ಮುಧೋಳ: ಘಟಪ್ರಭಾ ನದಿಯ ಪ್ರವಾಹದಿಂದ ಭಾನುವಾರ ಬೆಳಿಗ್ಗೆ ಮುಧೋಳ– ಯಾದವಾಡ ಸೇತುವೆ ಮುಳುಗಡೆಯಾಗಿದ್ದು, ಸುತ್ತಮುತ್ತಲಿನ ಗ್ರಾಮಗಳಿಗೆ ರಸ್ತೆ ಸಂಪರ್ಕ ಬಂದ್ ಆಗಿದೆ.
ಮುಧೋಳದಿಂದ ರೂಗಿ, ಮೆಟಗುಡ್ಡ, ಉತ್ತೂರ, ಒಂಟಗೋಡಿ, ಚನ್ನಾಳ, ರಂಜನಗಿ, ಮಲ್ಲಾಪೂರ ಮಿರ್ಜಿ, ಯಾದವಾಡ ಗ್ರಾಮಗಳಿಗೆ ಈ ಸೇತುವೆ ಮಾರ್ಗವೇ ಸಂಪರ್ಕ ಒದಗಿಸಿತ್ತು. ಇದೀಗ ಸೇತುವೆ ಮುಳುಗಡೆ ಆಗಿದ್ದರಿಂದ, ಸುಮಾರು 25 ಕಿ.ಮೀ ಅಂತರದಲ್ಲಿ ಪರ್ಯಾಯ ಮಾರ್ಗ ಬಳಸಲಾಗುತ್ತಿದೆ.
ಮುಧೋಳ ನಗರದ ಜುಂಝರಕೊಪ್ಪ ಗಲ್ಲಿಯಲ್ಲಿ ನೀರು ನುಗ್ಗಿದ್ದು, ನಗರದ ಎಂಕೆಬಿಎಸ್ ಶಾಲೆಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿದೆ. ಮೂರು ಕುಟುಂಬದ 14 ಜನರನ್ನು ಸ್ಥಳಾಂತರಿಸಬೇಕಿದೆ.
ತಾಲ್ಲೂಕಿನ ಮಿರ್ಜಿ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ಸುಮಾರು 25 ಮನೆಗಳು ಮುಳುಗಡೆ ಆಗಿದ್ದು, ಮಿರ್ಜಿ ಗ್ರಾಮದ ಪ್ರೌಢಶಾಲೆ ಹಾಗೂ ಆಯುರ್ವೇದ ಆಸ್ಪತ್ರೆಯಲ್ಲಿ ಕಾಳಜಿ ಕೇಂದ್ರ ತೆರಯಲಾಗಿದೆ. ಆಯುರ್ವೇದ ಆಸ್ಪತ್ರೆಯ ಕಾಳಜಿ ಕೇಂದ್ರದಲ್ಲಿ 15 ಕುಟುಂಬಗಳ 70 ಜನರು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 4 ಕುಟುಂಬದ 21 ಜನರಿಗೆ ಆಶ್ರಯ ಕಲ್ಪಿಸಲಾಗಿದೆ.
ತಾಲ್ಲೂಕಿನ ಮಳಲಿ, ಒಂಟಗೋಡಿ, ಚನ್ನಾಳ, ಮಾಚಕನೂರ, ಬುದ್ನಿ.ಕೆ.ಡಿ ಗ್ರಾಮಕ್ಕೂ ನೀರು ನುಗ್ಗುವ ಸಾಧ್ಯತೆ ಇರುವುದರಿಂದ ತಾಲ್ಲೂಕು ಆಡಳಿತ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
ಘಟಪ್ರಭಾ ನದಿಗೆ 83,801 ಸಾವಿರ ಕ್ಯುಸೆಕ್ ನೀರು ಬಿಡಲಾಗಿದ್ದು, ನೀರಿನ ಪ್ರಮಾಣ ಜಾಸ್ತಿಯಾಗುವ ಸಾಧ್ಯತೆ ಇದೆ. ಭಾನುವಾರ ಮಧ್ಯಾಹ್ನ ಮಾಚಕನೂರ ಬ್ಯಾರೇಜ್ ಮುಳಗಡೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.