ADVERTISEMENT

ನವೆಂಬರ್ ಮಹಾಕ್ರಾಂತಿ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2012, 4:15 IST
Last Updated 9 ನವೆಂಬರ್ 2012, 4:15 IST

ಬಳ್ಳಾರಿ: ನಗರದ ಎಸ್.ಯು.ಸಿ.ಐ (ಸಿ) ಪಕ್ಷದ ಕಚೇರಿಯಲ್ಲಿ 95ನೇ ನವೆಂಬರ್ ಮಹಾಕ್ರಾಂತಿ ದಿನಾಚರಣೆಯನ್ನು ಬುಧವಾರ ಆಚರಿಸಲಾಯಿತು. ಲೆನಿನ್‌ರ ಭಾವಚಿತ್ರಕ್ಕೆ ಎಸ್.ಯು.ಸಿ.ಐ(ಸಿ)ನ ಜಿಲ್ಲಾ ಕಾರ್ಯದರ್ಶಿ ಸೋಮಶೇಖರ್ ಮಾಲಾರ್ಪಣೆ ಮಾಡಿ, 1917ರ ನವೆಂಬರ್ 7ರಂದು ರಷ್ಯಾದಲ್ಲಿ ಕಾರ್ಮಿಕ ವರ್ಗದ ಮಹಾಕ್ರಾಂತಿ ನೆರವೇರಿತು.

ಕ್ರಾಂತಿಯ ಮಹಾನ್‌ಶಿಲ್ಪಿ ಲೆನಿನ್ ನೇತೃತ್ವದಲ್ಲಿ ಬಂಡವಾಳಶಾಹಿ ವ್ಯವಸ್ಥೆಯನ್ನು ಕಿತ್ತೆಸೆದು ಸಮಾಜವಾದಿ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು. ಮಾನವನಿಂದ ಮಾನವನ ಶೋಷಣೆಯನ್ನು ಕೊನೆ ಹಾಕುವ ನಿಟ್ಟಿನಲ್ಲಿ ಈ ಐತಿಹಾಸಿಕ ಕ್ರಾಂತಿ ಮಹತ್ವದ ಮೈಲಿಗಲ್ಲಾಗಿದೆ ಎಂದರು.

ಅತ್ಯಂತ ಹಿಂದುಳಿದ ದೇಶವಾಗಿದ್ದ ರಷ್ಯಾ ಸಮಾಜವಾದಿ ಕ್ರಾಂತಿಯ ನಂತರ ಕೆಲವೇ ವರ್ಷಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ಕಂಡಿತು ಎಂದರು.ರಷ್ಯಾದ ಕಮ್ಯೂನಿಸ್ಟ್ ಪಾರ್ಟಿ ನೇತೃತ್ವದಲ್ಲಿ ಶೋಷಿತರ ಪರ, ಕಾರ್ಮಿಕರ ಪರ ನೀತಿಗಳು ಜಾರಿಗೊಂಡವು. ಪ್ರತಿಯೊಬ್ಬರಿಗೂ ಶಿಕ್ಷಣ, ಆರೋಗ್ಯ, ವಸತಿ, ಉದ್ಯೋಗ ಖಚಿತಪಡಿಸಲಾಯಿತು. ಮಹಿಳೆಯರು ಘನತೆಯಿಂದ ಬದುಕುವಂತಾಯಿತು. ವೇಶ್ಯಾವಾಟಿಕೆ, ಭಿಕ್ಷಾಟನೆಯಂಥ ಸಾಮಾಜಿಕ ಪಿಡುಗುಗಳು ನಿರ್ಮೂಲನೆ ಗೊಂಡವು. ಬೆಲೆ ಏರಿಕೆ ಸಮಸ್ಯೆ ಜನರನ್ನು ಕಾಡಲಿಲ್ಲ ಎಂದು ವಿವರಿಸಿದರು.

ವಿಜ್ಞಾನ ಸಂಶೋಧನೆ, ಸಾಹಿತ್ಯ ಹೀಗೆ ಈ ಎಲ್ಲಾ ಕ್ಷೇತ್ರಗಳಲ್ಲೂ ರಷ್ಯಾ ಪ್ರಗತಿಯನ್ನು ಸಾಧಿಸಿತು. ಅದೇ ರೀತಿ ಪ್ರತಿಯೊಬ್ಬರು ಸಮಾಜದ ಅಭಿವೃದ್ಧಿಗಾಗಿ ಎಂಬುವ ಮಹಾನ್ ಸಂಸ್ಕೃತಿ ಜನತೆಯ ಸಂಸ್ಕೃತಿಯಾಯಿತು. ನಮ್ಮ ದೇಶದ ಮಹಾನ್ ಕವಿ ರವೀಂದ್ರನಾಥ್ ಟ್ಯಾಗೂರ್, ನೇತಾಜಿ ಸುಭಾಸ್‌ಚಂದ್ರ ಬೋಸ್, ಐನ್‌ಸ್ಟೈನ್‌ರಂತಹ  ಶ್ರೇಷ್ಠ ವ್ಯಕ್ತಿಗಳು ರಷ್ಯಾವನ್ನು ಗೌರವದಿಂದ ಕಾಣುತ್ತಿದ್ದರು ಎಂದರು.

ಜಿಲ್ಲಾ ಸಮಿತಿಯ ಸದಸ್ಯರಾದ ಮಂಜುಳಾ, ನಾಗಲಕ್ಷ್ಮಿ, ಶಾಂತಾ, ಡಾ. ಪ್ರಮೋದ್, ಇನ್ನಿತರ ಸದಸ್ಯರು ಹಾಗೂ ಬೆಂಬಲಿಗರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.