ADVERTISEMENT

`ಮಾನವ ಅಭಿವೃದ್ಧಿ ವರದಿ ತಯಾರಿಸಿ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 5:53 IST
Last Updated 14 ಜೂನ್ 2013, 5:53 IST

ಬಳ್ಳಾರಿ: ಎಲ್ಲ ಅಧಿಕಾರಿಗಳು ಮಾನವ ಅಭಿವೃದ್ಧಿ ವರದಿ ತಯಾರಿಸುವ ಮುನ್ನ ಜನಪ್ರತಿನಿಧಿಗಳಿಂದ ಸೂಕ್ತ ಸಲಹೆ ಪಡೆಯಬೇಕು ಎಂದ ಜಿಲ್ಲಾ ಪಂಚಾಯಿತಿ ಮುಖ್ಯ  ಯೋಜನಾಧಿಕಾರಿ ಚಂದ್ರಶೇಖರ ಗುಡಿ ಸೂಚಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಗುರುವಾರ ಜಿಲ್ಲಾ ಪಂಚಾಯತಿ ನಜೀರ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕುರಿತ ತಾಲ್ಲೂಕು ಮಟ್ಟದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಮಾನವ ಅಭಿವೃದ್ಧಿಯು ಜನರ ಕಲ್ಯಾಣದ ಜತೆಗೆ ಜನರಿಗಿರುವ ಆಯ್ಕೆಗಳನ್ನು ವಿಸ್ತರಿಸುವ ಮಹತ್ತರ ಪ್ರಕ್ರಿಯೆಯಾಗಿದೆ. ಜಿಲ್ಲೆಯಲ್ಲಿ ಅನುಷ್ಠಾನ ಆಗುತ್ತಿರುವ ಯೋಜನೆಗಳು ಮಾನವ ಅಭಿವೃದ್ಧಿಗೆ ಹೇಗೆ ಪೂರಕ ಎಂಬುದರ ಅಧ್ಯಯನವೇ ಈ ವರದಿ ತಯಾರಿಕೆಯ ಉದ್ದೇಶ ಎಂದು ಅವರು ಹೇಳಿದರು.

ಆರೋಗ್ಯ, ಶಿಕ್ಷಣ, ತಲಾ ಆದಾಯವನ್ನು ಆಧರಿಸಿ ಮಾನವ ಅಭಿವೃದ್ಧಿ ವರದಿ ತಯಾರಿಸಲಾಗುತ್ತದೆ. ಎಲ್ಲ ತಾಲ್ಲೂಕುಗಳಲ್ಲಿ ತಾಲ್ಲೂಕು ಮಟ್ಟದ ಕಾರ್ಯಾಗಾರ ನಡೆಸಿ ವರದಿ ತಯಾರಿಸುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದರು.

ತಾ.ಪಂ. ಅಧ್ಯಕ್ಷ ವಿ. ಗಾದಿಲಿಂಗಪ್ಪ ಕಾರ್ಯಾಗಾರ ಉದ್ಘಾಟಿಸಿದರು. ಉಪಾಧ್ಯಕ್ಷೆ  ಮರೆಮ್ಮ, ಸಿರುಗುಪ್ಪ ತಾ.ಪಂ. ಅಧ್ಯಕ್ಷೆ ಅಂಕಮ್ಮ, ಕಾರ್ಯ ನಿರ್ವಾಹಕಾಧಿಕಾರಿ ಜಾನಕೀರಾಮ, ರಾಧಾಕೃಷ್ಣ ರೆಡ್ಡಿ, ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಕರ್ನಾಟಕ ವಿವಿಯ ಸಹಾಯಕ ಪ್ರಾಧ್ಯಾಪಕ ಬಿ.ಎಚ್. ನಾಗೂರ್ ಉಪನ್ಯಾಸ ನೀಡಿದರು. ಖಾದರ್ ಸ್ವಾಗತಿಸಿದರು.  ಗೋಪಾಲಕೃಷ್ಣ ಪ್ರಾಸ್ತಾವಿಕವಾಗಿ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.