ADVERTISEMENT

ಬೆಂಬಿಡದ ಮಳೆ: ರೈತರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 5:19 IST
Last Updated 9 ಅಕ್ಟೋಬರ್ 2017, 5:19 IST
ಕುರುಗೋಡು ಭಾಗದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಯಲ್ಲಿ ಬೇರು ಕೊಳೆ ರೋಗದಿಂದ ಒಣಗಿದ ಗಿಡ ತೋರಿಸುತ್ತಿರುವ ರೈತ ಆಗಲೂರಪ್ಪ
ಕುರುಗೋಡು ಭಾಗದಲ್ಲಿ ಬೆಳೆದಿರುವ ಮೆಣಸಿನಕಾಯಿ ಬೆಳೆಯಲ್ಲಿ ಬೇರು ಕೊಳೆ ರೋಗದಿಂದ ಒಣಗಿದ ಗಿಡ ತೋರಿಸುತ್ತಿರುವ ರೈತ ಆಗಲೂರಪ್ಪ   

ಕುರುಗೋಡು: ಜಿಲ್ಲೆಯಲ್ಲಿ ಅತಿ ಹೆಚ್ಚು ಮೆಣಸಿನಕಾಯಿ ಬೆಳೆಯುವ ಕುರುಗೋಡು ಭಾಗದ ರೈತರ ಮೊಗದಲ್ಲೀಗ ಆತಂಕ ಮೂಡಿದೆ. ಒಂದು ತಿಂಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತೇವಾಂಶ ಹೆಚ್ಚಾಗಿ ಮೆಣಸಿನಕಾಯಿ ಕೊಳೆಲಾರಂಭಿಸಿದ. ಗಿಡದ ಬೆಳವಣಿಗೆಗೆ ಮಾರಕವಾಗುವ ಬಂಗಾರು ಬಳ್ಳಿ ರೋಗ ರೈತರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.

ಉತ್ತಮ ಮಳೆಯಿಂದ ಹೊಲಗಳಲ್ಲಿ ಬೆಳೆ ನಳನಳಿಸುತ್ತಿದೆಯಾದರೂ ರೋಗದ ಕಾರಣ ಇಳುವರಿ ಕುಸಿಯುವ ಭೀತಿ ರೈತರನ್ನು ಕಾಡತೊಡಗಿದೆ. ‘ಮಳೆ ಬರಲಿಲ್ಲ ಅಂತ ಕಾಲುವೆಗೆ ನೀರು ಬಿಡಲಿಲ್ಲ. ಬೋರ್ ನೀರಿನ್ಯಾಗ ಮೆಣಸಿನಕಾಯಿ ಗಿಡ ಬೆಳೆಸಿದ್ವಿ.ಗಿಡ ಬೆಳೆದಿರೋದು ನೋಡಿದ್ರೆ ಎಕ್ರಿಗೆ 25 ಕಿಂಟಾಲ್ ಮೆಣಸಿನಕಾಯಿ ಬರತೈತಿ ಅಂತ ಲೆಕ್ಕಾಚಾರ ಮಾಡಿದ್ದೆ.

ಆದ್ರೆ ಏನು ಮಾಡೋದು ಮಳೆರಾಯ ರೈತ್ರ ಬದುಕಿನ್ಯಾಗ ಆಟ ಆಡಿಬುಟ್ಟ. ಬೇಕಾದಾಗ ಮಳೆ ಬರಲಿಲ್ಲ. ಈಗ ಬ್ಯಾಡಾಗೈತೆ, ಆದರೆ, ದಿನಾ ಮಳೆ ಬರಾಕತ್ತೈತಿ. ಗಿಡದಾಗ ನೀರು ನಿಂತು ಬೇರು ಕೊಳತು ಒಣಗಾಕತ್ಯಾವ. ಎಕ್ರಿಗೆ 45 ರಿಂದ 50 ಸಾವ್ರ ಖರ್ಚು ಮಾಡೀವಿ. ಅದು ವಾಪಾಸು ಬಂದ್ರೆ ಸಾಕು ಲಾಭಬ್ಯಾಡ’ ಎನ್ನುತ್ತಾರೆ ಆರು ಎಕರೆ ಜಮೀನಿನಲ್ಲಿ ಮೆಣಸಿನಕಾಯಿ ಬೆಳೆ ಬೆಳೆದಿರುವ ಸ್ಥಳೀಯ ರೈತ ಆಗಲೂರಪ್ಪ.

