ADVERTISEMENT

ಜಿಲ್ಲಾ ಪಂಚಾಯ್ತಿ: ಈಗ ‘ಗಂಗಾ’ ಕಲಹ!

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 12:53 IST
Last Updated 27 ಸೆಪ್ಟೆಂಬರ್ 2019, 12:53 IST
ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಗಂಗೂಬಾಯಿ ಮೇಟಿ ನೇತೃತ್ವದಲ್ಲಿ ಸದಸ್ಯರು ಸಭೆ ನಡೆಸಿದರು
ಬಾಗಲಕೋಟೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಗಂಗೂಬಾಯಿ ಮೇಟಿ ನೇತೃತ್ವದಲ್ಲಿ ಸದಸ್ಯರು ಸಭೆ ನಡೆಸಿದರು   

ಬಾಗಲಕೋಟೆ: ಅವಧಿಗೆ ಮುನ್ನವೇ ಮಾಡಿದ್ದ ತಮ್ಮ ವರ್ಗಾವಣೆಗೆ ಸಿಇಒ ಗಂಗೂಬಾಯಿ ಮಾನಕರ ಕೇಂದ್ರೀಯ ಆಡಳಿತಾತ್ಮಕ ನ್ಯಾಯಾಲಯದಿಂದ (ಸಿಎಟಿ) ಗುರುವಾರ ತಡೆಯಾಜ್ಞೆ ತಂದಿದ್ದಾರೆ. ಇದು ಜಿಲ್ಲಾ ಪಂಚಾಯ್ತಿ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ.

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಗಂಗೂಬಾಯಿ ಮೇಟಿ (ಬಾಯಕ್ಕ) ನೇತೃತ್ವದಲ್ಲಿ ಶುಕ್ರವಾರ ಸಭೆ ನಡೆಸಿದ ಸದಸ್ಯರು, ‘ನಮ್ಮ ಮಾತು ಕೇಳದ ಈ ಸಿಇಒ ಸೇವೆ ನಮಗೆ ಬೇಡ’ ಎಂಬ ಭಾವನೆಯನ್ನು ಒಕ್ಕೊರಲಿನಿಂದ ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಲ್ಲಿಸಲಿದ್ದೇವೆ‘ ಎಂದು ಸ್ಪಷ್ಟಪಡಿಸಿದರು. 6363672125

ಠರಾವು ಮಾಡೊಲ್ಲ:

ADVERTISEMENT

ಸಭೆಗೂ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಬಾಯಕ್ಕ ಮೇಟಿ, ‘ಸಿಇಒ ಗಂಗೂಬಾಯಿ ಮಾನಕರ ಅವರನ್ನು ವಾಪಸ್ ಕರೆಸಿಕೊಂಡು ಈಗಿರುವ ಮೊಹಮ್ಮದ್ ಇಕ್ರಂ ಷರೀಫ್ ಅವರನ್ನೇ ಮುಂದುವರೆಸಲಿ ಎಂದು ಠರಾವು ಮಾಡಿ ಸರ್ಕಾರಕ್ಕೆ ಕಳುಹಿಸಲಾಗುವುದು‘ ಎಂದು ಹೇಳಿದರು.

‘ಗಂಗೂಬಾಯಿ ಅವರನ್ನು ಮತ್ತೆ ಅದೇ ಹುದ್ದೆಗೆ ಸರ್ಕಾರ ನೇಮಕ ಮಾಡಿಲ್ಲ. ಬದಲಿಗೆ ಸಿಎಟಿ ಮಾಡಿದೆ. ಹೀಗೆ ಠರಾವು ಮಾಡುವುದು ನ್ಯಾಯಾಂಗ ನಿಂದನೆಯಾಗುವುದಿಲ್ಲವೇ‘ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಇಲ್ಲ ಠರಾವು ಮಾಡುತ್ತಿಲ್ಲ. ಬದಲಿಗೆ ನಮ್ಮ ಅಭಿಪ್ರಾಯ ಇಲಾಖೆಯ ಮೇಲಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಹಂಚಿಕೊಳ್ಳಲಾಗುವುದು. ಇದು ಕೇವಲ ನನ್ನ ತೀರ್ಮಾನವಲ್ಲ. ಪಕ್ಷಾತೀತವಾಗಿ ಎಲ್ಲ ಸದಸ್ಯರ ಒಕ್ಕೊರಲ ನಿರ್ಧಾರ. ಅವರ (ಸದಸ್ಯರ) ನಿಲುವನ್ನು ನಾನು ವ್ಯಕ್ತಪಡಿಸುತ್ತಿರುವೆ’ ಎಂದು ಸ್ಪಷ್ಟಪಡಿಸಿದರು.

