ADVERTISEMENT

ಬಯಲು ಶೌಚಮುಕ್ತ ಗ್ರಾಮ ಪಂಚಾಯ್ತಿ ಅಗ್ಗಳಿಕೆ

ವಿ.ಎಂ.ನಾಗಭೂಷಣ
Published 9 ಅಕ್ಟೋಬರ್ 2017, 5:30 IST
Last Updated 9 ಅಕ್ಟೋಬರ್ 2017, 5:30 IST
ಸಂಡೂರು ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿ ಕಚೇರಿ
ಸಂಡೂರು ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿ ಕಚೇರಿ   

ಸಂಡೂರು: ದಾಖಲಾತಿ ನಿರ್ವಹಣೆ, ಸ್ವಚ್ಛ ಭಾರತ ಮಿಷನ್ ಹಾಗೂ ನರೇಗಾ ಯೋಜನೆ ಗುರಿ ಸಾಧನೆ, ನೈರ್ಮಲ್ಯ, ಕುಡಿಯುವ ನೀರು ನಿರ್ವಹಣೆ ಮುಂತಾದ ಅಂಶಗಳ ಆಧಾರದ ಮೇಲೆ ತಾಲ್ಲೂಕಿನ ದೇವಗಿರಿ ಗ್ರಾಮ ಪಂಚಾಯ್ತಿಯು ಈ ವರ್ಷ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಹಾಗೂ ಸಂಪೂರ್ಣ ಬಯಲು ಶೌಚಮುಕ್ತ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ತಾಲ್ಲೂಕಿನ 26 ಗ್ರಾಮ ಪಂಚಾಯ್ತಿಗಳಲ್ಲಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ದೇವಗಿರಿ, ಬೊಮ್ಮಾಘಟ್ಟ ಹಾಗೂ ತೋರಣಗಲ್ಲು ಗ್ರಾಮ ಪಂಚಾಯ್ತಿಗಳು ಆಯ್ಕೆ ಪಟ್ಟಿಯಲ್ಲಿದ್ದವು. ಸರ್ಕಾರ ನಿಗದಿಪಡಿಸಿದ ಮಾನದಂಡಗಳ ಆಧಾರದ ಮೇಲೆ ಗಾಂಧಿ ಗ್ರಾಮ ಪುರಸ್ಕಾರ ಈ ವರ್ಷವೂ ದೇವಗಿರಿ ಗ್ರಾಮ ಪಂಚಾಯ್ತಿಗೆ ದೊರೆತಿದೆ. ಇದರ ಜೊತೆಗೆ ಗ್ರಾಮ ಪಂಚಾಯ್ತಿ ಹಾಗೂ ಭುಜಂಗನಗರ ಗ್ರಾಮ ಪಂಚಾಯ್ತಿಗಳು ಬಯಲು ಶೌಚ ಮುಕ್ತ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿವೆ.

ಈಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ. ಪಾಟೀಲ್ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್, ಉಪಾಧ್ಯಕ್ಷೆ ಜೆ.ಬಿ. ಜೋತಿ ಹಾಗೂ ಪಿಡಿಒ ಕುಮಾರಸ್ವಾಮಿ ಅವರನ್ನು ಸನ್ಮಾನಿಸಿದರು.

ADVERTISEMENT

ಗುರಿ ಮೀರಿದ ಸಾಧನೆ: 2016–17ರಲ್ಲಿ ದೇವಗಿರಿ ಗ್ರಾಮ ಪಂಚಾಯ್ತಿಗೆ 9000 ಮಾನವ ದಿನಗಳ ಸೃಜನೆಯ ಗುರಿಯನ್ನು ನಿಗದಿಪಡಿಸಲಾಗಿತ್ತು. ಈ ಅವಧಿಯಲ್ಲಿ ಗ್ರಾಮ ಪಂಚಾಯ್ತಿ 9011 ಮಾನವ ದಿನಗಳನ್ನು ನಿರ್ಮಾಣ ಮಾಡಿ, ಪಂಚಾಯ್ತಿ ವ್ಯಾಪ್ತಿಯ ಸುಬ್ರಾಯನಹಳ್ಳಿ, ಕಮ್ಮತ್ತೂರು, ನಾರಾಯಣಪುರ, ದೇವಗಿರಿಗಳಲ್ಲಿ ಚೆಕ್‌ಡ್ಯಾಂ, ಕುಂಟೆಗಳಲ್ಲಿನ ಹೂಳೆತ್ತುವ, ಆಟದ ಮೈದಾನ ದುರಸ್ತಿಗೊಳೀಸುವ ಮುಂತಾದ ಕಾಮಗಾರಿಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಿಡಿಒ ಕುಮಾರಸ್ವಾಮಿ ಪ್ರಜಾವಾಣಿಗೆ ತಿಳಿಸಿದರು.

