ADVERTISEMENT

ಗ್ರಾಮೀಣರಿಗೂ ಸೌಲಭ್ಯ ನೀಡಲು ಮುಂದಾಗಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2012, 6:10 IST
Last Updated 30 ಜೂನ್ 2012, 6:10 IST
ಗ್ರಾಮೀಣರಿಗೂ ಸೌಲಭ್ಯ ನೀಡಲು ಮುಂದಾಗಿ
ಗ್ರಾಮೀಣರಿಗೂ ಸೌಲಭ್ಯ ನೀಡಲು ಮುಂದಾಗಿ   

ಬಳ್ಳಾರಿ: ಬ್ಯಾಂಕುಗಳು ಅಳವಡಿಸಿಕೊಳ್ಳುತ್ತಿರುವ ಹೊಸ ತಂತ್ರಜ್ಞಾನ ಹಾಗೂ ತ್ವರಿತ ಸೇವೆಗಳನ್ನು ಕೇವಲ ಮೆಟ್ರೊ ಸಿಟಿಗಳಿಗೆ ಮಾತ್ರ ಸೀಮಿತಗೊಳಿಸದೆ ಗ್ರಾಮೀಣರಿಗೂ ಬ್ಯಾಂಕಿನ ಸೌಲಭ್ಯಗಳನ್ನು ನೀಡಲು ಮುಂದಾಗಬೇಕು ಎಂದು ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಡಾ.ಮಂಜಪ್ಪ ಡಿ. ಹೊಸಮನಿ ಸಲಹೆ ನೀಡಿದರು.

ಇಲ್ಲಿನ ಪಾರ್ವತಿನಗರದಲ್ಲಿ ಶುಕ್ರವಾರ ನಡೆದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಮುಖ್ಯ ಶಾಖೆಯ ಉದ್ಘಾಟನಾ ಸಮಾರಂಭದಲ್ಲಿ  ಮಾತನಾಡಿದರು.

ದೇಶದ ಆರ್ಥಿಕ ಪ್ರಗತಿಯಲ್ಲಿ ಬ್ಯಾಂಕುಗಳ ಪಾತ್ರ ದೊಡ್ಡದು. ಗ್ರಾಹಕರಿಗೆ ತ್ವರಿತಗತಿಯಲ್ಲಿ ಸೇವೆ ನೀಡಬೇಕು ಎಂಬ ತುಡಿತದಿಂದ ಹೆಚ್ಚುತ್ತಿರುವ ಪೈಪೋಟಿ ಆರೋಗ್ಯಕರವಾದದ್ದು. ಆದರೆ, ಎಲ್ಲ ಸೌಲಭ್ಯಗಳು ನಗರ ಪ್ರದೇಶದ ಜನರಿಗೆ ಸೀಮಿತಗೊಂಡರೆ ಬ್ಯಾಂಕುಗಳ ಆಶಯ ಸಫಲವಾಗುವುದಿಲ್ಲ.
 
ಗ್ರಾಮೀಣರಲ್ಲಿ ಇಂದು ಉಳಿತಾಯ ಮನೋಭಾವ ಹೆಚ್ಚುತ್ತಿದೆ. ಅವರನ್ನು ಬ್ಯಾಂಕುಗಳ ವ್ಯಾಪ್ತಿಗೆ ತರಬೇಕು. ಆರ್ಥಿಕ ಅಭಿವೃದ್ಧಿ ನೆಲೆಯಲ್ಲಿ ಗ್ರಾಮೀಣರಿಗೆ ಹಲವು ಸೌಲಭ್ಯಗಳನ್ನು ನೀಡಲು ಬ್ಯಾಂಕುಗಳು ಮುಂದಾಗಬೇಕು ಎಂದರು. 

 ಬ್ಯಾಂಕ್ ಶಾಖೆ ಉದ್ಘಾಟಿಸಿದ ಜಿಲ್ಲಾ ಸೆಷನ್ಸ್ ಮುಖ್ಯ ನ್ಯಾಯಾಧೀಶೆ ಎಂ.ಜಿ. ಉಮಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಗ್ರಾಹಕರ ಅನುಕೂಲಕ್ಕಾಗಿ ಕಳೆದ ನೂರಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ. ಸಮಾಜದ ಕಳಕಳಿ ಹೊಂದಿರುವ ಈ ಕೋರ್ ಬ್ಯಾಂಕ್, ತನ್ನ ಗ್ರಾಹಕರಿಗೆ ಸರಳ ರೀತಿಯ ಸೇವೆ ಒದಗಿಸಲು ಹಲವು ಯೋಜನೆ ಅನುಷ್ಠಾನಕ್ಕೆ ತಂದಿದೆ.

