ADVERTISEMENT

ಬಾಗಲಕೋಟೆ | ಯಡಹಳ್ಳಿ ಗ್ರಾ.ಪಂ: 38 ವರ್ಷಗಳಿಂದ ಅವಿರೋಧ ಆಯ್ಕೆಯ ಶ್ರೇಯ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2020, 15:17 IST
Last Updated 16 ಡಿಸೆಂಬರ್ 2020, 15:17 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಬಾಗಲಕೋಟೆ: ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ರಾಜ್ಯದ ವಿವಿಧೆಡೆ ಸದಸ್ಯತ್ವ ಹರಾಜು, ಮತದಾನ ಬಹಿಷ್ಕಾರದಂತಹ ಸಂಗತಿಗಳ ಕಾಣಸಿಗುತ್ತಿವೆ. ಇದರ ನಡುವೆಯೇ ಬೀಳಗಿ ತಾಲ್ಲೂಕಿನ ಯಡಹಳ್ಳಿ ಗ್ರಾಮ ಪಂಚಾಯ್ತಿ ವಿಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಅಲ್ಲಿ ಕಳೆದ 38 ವರ್ಷಗಳಿಂದ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿದೆ. ಅದು ಈ ಬಾರಿಯೂ ಮುಂದುವರೆದಿದೆ.

ಪಕ್ಕದ ಅಮಲಝರಿ ಗ್ರಾಮ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಸೇರಿದೆ. ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು ಏಳು ಸಾವಿರ ಜನಸಂಖ್ಯೆ ಇದೆ. ಯಡಹಳ್ಳಿಯ 10 ಹಾಗೂ ಅಮಲಝರಿಯ ಎಂಟು ಸೇರಿ ಒಟ್ಟು 18 ಸದಸ್ಯರನ್ನು ಗ್ರಾಮ ಪಂಚಾಯ್ತಿ ಹೊಂದಿದೆ.

ಮಾದರಿ ಗ್ರಾಮ ಪಂಚಾಯ್ತಿ:

ADVERTISEMENT

ಈ ಹಿಂದೆ ರಾಜ್ಯಮಟ್ಟದಲ್ಲಿ ಹಲವು ಬಾರಿ ಸ್ಚಚ್ಛ ಗ್ರಾಮ ಪಂಚಾಯ್ತಿ ಪ್ರಶಸ್ತಿಗೆ ಭಾಜನವಾಗಿರುವ ಯಡಹಳ್ಳಿಯಲ್ಲಿ ಪ್ರತೀ ಮನೆಯಲ್ಲೂ ಶೌಚಾಲಯ ಇದೆ. ರೈತಾಪಿ ವರ್ಗಕ್ಕೆ ನೆರವಾಗಲು ಮನೆಗೊಂದು ತಿಪ್ಪೆ ಗುಂಡಿ ಪಂಚಾಯ್ತಿಯಿಂದಲೇ ವೈಜ್ಞಾನಿಕವಾಗಿ ಕಟ್ಟಿಸಿಕೊಡಲಾಗಿದೆ.

ಗ್ರಾಮದ ಪ್ರತಿ ಬೀದಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವ ಪರಿಪಾಟ ಇಟ್ಟುಕೊಂಡಿರುವ ಸ್ಥಳೀಯರು ಊರಿನ ರಸ್ತೆಗಳಿಗೆ ರಾಜ್ಯದ ಪ್ರಮುಖ ನದಿಗಳ ಹೆಸರು ಇಟ್ಟಿದ್ದಾರೆ.

ವ್ಯಸನಮುಕ್ತ ವಾತಾವರಣ:ಗ್ರಾಮದಲ್ಲಿ ಮದ್ಯ ಮಾರಾಟಕ್ಕೆ ನಿಷೇಧವಿದೆ. ಯಾವುದೇ ಅಂಗಡಿಯಲ್ಲಿ ಗುಟ್ಕಾ, ಪಾನ್, ಸಿಗರೇಟ್ ಮಾರಾಟ ಮಾಡುವಂತಿಲ್ಲ. ಈ ಕಟ್ಟಳೆ ಮುರಿದವರು ದಂಡ ಪಾವತಿಸಬೇಕಿದೆ.

'1982ರ ನಂತರ ಗ್ರಾಮ ಪಂಚಾಯ್ತಿ ಚುನಾವಣೆಯೇ ನಡೆದಿಲ್ಲ. ಆಗಿನಿಂದಲೂ ಊರಿನ ಹಿರಿಯರೇ ಕೂಡಿಕೊಂಡು ತೀರ್ಮಾನಿಸುತ್ತಾರೆ. ಹೀಗಾಗಿ ಚುನಾವಣೆ ನೆಪದಲ್ಲಿ ಊರಿನಲ್ಲಿ ಯಾವುದೇ ಜಗಳ-ವೈಷಮ್ಯಕ್ಕೆ ಆಸ್ಪದ ಆಗಿಲ್ಲ ಎಂದು ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ (ಪಿಕೆಪಿಎಸ್) ಕಾರ್ಯದರ್ಶಿ ಈರಣ್ಣ ಅರಕೇರಿ ಹೇಳುತ್ತಾರೆ.

