ADVERTISEMENT

ಶೌಚಾಲಯವಿದ್ದರೆ ಹುಡುಕಿಕೊಡಿ!

ಶಶಿಕಾಂತ್ ಎಸ್. ಶೆಂಬೆಳ್ಳಿ
Published 30 ಮೇ 2016, 8:45 IST
Last Updated 30 ಮೇ 2016, 8:45 IST
ಬಳ್ಳಾರಿಯ ಕೃಷ್ಣಮಾಚಾರಿ ರಸ್ತೆಯಲ್ಲಿ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಮೂಗು ಮುಚ್ಚಿಕೊಂಡು ಹೋದರು
ಬಳ್ಳಾರಿಯ ಕೃಷ್ಣಮಾಚಾರಿ ರಸ್ತೆಯಲ್ಲಿ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಮೂಗು ಮುಚ್ಚಿಕೊಂಡು ಹೋದರು   

ಬಳ್ಳಾರಿ: ನಗರದ ಬಹುತೇಕ ಕಡೆ ಸಾರ್ವಜನಿಕ ಶೌಚಾಲಯಗಳು ಇಲ್ಲದ ಕಾರಣ ಜನ ಪರದಾಟ ನಡೆಸಬೇಕಾದ ಸ್ಥಿತಿ ಇದೆ.

ಬಳ್ಳಾರಿ ಜಿಲ್ಲಾ ಕೇಂದ್ರ ಆಗಿರುವುದರಿಂದ ಜಿಲ್ಲೆ ಹಾಗೂ ನೆರೆ ರಾಜ್ಯಗಳಿಂದ ನಿತ್ಯ ನೂರಾರು ಜನ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ ರೈಲು ನಿಲ್ದಾಣ, ಬಸ್‌ ನಿಲ್ದಾಣ ಹೊರತುಪಡಿಸಿದರೆ ಬೇರೆಲ್ಲೂ ಸಾರ್ವಜನಿಕ ಶೌಚಾಲಯ ಇಲ್ಲ. ಹಾಗಾಗಿ ಜನ ರಸ್ತೆ ಬದಿಯೇ ಮೂತ್ರ ವಿಸರ್ಜನೆ ಮಾಡುವಂತಾಗಿದೆ. ಇದರಿಂದ ಎಲ್ಲೆಡೆ ದುರ್ಗಂಧ ಹರಡಲು ಕಾರಣವಾಗಿದೆ. ಜೊತೆಗೆ ರೋಗ ರುಜಿನ ಹರಡುವ ಭೀತಿಯೂ ಸೃಷ್ಟಿಯಾಗಿದೆ.

ನಗರದಲ್ಲಿ ಸಾರ್ವಜನಿಕ ಶೌಚಾಲಯದ ವ್ಯವಸ್ಥೆ ಕಲ್ಪಿಸುವ ಹೊಣೆಗಾರಿಕೆ ಮಹಾನಗರ ಪಾಲಿಕೆಯ ಮೇಲಿದೆ. ಆದರೆ ಸ್ವತಃ ಅದರ ಕಚೇರಿಯ ಕೆಳಭಾಗದಲ್ಲಿರುವ ಸಾರ್ವಜನಿಕ ಶೌಚಾಲಯವನ್ನೇ ಅದು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂಬುದು ನಾಗರಿಕರ ದೂರು.

‘ಪಾಲಿಕೆ ಕಚೇರಿ ಕೆಳಭಾಗದಲ್ಲಿರುವ ಶೌಚಾಲಯದಲ್ಲೇ ಸ್ವಚ್ಛತೆಯ ಕೊರತೆ ಇದೆ. ನಿರ್ವಹಣೆ ಮಾಡುವವರೇ ಇಲ್ಲ. ಇದರಿಂದಾಗಿ ಸದಾ ಗಬ್ಬು ವಾಸನೆ ಬರುತ್ತದೆ. ಮೂಗು ಮುಚ್ಚಿಕೊಂಡು ಓಡಾಡಬೇಕಾದ ಪರಿಸ್ಥಿತಿ ಇದೆ’ ಎಂದು ಡಾ. ರಾಜಕುಮಾರ್‌ ಉದ್ಯಾನ ಸಮೀಪದ ನಿವಾಸಿ ರಮೇಶ ತಿಳಿಸಿದರು.

