ಬಳ್ಳಾರಿ: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಗುರುವಾರ ಆರಂಭವಾಗಿದ್ದು, ಮೊದಲ ದಿನ ನಡೆದ ಇತಿಹಾಸ ಮತ್ತು ಕಂಪ್ಯೂಟರ್ ಸೈನ್ಸ್ ವಿಷಯದ ಪರೀಕ್ಷೆಗಳಲ್ಲಿ ಒಟ್ಟು 11364 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದರು.
ಜಿಲ್ಲೆಯಲ್ಲಿರುವ ಒಟ್ಟು 21 ಪರೀಕ್ಷಾ ಕೇಂದ್ರಗಳ ಪೈಕಿ, 6 ಅತಿ ಸೂಕ್ಷ್ಮ, 5 ಸೂಕ್ಷ್ಮ, 10 ಸಾಮಾನ್ಯ ಕೇಂದ್ರಗಳಿವೆ. ನಕಲು ಮತ್ತಿತರ ಅಕ್ರಮ ನಡೆಯದಂತೆ ತಡೆಯಲು ಜಾಗೃತ ದಳದ ಐದು ತಂಡಗಳನ್ನು ನಿಯೋಜಿಸಲಾಗಿದ್ದು, ಗುರುವಾರ ಯಾವುದೇ ವಿದ್ಯಾರ್ಥಿಗಳು ಡಿಬಾರ್ ಆಗಿಲ್ಲ.
ಜಿಲ್ಲೆಯಲ್ಲಿ ಒಟ್ಟು 18657 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಳ್ಳಲಿದ್ದು, 12828 ಹೊಸ ಅಭ್ಯರ್ಥಿಗಳು, 4618 ಜನ ಮರು ಅಭ್ಯರ್ಥಿಗಳು, 1201 ಜನ ಖಾಸಗಿ ಅಭ್ಯರ್ಥಿಗಳು ಇವರಲ್ಲಿ ಸೇರಿದ್ದಾರೆ.
ಗುರುವಾರ ಇತಿಹಾಸ ವಿಷಯದ 9242 ಜನ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 822 ಜನ ಗೈರು ಹಾಜರಾಗಿದ್ದಾರೆ. ಕಂಪ್ಯೂಟರ್ ಸೈನ್ಸ್‌ನ 2169 ವಿದ್ಯಾರ್ಥಿಗಳ ಪೈಕಿ 47 ಜನ ಗೈರಾಗಿದ್ದಾರೆ.
ಪರೀಕ್ಷೆಯ ಹಾಲ್ ಟಿಕೆಟ್‌ನಲ್ಲಿ ನಮೂದಿಸಲಾಗಿದ್ದ `ಜಾತಿ~ಯನ್ನು ಕಳೆದ ಮೂರು ದಿನಗಳಿಂದ ವೈಟ್‌ನರ್ ಮೂಲಕ ಅಳಿಸಲಾಗಿದೆ.
ಗುರುವಾರ ಪರೀಕ್ಷೆಗೆ ಹಾಜರಾಗಿದ್ದ ಕೆಲವು ವಿದ್ಯಾರ್ಥಿಗಳ ಬಳಿಯಿದ್ದ ಹಾಲ್‌ಟಿಕೆಟ್‌ನಲ್ಲೂ ನಮೂದಾಗಿದ್ದ ಜಾತಿಯನ್ನು ಅಳಿಸಲಾಗಿದೆ. ಅಲ್ಲದೆ, ಶುಕ್ರವಾರ ಬರುವ ವಿದ್ಯಾರ್ಥಿಗಳ ಹಾಲ್ ಟಿಕೆಟ್ ಪರಿಶೀಲಿಸಿ ನಮೂದಾಗಿರುವ ಜಾತಿಯನ್ನು ಅಳಿಸಲಾಗುವುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಯು. ರಾಮಮೂರ್ತಿ `ಪ್ರಜಾವಾಣಿ~ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.