ನಮ್ಮ ಮಾತು ಕೇಳೊಲ್ಲ:

‘ಗಂಗೂಬಾಯಿ ಯಾವುದೇ ಸದಸ್ಯರ ಮಾತು ಕೇಳುತ್ತಿರಲಿಲ್ಲ. ಫೋನ್ ಕರೆ ಸ್ವೀಕರಿಸೊಲ್ಲ. ಪಿಡಿಒ ವರ್ಗಾವಣೆ ಮಾಡುವಂತೆ ಹಲವು ಬಾರಿ ಹೇಳಿದರೂ ಕಿವಿಮೇಲೆ ಹಾಕಿಕೊಳ್ಳಲಿಲ್ಲ. ಅವರಿಗೆ ಬಾಗಲಕೋಟೆಯೇ ಏಕೆ ಬೇಕು. ಸರ್ಕಾರ ವರ್ಗಾಯಿಸಿದ ಕಡೆಗೆ ಹೋಗಬಾರದೇಕೆ‘ ಎಂದು ಕಲಾದಗಿ ಕ್ಷೇತ್ರದ ಸದಸ್ಯೆ ಶೋಭಾ ಬಿರಾದಾರ ಪ್ರಶ್ನಿಸಿದರು.

‘ಅಭಿವೃದ್ಧಿ ಕಾಮಗಾರಿಗಳ ಕಡತಗಳಿಗೆ ಸಹಿ ಹಾಕದೇ ಸತಾಯಿಸುತ್ತಿದ್ದರು. ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ದರ್ಪ ತೋರುತ್ತಿದ್ದರು. ಅಧಿಕಾರಿ, ಸಿಬ್ಬಂದಿಗಳ ಬಗ್ಗೆ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡಿದರೆ ಅವರನ್ನೇ ಸಮರ್ಥಿಸಿಕೊಂಡು ಮಾತನಾಡುತ್ತಿದ್ದರು‘ ಎಂದು ಸದಸ್ಯ ಭೀಮನಗೌಡ ಪಾಟೀಲ ಹೇಳಿದರು.

‘ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರ ನೇಮಕದಲ್ಲಿ ಅವ್ಯವಹಾರ ನಡೆದಿದ್ದು, ಆ ಬಗ್ಗೆ ಮಾಹಿತಿ ನೀಡಿದರೂ ಏನೂ ಕ್ರಮ ಕೈಗೊಳ್ಳಲಿಲ್ಲ. ಸಿಇಒ ಯಾವಾಗಲೂ ‘ಬ್ಯುಸಿ‘ ಎಂದು ಹೇಳುತ್ತಿದ್ದರು. ಭೇಟಿಗೆ ಅವಕಾಶ ನೀಡುತ್ತಿ ರಲಿಲ್ಲ‘ ಎಂದುಸದಸ್ಯರು ಆರೋಪಿಸಿದರು.

ಸಭೆಯಲ್ಲಿ ಸದಸ್ಯರಾದ ಕಸ್ತೂರಿ ಲಿಂಗಣ್ಣವರ, ಕವಿತಾ ದಡ್ಡಿ, ಸರಸ್ವತಿ ಮೇಟಿ, ಜಯಶ್ರೀ ಶರ್ಮಾ, ರತ್ನಾ ತಳೇವಾಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.