ADVERTISEMENT

ಕುರುಗೋಡು ಮತ್ತು ಕೋಳೂರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಎರ್ರಂಗಳಿಗಿ, ಸಿದ್ದಮ್ಮನಹಳ್ಳಿ, ಬಾದನಹಟ್ಟಿ, ವದ್ದಟ್ಟಿ, ಕುರುಗೋಡು, ಸಿಂಧಿಗೇರಿ, ಬೈಲೂರು, ಕೋಳೂರು, ಸೋಮಸಮುದ್ರ, ಯಲ್ಲಾಪುರ, ಕಲ್ಲುಕಂಭ, ಓರ್ವಾಯಿ, ಗುತ್ತಿಗನೂರು, ಪಟ್ಟಣ ಸೆರಗು ಗ್ರಾಮಗಳ ವ್ಯಾಪ್ತಿಯಲ್ಲಿ 12 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಬೆಳೆದಿರುವ ಮೆಣಸಿನಕಾಯಿಯಲ್ಲಿ ಈ ರೋಗ ಲಕ್ಷಣಗಳು ಕಂಡುಬಂದಿವೆ.

ಗಿಡದ ಬೇರುಗಳು ಕೊಳೆಯುವ ಗುರುತು ಕಾಣಿಸುತ್ತಿದೆ. ಇದರಿಂದ ಗಿಡದ ಮೇಲ್ಬಾಗಕ್ಕೆ ಪೋಷಕಾಂಶಗಳು ಪೂರೈಕೆಯಾಗದೆ ಗಿಡ ಒಣಗತೊಡಗಿದೆ.  ಸಮಸ್ಯೆ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ತೋಟಗಾರಿಕೆ ಸಹಾಯಕ ಅಧಿಕಾರಿ ಎನ್.ಆರ್. ರಾಜೇಶ್ ಕುಮಾರ್, ‘ತೇವಾಂಶ ಹೆಚ್ಚಾಗಿರುವುದು ಮೆಣಸಿನಕಾಯಿ ಬೆಳೆಯಲ್ಲಿ ಬೇರು ಕೊಳೆ ರೋಗ ಕಾಣಿಸಿಕೊಳ್ಳಲು ಪ್ರಮುಖ ಕಾರಣ. ನಿರಂತರವಾಗಿ ಸುರಿದ ಮಳೆಯಿಂದ ಈ ರೋಗಕಾಣಿಸಿಕೊಂಡಿದೆ’ ಎಂದು ತಿಳಿಸಿದ್ದಾರೆ. ಬೇರು ಕೊಳೆ ರೋಗದಿಂದ ಬೆಳೆಯನ್ನು ಸಂರಕ್ಷಿಸಲು ಕೆಲವು ಸಲಹೆಗಳನ್ನು ನೀಡಿದ್ದಾರೆ.

ಸಲಹೆ: ಒಂದು ಲೀಟರ್ ನೀರಿನಲ್ಲಿ ಐದು ಗ್ರಾಂ. ಸಿಡೋಮೊನಸ್ ಪುಡಿಯನ್ನು ಬೆರೆಸಿದ ದ್ರಾವಣವನ್ನು ಗಿಡದ ಬುಡದಲ್ಲಿ ಸಿಂಪರಣೆ ಮಾಡಬೇಕು. ಒಂದು ಲೀಟರ್ ನೀರಿಗೆ ಎರಡು ಗ್ರಾಂ. ‘ಕಾಪರ್ ಓಕ್ಸೀ ಕ್ಲೋರೈಡ್’ (ಸಿಓಸಿ) ಬೆರೆಸಿದ ದ್ರಾವಣವನ್ನು ಗಿಡದ ಬುಡಕ್ಕೆ ಡ್ರಂಚಿಂಗ್ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ವತಿಯಿಂದ ಮೆಣಸಿನಕಾಯಿ ಬೆಳೆಗಾರರಿಗೆ ಶೇ. 90ರ ರಿಯಾಯಿತಿ ದರದಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತಿದೆ. ಈ ವರ್ಷ ಕೆಲವು ರೈತರು ಮೆಣಸಿನಕಾಯಿ ಬೆಳೆಯಲ್ಲಿ ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಎಲ್ಲ ರೈತರೂ ಈ ಯೋಜನೆಯ ಸದುಪಯೋಗ ಪಡಿಸಿಕೊಂಡು ನೀರಿನ ಮಿತಬಳಕೆ ಮಾಡುವ ಜೊತೆಗೆ ಬೆಳೆಗೆ ಬರಬಹುದಾದ ರೋಗಗಳಿಂದ ಮುಕ್ತರಾಗಬಹುದು ಎಂದು ರಾಜೇಶ್ ಕುಮಾರ್ ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.