ಶೌಚಾಲಯ ನಿರ್ಮಾಣ: 2011ರ ಬೇಸ್‌ ಲೈನ್ ಸರ್ವೆ ಪ್ರಕಾರ ಗ್ರಾಮ ಪಂಚಾಯ್ತಿಗೆ ಒಟ್ಟು 810 ಶೌಚಾಲಯಗಳ ಗುರಿಯನ್ನು ನಿಗದಿಪಡಿಸಲಾಗಿತ್ತು. ಇವುಗಳೆಲ್ಲವೂ ಪೂರ್ಣಗೊಂಡಿದ್ದು, ಸರ್ವೆಯಲ್ಲಿ ಬಿಟ್ಟುಹೋಗಿದ್ದ ಮತ್ತು ಇತ್ತೀಚೆಗೆ ಹೊಸದಾಗಿ ನಿರ್ಮಾಣಗೊಂಡಿರುವ ಒಟ್ಟು 268 ಶೌಚಾಲಯಗಳನ್ನು ನಿರ್ಮಾಣ ಮಾಡಬೇಕಿದೆ.ಇವುಗಳ ಪೈಕಿ ಸ್ಮಯೋರ್ ಕಂಪೆನಿಯವರು 80 ಶೌಚಾಲಯಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ನೈರ್ಮಲ್ಯ: 2011ರ ಜನ ಗಣತಿ ಪ್ರಕಾರ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಟ್ಟು 6603 ಜನ ಸಂಖ್ಯೆ ಇದೆ. ಸುಬ್ರಾಯನಹಳ್ಳಿ, ದೇವಗಿರಿ ಕ್ಯಾಂಪ್‌ನಲ್ಲಿ ಸ್ಮಯೋರ್ ಕಂಪೆನಿಯವರೆ ಸ್ವಚ್ಛತೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದಾರೆ. ಸ್ವಚ್ಛತೆಗಾಗಿ ಕಮ್ಮತ್ತೂರು ಗ್ರಾಮದಲ್ಲಿ ಮೂವರು ಮತ್ತು ನಾರಾಯಣಪುರದಲ್ಲಿ ಒಬ್ಬ ಕೆಲಸಗಾರರನ್ನು ನೇಮಿಸಲಾಗಿದೆ. ಈಚೆಗೆ ನಾರಾಯಣಪುರದ ಕೆಲಸಗಾರ ಮೃತಪಟ್ಟ ಹಿನ್ನೆಲೆಯಲ್ಲಿ ಹೊಸದಾಗಿ ಮತ್ತೊಬ್ಬರನ್ನು ನೇಮಿಸಬೇಕಿದೆ ಎಂದರು.

ಬಯೋ ಮೆಟ್ರಿಕ್ ಹಾಜರಾತಿ, ನಿಯಮಾವಳಿಯಂತೆ ಸಾಮಾನ್ಯ ಸಭೆ, ಗ್ರಾಮ ಸಭೆ, ವಾರ್ಡ್‌ಸಭೆಗಳನ್ನು ನಡೆಸಿ, ಅವುಗಳನ್ನು ಪಂಚತಂತ್ರ ವೆಬ್‌ಸೈಟ್‌ಗೆ ಅಳವಡಿಸಲಾಗುತ್ತಿದೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.