ADVERTISEMENT

ಬಿಸಿಲು ಕರಗಿ.. ಮುತ್ತಾಗಿ ಸುರಿದ ಮಳೆ...

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 9:10 IST
Last Updated 24 ಏಪ್ರಿಲ್ 2012, 9:10 IST

ಬಳ್ಳಾರಿ: ಭಾರಿ ಬಿಸಿಲಿನಿಂದ ಕಂಗೆಟ್ಟಿದ್ದ ಬಳ್ಳಾರಿಯ ಜನತೆಗೆ ಸೋಮವಾರ ಮಧ್ಯಾಹ್ನ ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆ ತಂಪನೆರೆಯಿತು.

ಮಧ್ಯಾಹ್ನ 2.30ರ ಸುಮಾರಿಗೆ ಆರಂಭವಾದ ಮಳೆ, ಸಂಜೆಯ 4 ಗಂಟೆಯವರೆಗೂ ಸುರಿಯಿತಲ್ಲದೆ, ಮಳೆ ಸುರಿಯುವಾಗ ಮುಸ್ಸಂಜೆಯ ವಾತಾವರಣ ನಿರ್ಮಾಣವಾಗಿತ್ತು.

ಜಿಲ್ಲೆಯ ವಿವಿಧೆಡೆ ಕಳೆದ ವಾರ ಭಾರಿ ಪ್ರಮಾಣದಲ್ಲಿ ಸುರಿದಿದ್ದರೂ ಬಳ್ಳಾರಿ ನಗರದಲ್ಲಿ ಮಾತ್ರ ಸ್ವಲ್ಪ ಸುರಿದು ಮಾಯವಾಗಿದ್ದ ಮಳೆರಾಯ, ಸೋಮವಾರ ಮಾತ್ರ ರಭಸದಿಂದ ಸುರಿದು, ಬಿಸಿಲಿನ ಧಗೆಯಿಂದ ಬಳಲಿದ ಜನರಲ್ಲಿ ಕೊಂಚ ನಿರಾಳ ಭಾವ ಮೂಡುವಂತೆ ಮಾಡಿದ.

ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿ ನೀರು ಹರಿದ ಪರಿಣಾಮ ವಾಹನ ಸಂಚಾರಕ್ಕೆ ಸ್ವಲ್ಪ ಕಾಲ ಅಡಚಣೆ ಆಯಿತಾದರೂ ದ್ವಿಚಕ್ರ ವಾಹನ ಸವಾರರು, ಅದರಲ್ಲೂ ಮುಖ್ಯವಾಗಿ ಯುವತಿಯರು ಮಳೆನೀರಿಗೆ ಮನಸೋತು, ಭಯರಹಿತವಾಗಿ ವಾಹನ ಚಲಾಯಿಸಿದರು.

ಮಳೆಯ ನಂತರ ಬಿಸಿಲು ಬೀಳದ್ದರಿಂದ ತಂಪನೆಯ ವಾತಾವರಣ ಮುಂದುವರಿದಿದೆ. ತಾಲ್ಲೂಕಿನ ಅನೇಕ ಗ್ರಾಮಗಳಲ್ಲೂ ಮಳೆ ಸುರಿದ ಪರಿಣಾಮ ಕೃಷಿ ಜಮೀನನ್ನು ಹದ ಮಾಡುವುದರಲ್ಲಿ ನಿರತರಾಗಿರುವ ರೈತಾಪಿ ಜನರಲ್ಲಿ ಸಂಭ್ರಮ ಕಂಡುಬಂದರೆ, ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ಜನತೆ ಅಂತರ್ಜಲ ಮಟ್ಟ ಹೆಚ್ಚುವ ಆಶಯ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.