'ಗ್ರಾಮ ಪಂಚಾಯ್ತಿ ಚುನಾವಣೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಮೀಸಲಾತಿಗೆ ಅನುಗುಣವಾಗಿ ಆಯಾ ಸಮುದಾಯದ ಹಿರಿಯರಿಗೆ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡುವಂತೆ ಸೂಚಿಸಲಾಗುತ್ತದೆ. ನಂತರ ಗ್ರಾಮದ ಕನ್ನಡ ಶಾಲೆಯ ಆವರಣದ ಸಭಾಭವನದಲ್ಲಿ ಊರಿನ ಹಿರಿಯರು ಸಭೆ ಸೇರಿ ಆಯಾ ಸಮುದಾಯದವರು ಒಮ್ಮ ತದಿಂದ ಆಯ್ಕೆ ಮಾಡಿದ ವ್ಯಕ್ತಿಯ ಹೆಸರನ್ನು ಅಂತಿಮಗೊಳಿಸಿ ಘೋಷಣೆ ಮಾಡುತ್ತಾರೆ' ಎಂದು ಆಯ್ಕೆ ಪ್ರಕ್ರಿಯೆ ಬಗ್ಗೆ ಈರಣ್ಣ ಮಾಹಿತಿ ನೀಡಿದರು.

ಅಮಲಝರಿ ಗ್ರಾಮದ ಸದಸ್ಯರನ್ನು ಆ ಊರಿನ ಹಿರಿಯರೇ ಆಯ್ಕೆ ಮಾಡುತ್ತಾರೆ.

ವಿಶೇಷವೆಂದರೆ ಯಡಹಳ್ಳಿ ಬೀಳಗಿ ಮಾಜಿ ಶಾಸಕ ಜೆ.ಟಿ.ಪಾಟೀಲ ಹಾಗೂ ರಾಜ್ಯದ ಹಿರಿಯ ವನ್ಯಜೀವಿ ತಜ್ಞ ಡಾ.ಎಂ.ಆರ್.ದೇಸಾಯಿ ಅವರ ಹುಟ್ಟೂರು.

ಚುನಾವಣೆ ಬಂಡವಾಳ ಹಾಕಿ ಲಾಭ ಪಡೆಯುವ ವ್ಯವಹಾರ ಅಲ್ಲ: ಡಾ.ಎಂ.ಆರ್.ದೇಸಾಯಿ

'ಪಂಚಾಯ್ತಿ ಸದಸ್ಯ ಸ್ಥಾನ ಎಂದರೆ ಹಣ, ಅಧಿಕಾರ ಅಲ್ಲ ಬದಲಿಗೆ ಸಮಾಜ ಸೇವೆ ಎಂಬ ಭಾವನೆ ಮೊದಲಿನಿಂದಲೂ ನಮ್ಮೂರಿನಲ್ಲಿ ಮೂಡಿಸಿದ್ದೇವೆ. ಊರಲ್ಲಿ ಯಾರಿಗೂ ಒತ್ತಾಯ ಮಾಡೊಲ್ಲ. ಬದಲಿಗೆ ಮನವೊಲಿಸುತ್ತೇವೆ. ಹೀಗಾಗಿ ಇಷ್ಟು ವರ್ಷ ಅವಿರೋಧ ಆಯ್ಕೆ ಸಂಪ್ರದಾಯ ಮುಂದುವರೆಸಿಕೊಂಡು ಬರಲು ಸಾಧ್ಯವಾಗಿದೆ' ಎಂದು ವನ್ಯಜೀವಿ ತಜ್ಞ ಡಾ.ಎಂ.ಆರ್.ದೇಸಾಯಿ ಹೇಳುತ್ತಾರೆ.

'ಈಗ ಚುನಾವಣೆ ಬಂಡವಾಳ ಹಾಕಿ ಲಾಭ ಪಡೆಯುವ ವ್ಯವಹಾರ ಆಗಿ ಬದಲಾಗಿದೆ. ನಮ್ಮೂರಲ್ಲಿ ಇನ್ನೂ ಆ ವಾತಾವರಣ ಬರಗೊಡಲು ಬಿಟ್ಟಿಲ್ಲ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಗ್ರಾಮದ ಪ್ರಾಥಮಿಕ ಸಂಬಂಧಗಳು ಮುಖಾಮುಖಿಯಾಗುತ್ತವೆ. ಹೀಗಾಗಿ ಇದು ಚುನಾವಣೆ ವೈಷಮ್ಯಕ್ಕೆ ದಾರಿಯಾಗಬಾರದು. ಊರಿನ ವಾತಾವರಣ ಕೆಡಿಸಬಾರದು ಎಂಬ ಉದ್ದೇಶವೂ ಅವಿರೋಧ ಆಯ್ಕೆಯ ಹಿಂದಿದೆ. ಊರಿನ ಎಲ್ಲರ ಸಹಕಾರದಿಂದ ಇಲ್ಲಿಯವರೆಗೂ ಮುಂದುವರೆದಿದೆ' ಎಂದು 'ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.