ADVERTISEMENT

ಮುಸ್ಲಿಮರ ಹಿತ ಕಾಪಾಡಲು ಬದ್ಧ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2012, 6:15 IST
Last Updated 18 ಫೆಬ್ರುವರಿ 2012, 6:15 IST

ಬಳ್ಳಾರಿ: ಜಿಲ್ಲೆಯೂ ಒಳಗೊಂಡಂತೆ ರಾಜ್ಯದ ವಿವಿಧೆಡೆ ಇರುವ ಮಸೀದಿ, ಖಬರಸ್ಥಾನ ಮತ್ತು ಈದ್ಗಾ ಮೈದಾನಗಳ ಜಾಗೆ ಆಕ್ರಮಿಸುತ್ತಿರು ವವರ ಸಂಖ್ಯೆ ಅಧಿಕವಾಗಿದ್ದು, ಅದನ್ನು ತಡೆಯಲು ಹಾಗೂ ಮುಸ್ಲಿಮ್ ಬಾಂಧವರ ಹಿತ ಕಾಪಾಡಲು ಬದ್ಧ ರಾಗಿದ್ದಾಗಿ ಶಾಸಕ ಬಿ.ಶ್ರೀರಾಮುಲು ತಿಳಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸ್ಥಳೀಯ ಶಾದಿ ಮಹಲ್ ಬಳಿ ಗುರುವಾರ ಏರ್ಪಡಿಸ ಲಾಗಿದ್ದ ಮುಸ್ಲಿಮ್ ಬಾಂಧವರ ಸಭೆಯಲ್ಲಿ ಅವರು ಮಾತನಾಡಿದರು.

ಹಜ್‌ಗೃಹ ನಿರ್ಮಾಣಕ್ಕೆ ರಾಜ್ಯ ಸರ್ಕಾರವು ರೂ 40 ಕೋಟಿ ಅನುದಾನ ನೀಡಿದೆ. ಮುಸ್ಲಿಮರ ಏಳ್ಗೆಗಾಗಿ ರೂ 300 ಕೋಟಿಗೂ ಅಧಿಕ ಅನುದಾನ ನೀಡಲು ಬಜೆಟ್‌ನಲ್ಲಿ ನಿರ್ಧರಿಸಿದೆ ಎಂದು ತಿಳಿಸಿದ ಅವರು, ಜಿಲ್ಲೆಯ ಹಜ್ ಯಾತ್ರಿಗಳಿಗಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ರೂ 2 ಕೋಟಿ ಅನುದಾನ ಮಂಜೂರು ಮಾಡಬೇಕು ಎಂದು ಕೋರಿದರು.

ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದ ಅಡಿ ರೂ 50 ಲಕ್ಷ ಅನುದಾನ ನೀಡುವ ಭರವಸೆ ನೀಡಿದ ಅವರು, ಮಸೀದಿಗಳಲ್ಲಿ ಸೇವೆ ಸಲ್ಲಿಸುವ ಹಜರತ್, ಹಾಫೀಜ್ ಮತ್ತು ಮೌಲಾನಾ ಅವರಿಗೆ ಇಲಾಖೆಯು ಕನಿಷ್ಠ ಮಾಸಿಕ ವೇತನವನ್ನು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸೈಯದ್ ಜಮೀರ್ ಪಾಷಾ ಸಾಹೇಬ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಹಯಾಜ್ ಅಹ್ಮದ್, ಡಾ.ಎಸ್.ಜೆ.ವಿ. ಮಹಿಪಾಲ್, ಮುಖಂಡರಾದ ಹಾಜಿ ಸಾಬ್, ಮುರ್ತುಜಾ ಸಾಬ್, ಝಮೀರ್, ಮೊಯಿನ್, ರಿಜ್ವಾನ್, ಅಯೂಬ್, ಪೀರಾ, ಇಲಿಯಾಸ್, ಬಾದುಲ್ಲಾ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.