ADVERTISEMENT

ನಾರಿಹಳ್ಳಕ್ಕೆ ಸೇತುವೆ ನಿರ್ಮಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 4:15 IST
Last Updated 24 ಸೆಪ್ಟೆಂಬರ್ 2011, 4:15 IST

ಕಂಪ್ಲಿ: ಇಲ್ಲಿ ಅನ್ನದಾತರು, ಕೃಷಿ ಕೂಲಿ ಕಾರ್ಮಿಕರು ಹಲವು ದಶಕಗಳಿಂದ ಅನುಭವಿಸುವ ಗೋಳನ್ನು ಕೇಳುವವರು ಯಾರು ಇಲ್ಲ. ಜೀವಭಯ ತೊರೆದು ಹಳ್ಳ ದಾಟಿ ಹೊಟ್ಟೆ ಹೊರೆಯುವುದು ಇವರ ನಿತ್ಯ ಕಾಯಕ.

ಹೋಬಳಿ ವ್ಯಾಪ್ತಿಯ ನಂ.2 ಮುದ್ದಾಪುರ ಗ್ರಾಮದಲ್ಲಿ ಇಂತಹ ಸ್ಥಿತಿ ಇದೆ. ಗ್ರಾಮದ ಪಕ್ಕದಲ್ಲಿ ಹರಿಯುವ ನಾರಿಹಳ್ಳಕ್ಕೆ ಅಡ್ಡಲಾಗಿ ಸೇತುವೆ ನಿರ್ಮಿಸುವಂತೆ ದಶಕಗಳಿಂದ ಚುನಾಯಿತ ಪ್ರತಿನಿಧಿಗಳಿಗೆ ಮತ್ತು ಅಧಿಕಾರಶಾಹಿ ವರ್ಗಕ್ಕೆ ಮನವಿ ಮಾಡಿಕೊಳ್ಳುತ್ತಿದ್ದರೂ ಕವಡೆ ಕಾಸಿನ ಕಿಮ್ಮತ್ತು ದೊರೆಕಿಲ್ಲ ಎನ್ನುವುದು ಇಲ್ಲಿನ ಗ್ರಾಮಸ್ಥರ ಅಳಲು.

ರೈತರು ಹೊಲಗಳಿಗೆ ಗೊಬ್ಬರ ಸಾಗಿಸಲು ಮತ್ತು ಬೆಳೆದ ಫಸಲುಗಳನ್ನು ಬಂಡಿ ಮೂಲಕ ಮನೆಗೆ ಸಾಗಿಸಬೇಕೆಂದರೆ ನಾರಿಹಳ್ಳವನ್ನೇ ಅವಲಂಬಿಸಿದ್ದಾರೆ. ಈ ಸಂದರ್ಭದಲ್ಲಿ ಹಳ್ಳದಲ್ಲಿ ಬಂಡಿಗಳು ಆಯತಪ್ಪಿ ಬಿದ್ದು, ಕಾಳು-ಕಡ್ಡಿ, ಗೊಬ್ಬರ, ಕೃಷಿ ಉಪಕರಣಗಳು ನೀರುಪಾಲಾಗಿ ನಷ್ಟ ಅನುಭವಿಸಿರುವುದಾಗಿ ಅನೇಕ ರೈತರು ತಿಳಿಸುತ್ತಾರೆ. 

 ಅದೇ ರೀತಿ ಕೂಲಿ ಕಾರ್ಮಿಕರು ಹೊಲಗಳಿಗೆ ತೆರಳಬೇಕೆಂದರೆ ಹಳ್ಳದಲ್ಲಿ ನಡೆದುಕೊಂಡೇ ಹೋಗಬೇಕು. ಹಳ್ಳದಲ್ಲಿ ವಿಷಜಂತುಗಳು, ಹುಳ-ಹುಪ್ಪಡಿಗಳಿದ್ದು, ಅಂಜಿಕೆ ತೊರೆದು ಹೊಟ್ಟೆ ಹೊರೆಯಲು ಹೋಗಬೇಕಾಗುತ್ತದೆ ಕೂಲಿಗಳು ನೋವಿನಿಂದ ತಿಳಿಸುತ್ತಾರೆ.

ನಾರಿಹಳ್ಳಕ್ಕೆ ಅಡ್ಡಲಾಗಿ ಶಾಶ್ವತ ಸೇತುವೆ ನಿರ್ಮಿಸುವುದರಿಂದ ರೈತರಿಗೆ, ಕೂಲಿ ಕಾರ್ಮಿಕರಿಗೆ ಮತ್ತು ನಂ.2 ಮುದ್ದಾಪುರ-ಇಟಗಿ-ಎಮ್ಮಿಗನೂರು ಸಂಪರ್ಕಕ್ಕೆ ಅನುಕೂಲವಾಗಲಿದೆ. ಹೀಗಾಗಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೇತುವೆ ನಿರ್ಮಾಣಕ್ಕೆ ಮನಸ್ಸು ಮಾಡಬೇಕು ಎನ್ನುವುದು ಗ್ರಾಮಸ್ಥರ ಮನವಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.