ADVERTISEMENT

ಇದ್ದೂ ಇಲ್ಲದಂತಾಗಿರುವ ಅಂಬೇಡ್ಕರ್ ಭವನ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2013, 5:26 IST
Last Updated 7 ಸೆಪ್ಟೆಂಬರ್ 2013, 5:26 IST

ಹಗರಿಬೊಮ್ಮನಹಳ್ಳಿ: ದಲಿತ ಸಮುದಾಯದ ಬಹು ನಿರೀಕ್ಷಿತ ಆಶಯಗಳಿಗೆ ತಕ್ಕಂತೆ ನಿರ್ಮಾಣವಾಗಿರುವ ತಾಲ್ಲೂಕಿನ ವಲ್ಲಭಾಪುರ ಗ್ರಾಮದ ಅಂಬೇಡ್ಕರ್ ಸಮುದಾಯ ಭವನ ದಲಿತರ ಸಂವೇದನೆಗಳಿಗೆ ವೇದಿಕೆಯಾಗದೆ ಅನೈತಿಕ ಚಟುವಟಿಕೆಗಳ ಕೇಂದ್ರವಾಗಿ ಬದಲಾಗಿದೆ.

ತಾಲ್ಲೂಕು ಕೇಂದ್ರದಿಂದ ಕೇವಲ 4ಕಿಮೀ ದೂರದ ವಲ್ಲಭಾಪುರ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆಯ ರೂ 5 ಲಕ್ಷ ಅನುದಾನದಲ್ಲಿ ನಿರ್ಮಾಣವಾಗಿದೆ. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ ಆದಾಗಿನಿಂದಲೂ ಸಾರ್ವಜನಿಕರಿಗೆ ಬಳಕೆಯಾಗಿಲ್ಲ. ಫಲವಾಗಿ ಭವನದ ಕಿಟಕಿ ಮತ್ತು ಬಾಗಿಲುಗಳು ಕಿಡಿಗೇಡಿಗಳು ಮರಿದು ಹಾಕಿದ್ದಾರೆ. ಭವನದ ಒಳಗೆ ಇಸ್ಪೀಟ್ ಎಲೆಗಳು ಬಿದ್ದಿವೆ. ಹಗಲಿನಲ್ಲಿಯೂ ಜೂಜಾಟ ನಡೆಯುತ್ತಿದ್ದರೆ, ರಾತ್ರಿ ಅನೈತಿಕ ಚಟುವಟಿಕೆಗಳು ಎಗ್ಗಿಲ್ಲದೇ ನಡೆಯುತ್ತವೆ ಎಂದು ಗ್ರಾಮದ ಮರಿಯಪ್ಪ ಬೇಸರ ವ್ಯಕ್ತಪಡಿಸುವರು.

ಇದೇ ಭವನದ ಸಮೀಪದಲ್ಲಿಯೇ ಸಮಾಜ ಕಲ್ಯಾಣ ಇಲಾಖೆಯ ಮೊರಾರ್ಜಿ ದೇಸಾತಿ ವಸತಿ ಶಾಲಾ ಸಂಕೀರ್ಣವಿದೆ. ತಾಲ್ಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು ಶಾಲೆಯ ಪರಿಶೀಲನೆ ನಡೆಸುತ್ತಾರೆ. ಆದರೆ ಭವನದ ದುಸ್ಥಿತಿಯನ್ನು ಗಮನಿಸಿದರೂ ಇತ್ತ ಆಸಕ್ತಿ ತೋರದೆ ನಿರ್ಲಕ್ಷ್ಯ ತೋರುವರು ಎಂಬುದು ಕೊಟ್ರೇಶ್ ಅವರ ಆತಂಕ.

ಚಿಂತ್ರಪಳ್ಳಿ ಗ್ರಾ.ಪಂ. ವ್ಯಾಪ್ತಿಯ ಈ ಗ್ರಾಮದಲ್ಲಿ ಇತ್ತೀಚಿಗೆ ನಡೆದ ವಾರ್ಡ್ ಸಭೆಯಲ್ಲಿ ಭವನದ ದುಸ್ಥಿತಿ ಕುರಿತಂತೆ ಚರ್ಚೆಯಾಗಿ ನಿರ್ವಹಣೆಯ ಜವಾಬ್ದಾರಿಯನ್ನು ಗ್ರಾ.ಪಂ.ಗೆ ವಹಿಸಬೇಕು ಎಂದು ನಿರ್ಣಯ ಮಾಡಲಾಗಿದೆ. ಆದರೆ, ಭವನದ ನಿರ್ವಹಣೆಗೆ ಗ್ರಾ.ಪಂ. ಇನ್ನೂ ಮುಂದಾಗಿಲ್ಲ.

ದಲಿತ ಸಂವೇದನೆಗಳನ್ನು ಸಾಮಾಜಿಕವಾಗಿ ನಿಕಷಕ್ಕೊಡ್ಡುವ, ಅವರ ತತ್ವ ಮತ್ತು ಸಿದ್ಧಾಂತಗಳನ್ನು ವೈಚಾರಿಕ ನೆಲಗಟ್ಟಿನಲ್ಲಿ ಅನುರಣಿಸಬೇಕಿದ್ದ ಅಂಬೇಡ್ಕರ್ ಭವನ ಹೀಗೆ ಅನೈತಿಕ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ಅಂಬೇಡ್ಕರ್ ಅವರಿಗೆ ಎಸಗುತ್ತಿರುವ ಅವಮಾನವಾಗಿದೆ.

ಕೂಡಲೆ ಸಮರ್ಪಕ ನಿರ್ವಹಣೆಯ ಮೂಲಕ ಭವನದ ಸದ್ಬಳಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಂದು ಡಾ.ಬಾಬು ಜಗಜೀವನರಾಮ್ ಜಾಗೃತಿ ವೇದಿಕೆ ಅಧ್ಯಕ್ಷ ವೈ.ಅಂಬರೀಶ್, ತಾಲ್ಲೂಕು ಅಂಬೇಡ್ಕರ್ ಸಂಘದ ಅಧ್ಯಕ್ಷ ಎಚ್.ದೊಡ್ಡಬಸಪ್ಪ ಮತ್ತು ಯಡ್ರಾಮನಹಳ್ಳಿ ಮರಿಯಪ್ಪ, ಕೆಚ್ಚಿನಬಂಡಿ ದುರುಗಪ್ಪ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.