ADVERTISEMENT

ಬೆಳಗಲು ಬಂದ ರಾಜಸ್ತಾನಿ ಹಣತೆ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2011, 11:15 IST
Last Updated 19 ಅಕ್ಟೋಬರ್ 2011, 11:15 IST

ಹೊಸಪೇಟೆ: ಅಂಧಕಾರವನ್ನು ತೊಳೆದು ಜ್ಞಾನವನ್ನು ಬೆಳಗುವ ಮೂಲಕ ಬಾಳಿಗೆ ಹೊಸ ಬೆಳಕನ್ನು ನೀಡುವ ದೀಪಾವಳಿ ಸಮೀಪಿಸುತ್ತಿದ್ದಂತೆ ನಗರದ ಬೀದಿಗಳಲ್ಲಿ ಚಿತ್ತಾಕರ್ಷಕ ರಾಜಸ್ತಾನಿ ಹಣತೆಗಳ ಮಾರಾಟ ಭರಾಟೆ ಶುರುವಾಗಿದೆ.

ಆಧುನಿಕ ತಂತ್ರಜ್ಞಾನ (ಮೌಲ್ಡ್)ದಿಂದ ಸಿದ್ಧಪಡಿಸಿರುವ ಪಿಂಗಾಣಿ, ಟೆರ‌್ರಾಕೋಟಿ ಹಾಗೂ ಮಣ್ಣಿನ ಹಣತೆಗಳು ನಗರದ ಬೀದಿಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಆಕರ್ಷಣೆ ಮತ್ತು ಹೊಸ ವಿನ್ಯಾಸದ ಹಣತೆಗಳನ್ನು ರಾಜಸ್ತಾನಿ ಮತ್ತು ಗುಜರಾತ್‌ಗಳಿಂದ ತಂದಿರುವ ವ್ಯಾಪಾರಿಗಳು ಗ್ರಾಹಕರನ್ನು ಆಕರ್ಷಿಸುವಂತೆ ಯಶಸ್ವಿಯಾಗಿದ್ದಾರೆ.

ಆಕರ್ಷಕ ಹಣತೆಗಳು:

ಮಣ್ಣಿನ ಹೊದಿಕೆ ಹೊಂದಿರುವ ತೂಗುದೀಪ, ಸುತ್ತಲೂ ಅಲಂಕೃತಗೊಂಡು ಆಕಾಶಬುಟ್ಟಿಯನ್ನು ಹೋಲುವ ದೀಪಗಳು, ಇನ್ನು ಹಣತೆಯಲ್ಲಂತೂ ಸಾದಾ ಹಣತೆ, ನಕ್ಷಾತ್ರಾಕರ, ಏಕಮುಖ, ದ್ವಿಮುಖ, ಪಂಚಮುಖ, ಸಪ್ತಮುಖ, ಅಷ್ಟಮುಖ ಹೀಗೆ ವಿವಿಧ ರೀತಿಯ ಪ್ರಣತಿಗಳು ಕಣ್ಣು ಕೋರೈಸುವ ಬಣ್ಣ ಹಾಗೂ ಕುಸುರಿ ಕೆಲಸದಿಂದ ಸುಂದರ ರೂಪ ಪಡೆದು ಗ್ರಾಹಕರನ್ನು ಆಯ್ಕೆ ಗೊಂದಲಕ್ಕೆ ಸಿಲುಕಿಸುವಷ್ಟು ಆಕರ್ಷಕವಾಗಿ ಕಂಗೊಳಿಸುತ್ತಿವೆ.

ದರದ ಪೈಪೋಟಿಗೂ ಸಿದ್ಧವಾಗಿರುವ ವ್ಯಾಪಾರಿಗಳು ಸ್ಥಳೀಯ ಮಣ್ಣಿನ ಹಣತೆಗಳಿಗಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದಾರೆ.  ಇದಕ್ಕೆ ಪ್ರತಿಯಾಗಿ ವ್ಯಾಪಾರವೇ ಇಲ್ಲದೆ ಸ್ಥಳೀಯ ಕುಂಬಾರರು ನಿರಾಶರಾಗಿದ್ದಾರೆ. ಇದು ಕುಂಬಾರರ ಬದುಕಿನ ಭರವಸೆಯನ್ನೂ ಕುಂದಿಸಿದೆ.

ಸ್ಥಳೀಯ ಕುಂಬಾರ ಶರಣಪ್ಪ ಮಾತನಾಡಿ, `ಈ ವೃತ್ತಿಯನ್ನು ನಂಬಿ ಬದುಕುತ್ತಿರುವ ನಾವು ಇಂತಹ ಪೈಪೋಟಿಯಿಂದ ಸಂಕಷ್ಟಕ್ಕೆ ಗುರಿಯಾಗಿದ್ದೇವೆ. ಈ ಸಂದರ್ಭದಲ್ಲಿ ಮಾತ್ರ ವ್ಯಾಪಾರಕ್ಕೆ ಅವಕಾಶವಿತ್ತು. ಈಗ ಅದಕ್ಕೂ ಅಡ್ಡಿಯಾಗಿದೆ. ಮೌಲ್ಡ್ ಹಣತೆಗಳಿಂದಾಗಿ ಯಾರೂ ನಮ್ಮನ್ನು ಕೇಳದ ಸ್ಥಿತಿಗೆ ತಲುಪಿದ್ದೇವೆ~ ಎಂದು ತಮ್ಮ ಅಳಲು ತೋಡಿಕೊಂಡರು.

`ದೀಪದ ಬುಡಕ್ಕೆ ಕತ್ತಲು~ ಎನ್ನುವಂತೆ ವಂಶಪಾರಂಪರ್ಯವಾಗಿ ಬಂದಿರುವ ಕುಂಬಾರಿಕೆ ಮೂಲೆ ಗುಂಪಾಗುತ್ತಿದೆ. ವೃತ್ತ ನೈಪುಣ್ಯತೆ ಕೊರತೆ, ಮಾರುಕಟ್ಟೆಯಲ್ಲಿ ಪೈಪೋಟಿ ಎದುರಿಸಲು ಸಾಧ್ಯವಾಗದ ಆರ್ಥಿಕ ಸಂಕಷ್ಟ ಮತ್ತು ಬೇಡಿಕೆಯ ಕೊರತೆಯಿಂದಾಗಿ ಕುಂಬಾರಿಕೆ ಉದ್ಯಮದ ಮೇಲೂ ಪರಿಣಾಮ ಬೀರಿದೆ. ಅದರಿಂದಾಗಿ ಕುಂಬಾರರು ವೃತ್ತಿಯಿಂದ ದೂರ ಉಳಿಯುವ ಸ್ಥಿತಿ ತಲುಪಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.