ಯಾವುದೇ ಗ್ರಾಹಕ ಯಾವುದೇ ಸ್ಥಳದಲ್ಲಿರಲಿ, ತನ್ನಲ್ಲಿರುವ ಹಣವನ್ನು ನೇರವಾಗಿ ಎಟಿಎಂನಲ್ಲಿ ಹಾಕಿ, ತನಗಿಷ್ಟ ಬಂದಲ್ಲಿ ಮತ್ತೆ ಪಡೆಯುವ ಸೌಲಭ್ಯವುಳ್ಳ ತಾಂತ್ರಿಕತೆ ಅಳವಡಿಸಿರುವುದು ನಿಜಕ್ಕೂ ಶ್ಲಾಘನೀಯ. ಬಳ್ಳಾರಿಯ ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳುವಂತಾಗಬೇಕು ಎಂದು ತಿಳಿಸಿದರು.

ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಆರ್. ಸುಬ್ರಮಣಿುಮಾರ್, ಪಂಜಾಬ್ ಬ್ಯಾಂಕಿಗೆ ನೂರಾರು ವರ್ಷಗಳ ಸುದೀರ್ಘ ಇತಿಹಾಸವಿದೆ. ಸ್ವಾತಂತ್ರ್ಯ ಹೋರಾಟಗಾರರಾದ ಲಾಲಾ ಲಜಪತರಾಯ್ ಬ್ಯಾಂಕ್ ಸಂಸ್ಥಾಪಕರು ಎಂದು ತಿಳಿಸಲು ಹೆಮ್ಮೆ ಎನಿಸುತ್ತಿದೆ.

1886ರಲ್ಲಿ ಸ್ಥಾಪನೆಯಾದ ಈ ಬ್ಯಾಂಕು ವಿಶ್ವದಾದ್ಯಂತ 6 ಸಾವಿರ ಶಾಖೆಗಳನ್ನು ಹೊಂದಿದೆ. ಕರ್ನಾಟಕದ ಬೆಂಗಳೂರಿನಲ್ಲಿ 5 ಶಾಖೆಗಳಿದ್ದು, ರಾಜ್ಯದೆಲ್ಲೆಡೆ 75ನೇ ಶಾಖೆಗಳಿವೆ. 2013ರೊಳಗೆ 100 ಶಾಖೆಗಳನ್ನು ತೆರೆಯುವ ಗುರಿ ಇಟ್ಟುಕೊಳ್ಳಲಾಗಿದೆ. ಗ್ರಾಹಕರಿಗೆ ಅಗತ್ಯ ಸೇವೆ ನೀಡುವುದು ಹಾಗೂ ಬ್ಯಾಂಕ್‌ನ ಪ್ರಗತಿ ಜತೆಯಲ್ಲಿಯೇ ಗ್ರಾಹಕರನ್ನು ಪ್ರಗತಿಯತ್ತ ಕೊಂಡೊಯ್ಯುವುದು ಬ್ಯಾಂಕ್‌ನ ಮೂಲ ಆಶಯವಾಗಿದೆ ಎಂದರು.
ಬ್ಯಾಂಕ್ ವತಿಯಿಂದ ಹಲವಾರು ಜನಪ್ರಿಯ ಯೋಜನೆಗಳನ್ನು ಈಗಾಗಲೇ ಪರಿಚಯಿಸಲಾಗಿದ್ದು, ಹೆಚ್ಚು ಹೆಚ್ಚು ತಾಂತ್ರಿಕತೆ ಮೂಲಕ ಗ್ರಾಹಕರಿಗೆ ಹೆಚ್ಚಿನ ಸೇವೆ ನೀಡಲಾಗುತ್ತಿದೆ ಎಂದರು.

ಉದ್ಯಮಿ ಬಿಕೆಬಿಎನ್ ಮೂರ್ತಿ, ಈ ಬ್ಯಾಂಕ್ ಸ್ವದೇಶಿ ಬಂಡವಾಳ ಹೂಡಿಕೆಯಿಂದ ಆರಂಭಗೊಂಡಿದ್ದು, ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದೆ.  ರಾಷ್ಟ್ರಪಿತ ಮಹಾತ್ಮಾಗಾಂಧೀಜಿ ಅವರು ಈ ಬ್ಯಾಂಕಿನ ಗ್ರಾಹಕರಾಗಿದ್ದರು ಎಂಬುದು ಈ ಬ್ಯಾಂಕಿಗಿರುವ ಮತ್ತೊಂದು ಗರಿಮೆ. ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಸೇವೆಗೆ ಒತ್ತು ಕೊಡುತ್ತಿರುವ ಬ್ಯಾಂಕ್ ನೀತಿ ಗ್ರಾಹಕರಿಗೆ ಹೆಚ್ಚು ಅನುಕೂಲ ಒದಗಿಸುತ್ತದೆ ಎಂದು ಹೇಳಿದರು.

ನಾಗರತ್ನ ಮೂರ್ತಿ ಪ್ರಾರ್ಥನಾ ಗೀತೆ ಹಾಡಿದರು. ಬ್ಯಾಂಕಿನ ವ್ಯವಸ್ಥಾಪಕ ಡಿವಿಎಸ್ ಸೂರ್ಯನಾರಾಯಣ ನಿರೂಪಿಸಿದರು. ಬ್ಯಾಂಕಿನ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗಾಹಕರು ಸಮಾರಂಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.