‘ಪ್ರತಿ ವರ್ಷ ಪಾಲಿಕೆಗೆ ಕೋಟ್ಯಂತರ ರೂಪಾಯಿ ಆದಾಯ ಬರುತ್ತದೆ. ಶೌಚಾಲಯ ನಿರ್ಮಾಣ, ಕಸ ವಿಲೇವಾರಿಗೆಂದೇ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ ಲೆಕ್ಕ ತೋರಿಸುತ್ತಾರೆ. ಆದರೆ ಒಂದೆರಡು ಕಡೆ ಬಿಟ್ಟರೆ ನಗರದಲ್ಲಿ ಸಾರ್ವಜನಿಕ ಶೌಚಾಲಯಗಳೇ ಇಲ್ಲ. ಇದರಿಂದ ಜನ ಅನಿವಾರ್ಯವಾಗಿ ತಮಗೆ ಸರಿ ಎನಿಸಿದ ಸ್ಥಳದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಾರೆ’ ಎಂದು ಹೇಳಿದರು.

ಕೆಲವು ತಿಂಗಳ ಹಿಂದೆ ಕೃಷ್ಣಮಾಚಾರಿ ರಸ್ತೆಯಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಿ ಜನರ ಬಳಕೆಗೆ ಮುಕ್ತಗೊಳಿಸಲಾಗಿತ್ತು. ಆದರೆ ಅವುಗಳನ್ನೂ ಸಹ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದ ಕಾರಣ ಬಾಗಿಲು ಮುಚ್ಚಿವೆ. ಇದರಿಂದಾಗಿ ಈ ರಸ್ತೆ ಯುದ್ದಕ್ಕೂ ಜನ ಮೂತ್ರ ವಿಸರ್ಜನೆ ಮಾಡುತ್ತಾರೆ. ಈ ಭಾಗದಲ್ಲಿ ಮಹಿಳೆ ಯರು ಓಡಾಡಲು ತೊಂದರೆಯಾ ಗುತ್ತಿದೆ. ಇದು ಕೃಷ್ಣಮಾಚಾರಿ ರಸ್ತೆ ಯೊಂದರ ಕಥೆಯಲ್ಲ. ನಗರದ ಬಹುತೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ಇದೆ.

‘ಕೃಷ್ಣಮಾಚಾರಿ ರಸ್ತೆ ಮೂಲಕವೇ ನಿತ್ಯ ಕೆಲಸಕ್ಕೆ ಹೋಗುತ್ತೇನೆ. ಗಂಡಸರು ರಸ್ತೆ ಬದಿಯೇ ನಿಂತುಕೊಂಡು ಮೂತ್ರ ವಿಸರ್ಜನೆ ಮಾಡುತ್ತಾರೆ. ಇದರಿಂದ ಓಡಾಡಲು ಬಹಳ ಮುಜುಗರ ಆಗುತ್ತದೆ. ಇದು ನನೊಬ್ಬಳ ಗೋಳು ಮಾತ್ರ ಅಲ್ಲ. ಈ ರಸ್ತೆಯಲ್ಲಿ ಓಡಾಡುವ ಎಲ್ಲ ಮಹಿಳೆಯರ ಗೋಳು ಇದೇ ಆಗಿದೆ. ಇದಕ್ಕೆ ಪಾಲಿಕೆಯಿಂದ ಕಡಿವಾಣ ಹಾಕಲು ಸಾಧ್ಯವಿಲ್ಲವೇ’ ಎಂದು ಮಿಲ್ಲರ್‌ ಪೇಟೆ ನಿವಾಸಿ ರಾಧಾ ಪ್ರಶ್ನಿಸಿದರು.

‘ಶೌಚಾಲಯದಂತಹ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜವಾಬ್ದಾರಿ ಮಹಾನಗರ ಪಾಲಿಕೆಯದು. ಆದರೆ ