ADVERTISEMENT

World Environment Day: ಹಸಿರಿನಿಂದ ಕಂಗೊಳಿಸುವ ಬನಶಂಕರಿ ದೈವಿವನ

ವನದ ತುಂಬೆಲ್ಲ ಪ್ರಾಣಿ-ಪಕ್ಷಿಗಳ ಕಲರವ

ಎಸ್.ಎಂ.ಹಿರೇಮಠ
Published 5 ಜೂನ್ 2025, 6:09 IST
Last Updated 5 ಜೂನ್ 2025, 6:09 IST
ಬಾದಾಮಿ ಸಮೀಪದ ಬನಶಂಕರಿ-ಶಿವಯೋಗಮಂದಿರ ರಸ್ತೆಯಲ್ಲಿ ವೈವಿಧ್ಯಮಯ ಗಿಡಗಳಿಂದ ಕಂಗೊಳಿಸುವ ಬನಶಂಕರಿ ದೈವಿವನ
ಬಾದಾಮಿ ಸಮೀಪದ ಬನಶಂಕರಿ-ಶಿವಯೋಗಮಂದಿರ ರಸ್ತೆಯಲ್ಲಿ ವೈವಿಧ್ಯಮಯ ಗಿಡಗಳಿಂದ ಕಂಗೊಳಿಸುವ ಬನಶಂಕರಿ ದೈವಿವನ   

ಬಾದಾಮಿ: ಸಮೀಪದ ಬನಶಂಕರಿ ದೇವಾಲಯದಿಂದ ಶಿವಯೋಗಮಂದಿರಕ್ಕೆ ಹೋಗುವ ರಸ್ತೆಯ ಎಡಕ್ಕೆ ಬೆಟ್ಟದಲ್ಲಿ ಹಚ್ಚ ಹಸಿರಿನಿಂದ ಕಂಗೊಳಿಸುವ ಗಿಡಮರಗಳ ಗುಂಪು ಕಾಣಿಸುತ್ತದೆ. ಸ್ವಲ್ಪ ಕ್ರಮಿಸಿದರೆ ಬನಶಂಕರಿ ದೈವಿವನ ಇದೆ.

ಏನಿದು ದೈವಿವನ ಎಂದು ವನದತ್ತ ಹೆಜ್ಜೆ ಹಾಕಿದರೆ ಮಾರ್ಗ ಮಧ್ಯದ ಎರಡೂ ಬದಿಗಳಲ್ಲಿ ವಸಂತ ಮಾಸದಲ್ಲಿ ಚಿಗುರಿದ ಬೇವಿನ ಮರಗಳು ಅಹ್ಲಾದಕರ ಸುವಾಸನೆಯಿಂದ ಬರಮಾಡಿಕೊಳ್ಳುತ್ತವೆ. ಗಿಡಗಳ ಕೊರಳೊಳಗಿಂದ ನೂರಾರು ಹಕ್ಕಿ ಪಕ್ಷಿಗಳ ಚಿಲಿಪಿಲಿ ಇಂಚರವು ಸಂಗೀತದಂತೆ ನಿಮ್ಮನ್ನು ಸ್ವಾಗತಿಸುತ್ತವೆ. ವನದೊಳಗೆಸಾಗಿದಂತೆ ಕಿವಿಗೆ ಇಂಪು, ಹೃದಯಕ್ಕೆ ಉಲ್ಲಾಸದ ಅನುಭವ ಆಗುತ್ತದೆ.  

ವಿಶಾಲವಾಗಿ ಹರಡಿದ ಸಾಲು ಸಾಲು ಮರಗಿಡಗಳ ಮಧ್ಯದಲ್ಲಿ ಓಡಾಡುವ ನವಿಲುಗಳ ಗುಂಪು, ಮಯೂರ ನರ್ತನ ಮುದ ನೀಡುತ್ತದೆ.

ADVERTISEMENT

ನಾಗರಾಳ ಎಸ್.ಬಿ. ಗ್ರಾಮದ ಸಮೀಪ ಅರಣ್ಯ ಇಲಾಖೆಯ ಪ್ರಾದೇಶಿಕ ವಲಯ ವಿಭಾಗವು ಬೆಟ್ಟದಲ್ಲಿ ಸಾವಿರಾರು ವೈವಿಧ್ಯಮಯ ಗಿಡಗಳನ್ನು ಬೆಳೆಸಿದೆ. 15 ಹೆಕ್ಟೇರ್ ಪ್ರದೇಶದ ಅರಣ್ಯದಲ್ಲಿ ದೈವಿವನವನ್ನು ನಿರ್ಮಿಸಿದೆ.

ಇಲ್ಲಿ ನವಗ್ರಹ ವನ, ರಾಶಿ ವನ, ನಕ್ಷತ ವನಗಳನ್ನು ನಿರ್ಮಿಸಲಾಗಿದೆ. ಬಿಳಿ ಎಕ್ಕ, ಮುತ್ತುಗ, ಕಗ್ಗಲಿ, ಉತ್ತರಾಣಿ, ಅರಳಿ, ಅತ್ತಿ, ಬನ್ನಿ, ಗರಿಕೆ ದರ್ಭ ಗಿಡಗಳನ್ನು ಆಯಾ ದಿಕ್ಕಿನ ಅನುಸಾರ ಬೆಳೆಸಲಾಗಿದೆ.

ರಾಶಿ ವನದಲ್ಲಿ ರಕ್ತಚಂದನ, ಸಪ್ತಪರ್ಣ, ಹಲಸು, ಮುತ್ತುಗ, ಉದಯ, ಮಾವು, ಬಕುಳ, ಕಗ್ಗಲಿ, ಅರಳಿ ಸಿಸ್ಸು, ಶಮಿ, ಆಲದ ಮರಗಳು ಮತ್ತು ನಕ್ಷತ್ರ ವನದಲ್ಲಿ ಅಶ್ವಿನಿ ನಕ್ಷತ್ರದಿಂದ ರೇವತಿ ನಕ್ಷತ್ರದವರೆಗೆ 27 ವೈವಿಧ್ಯಮಯ ಜಾತಿಯ ಗಿಡಗಳನ್ನು ಬೆಳೆಸಲಾಗಿದೆ.

ವನದ ಪಕ್ಕದಲ್ಲಿ ಮಕ್ಕಳಿಗೆ ಆಟವಾಡಲು ಅನೇಕ ಪರಿಕರಗಳನ್ನು ಹಾಕಲಾಗಿದೆ. ಐತಿಹಾಸಿಕ ಪ್ರವಾಸಿ ತಾಣಗಳಾದ ಬಾದಾಮಿ. ಪಟ್ಟದಕಲ್ಲು, ಐಹೊಳೆ ಮತ್ತು ಧಾರ್ಮಿಕ ಪುಣ್ಯಕ್ಷೇತ್ರಗಳಾದ ಮಹಾಕೂಟ, ಬನಶಂಕರಿ ಮತ್ತು ಶಿವಯೋಗಮಂದಿರ ವೀಕ್ಷಿಸಲು ಬರುವ ಪ್ರವಾಸಿಗರಿಗೆ ಅನುಕೂಲವಾಗಲಿದೆ.

ಸ್ಮಾರಕಗಳನ್ನು ವೀಕ್ಷಿಸಲು ನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಮಳೆಗಾಲದ ನಂತರ ಅಕ್ಟೋಬರ್‌ನಿಂದ ಫೆಬ್ರುವರಿಯವರೆಗೆ ಅಧಿಕ ಸಂಖ್ಯೆಯಲ್ಲಿ ಸ್ವದೇಶಿ ಮತ್ತು ವಿದೇಶಿ ಪ್ರವಾಸಿಗರು ಬರುತ್ತಾರೆ. ಈ ಪ್ರದೇಶವನ್ನು ಪ್ರವಾಸಿಗರಿಗೆ ವಿಶ್ರಾಂತಿ ಧಾಮವನ್ನಾಗಿ ಪರಿವರ್ತಿಸಬಹುದಾಗಿದೆ.

‘ಉದ್ಯಾನದ ಪಕ್ಕದಲ್ಲಿ ಸ್ಮಶಾನವಿದ್ದು ಅದರ ಸುತ್ತ ಗೋಡೆ ನಿರ್ಮಿಸಬೇಕು. ವನವನ್ನು ಅಭಿವೃದ್ಧಿ ಪಡಿಸಿ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಬೇಕಿದೆ. ಬೆಟ್ಟದಲ್ಲಿ ಪರಿಸರ ಪ್ರಿಯರಿಗೆ ವೀಕ್ಷಣಾಲಯ ಮತ್ತು ವಾಸ್ತವ್ಯಕ್ಕಾಗಿ ಟೆಂಟ್ ನಿರ್ಮಿಸಿ ನಿಸರ್ಗ ಧಾಮವನ್ನಾಗಿ ಮಾಡಬೇಕು’ ಎಂದು ಪರಿಸರವಾದಿ ಎಸ್.ಎಚ್. ವಾಸನ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಬನಶಂಕರಿ ದೈವಿವನದಲ್ಲಿ ಸಾಲು ಮರಗಳ ಸೌಂದರ್ಯ
ದೈವಿ ವನವನ್ನು ಅಭಿವೃದ್ಧಿ ಪಡಿಸಿ ಕಾವಲುಗಾರರನ್ನು ನೇಮಿಸಲಾಗಿದೆ. ಪ್ರವಾಸಿಗರಿಗೆ ವೀಕ್ಷಣೆಗೆ ಪ್ರವೇಶವಿದೆ. ಮುಂಬರುವ ದಿನಗಳಲ್ಲಿ ಪರಿಸರ ಪ್ರಿಯರಿಗೆ ಅನುಕೂಲತೆ ಕಲ್ಪಿಸಲಾಗುವುದು.
– ಮಹೇಶ ಮರೆನ್ನವರ, ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.