೆ ಬರವಣಿಗೆ ಒಲಿದ ರಾಜಕಾರಣಿಗಳು ಅಪರೂಪ ಅದರಲ್ಲಿ ಮೊಯಿಲಿ ಅವರು ಒಬ್ಬರು ಎಂದರು.
ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಮೊಯಿಲಿ ಅವರು ಯುಕೆಪಿಗೆ ನೀಡಿರುವ ಕೊಡುಗೆಗಳನ್ನು ಸುವರ್ಣ ಅಕ್ಷರಗಳಲ್ಲಿ ದಾಖಲಿಸಬೇಕು. ಮೂರನೇ ಹಂತ ಪೂರ್ಣಗೊಳ್ಳುವುದರಿಂದ ಉತ್ತರ ಕರ್ನಾಟಕದ ರೈತರ ಬಾಳು ಹಸನಾಗಲಿದೆ. ಅವರು ಈಗಲೂ ಪ್ರಭಾವ ಹೊಂದಿದ್ದು, ಅವರು ಹೇಳಿದರೆ ಎಲ್ಲ ನಾಯಕರು ಒಪ್ಪುತ್ತಾರೆ. ಈ ಭಾಗದ ಧ್ವನಿಯಾಗಬೇಕು ಎಂದು ಮನವಿ ಮಾಡಿದರು.
ಫಕೀರ ದಿಂಗಾಲೇಶ್ವರ ಸ್ವಾಮೀಜಿ ಕೃತಿ ಬಿಡುಗಡೆ ಮಾಡಿದರು. ಸಪ್ನ ಬುಕ್ ಹೌಸ್ ವ್ಯವಸ್ಥಾಪಕ ನಿರ್ದೇಶಕ ನಿತಿನ್ ಷಾ ಸ್ವಾಗತಿಸಿದರು. ಮಾಜಿ ಸಚಿವ ಎಚ್.ಎಂ.ರೇವಣ್ಣ, ಕೆ.ಎಂ.ನಾಗರಾಜ ಇದ್ದರು.
ಕಾಂಗ್ರೆಸ್ ತತ್ವ ಜನರಿಗೆ ತಿಳಿಸಿ: ಮೊಯಿಲಿ
ಬಾಗಲಕೋಟೆ: ಕಾಂಗ್ರೆಸ್ ತತ್ವ ಮತ್ತು ನಿಲುವನ್ನು ಜನರಿಗೆ ತಿಳಿಸುವ ಕಾರ್ಯವನ್ನು ಪ್ರತಿಯೊಬ್ಬ ಕಾರ್ಯಕರ್ತರೂ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಹೇಳಿದರು. ಬಾಗಲಕೋಟೆ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭಾನುವಾರ ಬೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದ ಅವರು ಪಕ್ಷದ ಬಲವರ್ಧನೆಗಾಗಿ ಸಂಘಟಿತ ಮತ್ತು ಶಿಸ್ತುಬದ್ಧ ಕಾರ್ಯ ಚಟುವಟಿಕೆಗಳನ್ನು ಕೈಗೊಳ್ಳುವುದು ಅನಿವಾರ್ಯ ಎಂದರು.
ಗ್ರಾಮದಿಂದ ದೆಹಲಿಯ ವರೆಗೆ ಕಾಂಗ್ರೆಸ್ ತತ್ವ ಕಾರ್ಯವನ್ನು ಜನರಿಗೆ ತಿಳಿಸಬೇಕು. ಮುಂಬರುವ ಚುನಾವಣೆಗೆ ಸಜ್ಜಾಗಿ ಸಂಘಟಿತ ಶಕ್ತಿ ಮೂಲಕ ವಿಜಯ ಸಾಧಿಸೋಣ ಎಂದು ಹೇಳಿದರು.
ಮಾಜಿ ಸಚಿವ ಎಸ್.ಆರ್. ಪಾಟೀಲ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ. ನಂಜ್ಯಯನಮಠ ಪ್ರಚಾರ ಸಮಿತಿ ಜಿಲ್ಲಾ ಅಧ್ಯಕ್ಷ ನಾಗರಾಜ ಹದ್ಲಿ ಜಿಲ್ಲಾ ವಕ್ತಾರ ಚಂದ್ರಶೇಖರ ರಾಠೋಡ ಎಸ್‌ಸಿ ಘಟಕದ ಜಿಲ್ಲಾ ಅಧ್ಯಕ್ಷ ರಾಜು ಮನ್ನಿಕೇರಿ ಹನುಮಂತ ಡೋಣಿ ಮಂಜುಳಾ ಭುಸಾರೆ ಪೀರಪ್ಪ ಮ್ಯಾಗೇರಿ ರೇಣುಕಾ ನಾರಾಯಣಕರ ಕೃಷ್ಣ ಬದಾಮಿ ಶ್ರವಣ ಖಾತೆದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.