ADVERTISEMENT

ಶವದೊಂದಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2012, 4:45 IST
Last Updated 25 ಜನವರಿ 2012, 4:45 IST

ರಣಜಿತ್‌ಪುರ (ಸಂಡೂರು): ಜನರು, ರಾಷ್ಟ್ರೀಯ ಖನಿಜಾಭಿವೃದ್ಧಿ ನಿಗಮ (ಎನ್‌ಎಂಡಿಸಿ)ದವರು ಗ್ರಾಮದ  ಸ್ಮಶಾನದ ಜಾಗ ಒತ್ತುವರಿ ಮಾಡಿದ್ದಾರೆ ಹಾಗು ತಮಗೆ ಮೂಲ ಸಮಸ್ಯೆಗಳನ್ನು ನೀಡದೆ  ತೊಂದರೆ ಕೊಡುತ್ತಿದ್ದಾರೆಂದು ಆರೋಪಿಸಿ ಮಂಗಳವಾರ ಮೃತದೇಹ ವನ್ನು ರಸ್ತೆಯಲ್ಲಿರಿಸಿ ಪ್ರತಿಭಟನೆ ನಡೆಸಿದರು.

ಕಾಮಾಲೆ ರೋಗದಿಂದ ಬಳಲುತ್ತಿದ್ದ ಗ್ರಾಮದ ಮಲಿಯಮ್ಮ (20) ಮಂಗಳವಾರ ಬೆಳಗಿನ ಜಾವ ಅಸು ನೀಗಿದರು. ಅವರ ಕಳೇಬರವನ್ನು ಹಳೆಯ ಸ್ಮಶಾನದ ಜಾಗೆಯಲ್ಲಿ ಹೂಳಲು ಬಿಡದ ಎನ್‌ಎಂಡಿಸಿಯ ಭದ್ರತಾ ಸಿಬ್ಬಂದಿ, ಗ್ರಾಮಸ್ಥರ ಅಂತ್ಯ ಸಂಸ್ಕಾರಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸ್ಥಳೀ ಯರು ಪ್ರತಿಭಟನೆಗೆ ಮುಂದಾಗಿದ್ದಾರೆ.

ಎನ್‌ಎಂಡಿಸಿ ಗಣಿ ಕಂಪೆನಿಯವರು ಕಳೆದ ತಿಂಗಳು ಪೊಲೀಸರ ಬೆಂಗಾವಲಿ ನಲ್ಲಿ ಗ್ರಾಮದ ಜನರು ತಲೆಮಾರು ಗಳಿಂದ ಬಳಕೆ ಮಾಡುತ್ತಿದ್ದ ಸ್ಮಶಾನ ಭೂಮಿಗೆ ಹೋಗದಂತೆ ತಡೆಗೋಡೆ ಕಟ್ಟಿದ್ದರು.

ಸತ್ತವರನ್ನು ಹೂಳಲು ಜಾಗವಿಲ್ಲ. ಸ್ಮಶಾನಕ್ಕೆ ಜಾಗೆ ಗುರುತಿಸಿ ಕೊಡಿ ಎಂದರೆ ಅಧಿಕಾರಿಗಳು ಕೇಳುತ್ತಿಲ್ಲ. ಆದ್ದರಿಂದ ನಾವು ಬೆಳಗಿನಿಂದ ಈ ತೆರನಾದ ಪ್ರತಿಭಟನೆ ಹಮ್ಮಿಕೊಂಡಿದ್ದಾಗಿ ಕರೇಗೌಡ `ಪ್ರಜಾವಾಣಿ~ಗೆ ತಿಳಿಸಿದರು.

800 ಮನೆಗಳಿರುವ ಗ್ರಾಮದ ಸುತ್ತಮುತ್ತ, ಎನ್‌ಎಂಡಿಸಿಯವರ ರಕ್ಷಣಾ ಗೋಡೆಗಳೆ ಇವೆ. ಮಹಿಳೆ ಯರಿಗೆ ಶೌಚಾಲಯಗಳಿಲ್ಲ, ಕಂಪೆನಿ ಯಲ್ಲಿ ನಮಗ್ಯಾರಿಗೂ ಕೆಲಸ ಕೊಡು ತ್ತಿಲ್ಲ. ಬೆಳೆದ ಬೆಳೆಗಳು ದೂಳಿನಿಂದಾಗಿ ಹಾಳಾಗುತ್ತಿವೆ ಎಂದು ಅನೇಕರು ಅಳಲು ತೋಡಿಕೊಂಡರು.

ಪ್ರತಿಭಟನಾಕಾರರ ಮನ ಒಲಿಕೆಗೆ ಮುಂದಾದ ಕಂದಾಯ ಮತ್ತು ಪೊಲೀಸ್ ಸಿಬ್ಬಂದಿ ಜನರ ಟೀಕೆಗೆ ಒಳಗಾಗಬೇಕಾಯಿತು.

ಎನ್‌ಎಂಡಿಸಿ ಅಧಿಕಾರಿಗಳ್ಯಾರು ಭೇಟಿ ನೀಡಲಿಲ್ಲ, ಅವರ ದೂರವಾಣಿ ಗಳು ಸ್ವಿಚ್ ಆಫ್ ಆಗಿದ್ದವು. ಸರ್ಕಾರಿ ಅಧಿಕಾರಿಗಳು ಎಂಟು ದಿನಗಳ ಒಳಗೆ ಸ್ಮಶಾನದ ಜಾಗೆಯ ಸಮಸ್ಯೆಯನ್ನು ಬಗೆಹರಿಸಲು ಒಪ್ಪಿಕೊಂಡ ಕಾರಣ ಜನರು ಪ್ರತಿಭಟನೆ ನಿಲ್ಲಿಸಿದರು. ಮೃತದೇಹವನ್ನು ಜನರು ಅಧಿಕಾರಿಗಳು ಸೂಚಿಸಿದ ಜಾಗದಲ್ಲಿ ಅಂತ್ಯಸಂಸ್ಕಾರ ನೆರವೇರಿಸಿದರು.

ಪ್ರತಿಭಟನೆಯಲ್ಲಿ ಕುಮಾರ ಗೌಡ, ಹೊನ್ನೂರಪ್ಪ, ಉಮೇಶ್, ದಲಿತ ಮುಖಂಡರಾದ ಸತೀಶ್, ಶಿವಲಿಂಗಪ್ಪ, ರಾಮಕೃಷ್ಣ ಹೆಗಡೆ, ವಕೀಲ ಮಹೇಶ್, ಸ್ತ್ರೀ ಶಕ್ತಿ, ಸ್ವ ಶಕ್ತಿ ಸಂಘದ ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.