ADVERTISEMENT

ಕನ್ನಡ ಕಥಾ ಸಾಹಿತ್ಯದ ಜನಕ ರಾಭೂ: ಕಣವಿ

​ಪ್ರಜಾವಾಣಿ ವಾರ್ತೆ
Published 24 ಜೂನ್ 2013, 4:31 IST
Last Updated 24 ಜೂನ್ 2013, 4:31 IST

ಧಾರವಾಡ: ಇಲ್ಲಿಯ ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಚಾರ್ಯರಾಗಿ ಕೆಲಸ ಮಾಡಿದ ಡಾ.ರಾಜಶೇಖರ ಭೂಸನೂರಮಠ (ರಾಭೂ) ಅವರು ಕನ್ನಡ ಕಥಾ ಸಾಹಿತ್ಯದ ಜನಕರೂ ಹೌದು ಎಂದು ಹಿರಿಯ ಕವಿ ಡಾ.ಚನ್ನವೀರ ಕಣವಿ ಹೇಳಿದರು.

ಡಾ.ರಾಜಶೇಖರ ಭೂಸನೂರಮಠ ಅವರಿಗೆ 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಅಭಿನಂದನಾ ಸಮಿತಿಯು ಭಾನುವಾರ ಏರ್ಪಡಿಸಿದ್ದ ರಾಭೂ ದಂಪತಿಗೆ ಸನ್ಮಾನ ಹಾಗೂ ಅಭಿನಂದನ ಕೃತಿ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

`ಅವರ ತಂದೆ ಸಂ.ಶಿ. ಭೂಸನೂರ ಮಠ ಅವರು ಮಗನ ವಿದ್ವತ್ತನ್ನು ಗುರುತಿಸಿ ಉನ್ನತ ಶಿಕ್ಷಣ ಕೊಡಿಸಿದರು. ರಾಭೂ ಅವರು ಭೌತಶಾಸ್ತ್ರದ ಉಪನ್ಯಾಸಕರಾಗಿ ನಂತರ ವ್ಯಾಪಕ ವಾಗಿ ಬರವಣಿಗೆಯಲ್ಲಿ ತೊಡಗಿಸಿ ಕೊಂಡರು. ಸುಧಾ, ಮಯೂರಗಳಲ್ಲಿ ಬಂದ ಅವರ ಲೇಖನ ಹಾಗೂ ಕರ್ನಾಟಕ ವಿ.ವಿ.ಯ ವಿಜ್ಞಾನ ಭಾರತಿಯ ಸಂಸ್ಥಾಪಕ ಸಂಪಾದಕರಾಗಿ ಪ್ರಕಟಿಸಿದ ವಿಜ್ಞಾನ ಬರಹಗಳು ಹೊಸ ತಲೆಮಾರಿನ ಲೇಖಕರಿಗೆ ಸ್ಫೂರ್ತಿ ನೀಡಿದವು' ಎಂದರು.

ಸಾನ್ನಿಧ್ಯ ವಹಿಸಿದ್ದ ಹೊಸಪೇಟೆಯ ಕೊಟ್ಟೂರುಸ್ವಾಮಿ ಸಂಸ್ಥಾನಮಠದ ಸಂಗನಬಸವ ಸ್ವಾಮೀಜಿ, `ಭೌತಿಕ ಸಂಪತ್ತಿಗಿಂತಲೂ ಆಧ್ಯಾತ್ಮಿಕ ಸಂಪತ್ತೇ ಬಹು ಮುಖ್ಯವಾಗಿದ್ದು, ಅದರಿಂದಲೇ ಬದುಕಿಗೆ ಶಾಶ್ವತ ಸುಖ ಪ್ರಾಪ್ತವಾಗುತ್ತದೆ' ಎಂದು ಹೇಳಿದರು.

1 ಲಕ್ಷ ಕೊಡುಗೆ
ಜನಮನದಲ್ಲಿ ಆಧ್ಯಾತ್ಮದ ಒಲವನ್ನು ಬೆಳೆಸುತ್ತಿರುವ ರಾಭೂ ಕನಸಿನ ವೈಭವಿ ಜ್ಞಾನ ಮಂದಿರದ ಸರ್ವಾಂಗೀಣ ವಿಕಾಸಕ್ಕಾಗಿ ಶ್ರೀಮಠ ದಿಂದ ಒಂದು ಲಕ್ಷ ರೂಪಾಯಿಗಳ ಕೊಡುಗೆ ನೀಡುವುದಾಗಿ ಸ್ವಾಮೀಜಿ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಹೊರತಂದ `ವೈಭವಿ' ಅಭಿನಂದನಾ ಗ್ರಂಥವನ್ನು ವಿಶ್ರಾಂತ ಕುಲಪತಿ ಡಾ.ಎಂ.ಐ.ಸವದತ್ತಿ ಬಿಡುಗಡೆ ಮಾಡಿದರು.
ಭೂಸನೂರಮಠರ `ಮನ್ವಂತರ' ಕಾದಂಬರಿಯನ್ನು ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.