ADVERTISEMENT

ಅಶ್ಲೀಲ ಪೋಸ್ಟರ್‌ಗಳ ತೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2012, 6:15 IST
Last Updated 9 ಆಗಸ್ಟ್ 2012, 6:15 IST

ಬಳ್ಳಾರಿ: ಮಹಿಳೆಯರು, ಮಕ್ಕಳು ಮತ್ತು ವಿದ್ಯಾರ್ಥಿನಿಯರು ತಲೆ ತಗ್ಗಿಸಿ ಓಡಾಡುವಂತೆ ಮಾಡಿರುವ ಅಶ್ಲೀಲ ಸಿನಿಮಾ, ಪೋಸ್ಟರ್‌ಗಳ ಹಾವಳಿಯನ್ನು ತಪ್ಪಿಸುವಂತೆ ವಿವಿಧ ಸಂಘಟನೆಗಳ ಸದಸ್ಯರು ಆಗ್ರಹಿಸಿದ್ದಾರೆ.
ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‌ಎಸ್), ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಎಸ್‌ಓ) ಹಾಗೂ ಬಳ್ಳಾರಿ ನಾಗರಿಕ ಹೋರಾಟ ಸಮಿತಿಗಳು ಅಶ್ಲೀಲ ಪೋಸ್ಟರ್‌ಗಳ ವಿರುದ್ಧ

ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿವೆ. ಸಮಾಜದ ಸ್ವಾಸ್ಥ್ಯವನ್ನೇ ಹಾಳು ಮಾಡುತ್ತ, ವಿದ್ಯಾರ್ಥಿಗಳು ಮತ್ತು ಯುವಜನರ ದಿಕ್ಕು ತಪ್ಪಿಸುತ್ತ, ಮಹಿಳೆಯರ ಮೇಲಿನ  ಗೌರವ ಕಡಿಮೆಯಾಗಿ, ಅತ್ಯಾಚಾರ ಮತ್ತಿತರ ಅಕ್ರಮಗಳಿಗೆ

ಪ್ರೇರಣೆಯಾಗಿರುವ  ಕಾಮೋತ್ತೇಜಿತ ಪೋಸ್ಟರ್‌ಗಳು, ನಟಿಯರ ನಗ್ನಚಿತ್ರಗಳು, ಲೈಂಗಿಕ ಕ್ರಿಯೆಯಲ್ಲಿ ತೊಡಗಿದ ಜೋಡಿಗಳ ಚಿತ್ರಗಳು ನಗರದಾದ್ಯಂತ ರಾರಾಜಿಸುತ್ತಿರುವುದು ಆತಂಕಕ್ಕೆ ಈಡು ಮಾಡಿದೆ. ನಗರದ ವಿವಿಧ  ಚಿತ್ರಮಂದಿರಗಳಲ್ಲಿ ಎಗ್ಗಿಲ್ಲದೆ ವಯಸ್ಕರ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ ಎಂದು ಆರೋಪಸಿಲಾಗಿದೆ.

ಕಾನೂನುಬಾಹಿರವಾದ ಅಶ್ಲೀಲ ಪೋಸ್ಟರ್‌ಗಳನ್ನು ತೆರವುಗೊಳಿಸಲು ಕೂಡಲೆ ಸೂಕ್ತ ಕ್ರಮ ಕೈಕೊಳ್ಳಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ಅವರಿಗೆ ಸಲ್ಲಿಸಿರುವ ಮನವಿ ಪತ್ರದಲ್ಲಿ ಕೋರಲಾಗಿದೆ.

ಎಂ.ಎನ್. ಮಂಜುಳಾ, ಡಾ. ಪ್ರಮೋದ್, ಡಿ.ನಾಗಲಕ್ಷ್ಮಿ, ಶಾಂತಾ, ಹೇಮನಗೌಡ, ಭುವನಾ, ಉಮೇಶ್, ಗೋವಿಂದ ಮತ್ತಿತರರು ಉಪಸ್ಥಿತರಿದ್ದು, ಮಹಾನಗರ ಪಾಲಿಕೆ ಮುಖ್ಯಸ್ಥರೊಂದಿಗೆ ಚರ್ಚಿಸಿ, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ಕ್ರಮ ಕೈಗೊಳ್ಳದಿದ್ದಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳೊಂದಿಗೆ ಉಗ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.