ADVERTISEMENT

ಬಳ್ಳಾರಿಯಲ್ಲಿ ಡಾನ್ ಬಾಸ್ಕೋ ಅವಶೇಷ ದರ್ಶನ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2011, 5:00 IST
Last Updated 3 ಸೆಪ್ಟೆಂಬರ್ 2011, 5:00 IST

ಬಳ್ಳಾರಿ: ಶಿಕ್ಷಣ ಪ್ರೇಮಿ, ಸಂತ ಡಾನ್ (ಜಾನ್) ಬಾಸ್ಕೋ ಅವರ ಬಲ ಮುಂಗೈನ  ಅವಶೇಷ ಹಾಗೂ ಅವರ ಮೇಣದ ಪ್ರತಿರೂಪವನ್ನು ಒಳ ಗೊಂಡಿರುವ ಪೆಟ್ಟಿಗೆಯನ್ನು ನಗರಕ್ಕೆ ಶುಕ್ರವಾರ ತರಲಾಗಿದ್ದು, ಸಾವಿರಾರು ಜನ ಭಕ್ತರು ಸಾಮೂಹಿಕ ದರ್ಶನ ಪಡೆದರು.

ರೋಮನ್ ಕ್ಯಾಥೋಲಿಕ್ ಚರ್ಚ್ ವತಿಯಿಂದ 130 ದೇಶಗಳಾದ್ಯಂತ ಪ್ರವಾಸ ಪೂರೈಸಿರುವ ಸಂತ ಡಾನ್ ಬಾಸ್ಕೋ ಅವರ ಮುಂಗೈನ ಪವಿತ್ರ ಅವಶೇಷವನ್ನು ಕ್ರೈಸ್ತ ಸಮುದಾಯದ ಜನತೆ ಶ್ರದ್ಧಾ- ಭಕ್ತಿಯಿಂದ ವೀಕ್ಷಿಸಿದರು.

ಯುವಕರು ಮತ್ತು ಯುವತಿಯರ ಪರವಾಗಿದ್ದ ಡಾನ್ ಬಾಸ್ಕೋ (1815- 1888) ಶಿಕ್ಷಣದ ಅಭಿವೃದ್ಧಿಗೆ ಶ್ರಮಿಸಿದ್ದು, ಅವರ 200ನೇ ಜನ್ಮದಿನಾಚರಣೆಯನ್ನು 2015ರಲ್ಲಿ ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಈ ಯಾತ್ರೆ ನಡೆದಿದೆ.

ನಗರದ ಕಂಟೋನ್ಮೆಂಟ್ ಪ್ರದೇಶದ ಕ್ರಿಸ್ತರಾಜ ದೇವಾಲಯಕ್ಕೆ ಆಗಮಿಸಿದ ಅವಶೇಷವನ್ನು ನಂತರ ಮರಿಯಾ ನಗರದ ಮಾತೆ ಮೇರಿಯ ಚರ್ಚ್‌ನಲ್ಲಿ ಇರಿಸಲಾಗಿದ್ದು, ಭಕ್ತರ ಮಹಾಪೂರ ಹರಿದುಬರುತ್ತಿದೆ.
ಗುರುವಾರ ಬೆಳಿಗ್ಗೆ 9ರವರೆಗೆ ಅವಶೇಷವು ಈ ಚರ್ಚ್‌ನಲ್ಲಿ ಇದ್ದು, ನಂತರ ದೇವದುರ್ಗ, ರಾಯಚೂರು ಮಾರ್ಗವಾಗಿ ಗುಲ್ಬರ್ಗಕ್ಕೆ ತೆರಳಲಿದೆ.

ಇದೇ 8ರಂದು ನಡೆಯಲಿರುವ ಮೇರಿ ಮಾತೆಯ ಜನ್ಮದಿನದ ಅಂಗ ವಾಗಿ ಚರ್ಚ್‌ನಲ್ಲಿ ಒಂಭತ್ತು ದಿನಗಳ ಕಾಲ ಪ್ರವಚನ, ಬೈಬಲ್ ಪಠಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ನಿತ್ಯವೂ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಅಂದು ಸಾಂಸ್ಕೃತಿಕ ಕಾರ್ಯಕ್ರಮ ಕೂಡ ಹಮ್ಮಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.