ಬಳ್ಳಾರಿ: ನಗರದ ಜನನಿಬಿಡ ಪ್ರದೇಶವಾಗಿರುವ ಕನಕ ದುರ್ಗಮ್ಮ ದೇವಸ್ಥಾನದ ಬಳಿಯ ವೃತ್ತದಲ್ಲಿ ಸಂಚಾರ ಠಾಣೆಯಿಂದ ಹೊಸದಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.
ಹಳೆಯ ಬಸ್ ನಿಲ್ದಾಣ, ಮೋಕಾ ರಸ್ತೆ, ಕಪಗಲ್ ರಸ್ತೆ, ಮಹರ್ಷಿ ವಾಲ್ಮೀಕಿ ವೃತ್ತ, ಕೇಂದ್ರ ಕಾರಾಗೃಹ ರಸ್ತೆ ಸೇರಿದಂತೆ ಐದು ಪ್ರಮುಖ ರಸ್ತೆಗಳು ಸೇರುವ ಈ ವೃತ್ತದಲ್ಲಿ ಮಂಗಳವಾರ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಕಾರ್ಯ ಪೂರ್ಣಗೊಂಡಿದ್ದು, ಕೆಲವೇ ದಿನಗಳಲ್ಲಿ ಸಿಗ್ನಲ್‌ಗಳು ಕಾರ್ಯಾರಂಭ ಮಾಡಲಿವೆ.
ಅತ್ಯಂತ ಜನನಿಬಿಡವಾದ ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಅಧಿಕವಾಗಿ ಕಂಡುಬರುವುದರಿಂದ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ. ಪಾದಚಾರಿಗಳ ಸುಗಮ ಸಂಚಾರಕ್ಕೆ ಅನಗತ್ಯವಾಗುವಂತೆ ಸಿಗ್ನಲ್ ಇರಿಸಲಾಗುತ್ತದೆ. ಸಾರ್ವಜನಿಕರು ರಸ್ತೆ ದಾಟುವಾಗ ಸಂಚಾರ ನಿಯಮ ಪಾಲಿಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.
ಗ್ರಾಮೀಣ ಭಾಗದ ಅನೇಕರು ನಿತ್ಯವೂ ವಾಹನಗಳ ಮೂಲಕ ನಗರಕ್ಕೆ ಆಗಮಿಸುವುದರಿಂದ ಸಂಚಾರ ದಟ್ಟಣೆ ಕಂಡುಬರುತ್ತದೆ. ಅಲ್ಲದೆ, ಅನೇಕರು ಸಂಚಾರ ನಿಯಮ ಪಾಲಿಸುವಲ್ಲಿ ಜಾಗೃತಿ ವಹಿಸದ್ದರಿಂದ ಅನೇಕ ಅವಗಡಗಳು ಸಂಭವಿಸುತ್ತಿವೆ. ಈ ಹಿನ್ನೆಲೆಯಲ್ಲಿ ಸಂಚಾರ ಪೊಲೀಸ್ ಠಾಣೆಯಿಂದ ಜಾಗೃತಿ ಕಾರ್ಯಕ್ರಮವನ್ನೂ ನಿಯಮಿತವಾಗಿ ಏರ್ಪಡಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ನಗರದ ಮಹರ್ಷಿ ವಾಲ್ಮೀಕಿ ವೃತ್ತ (ಎಸ್.ಪಿ. ವೃತ್ತ)ದಲ್ಲೂ ಕೆಲವೇ ದಿನಗಳಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.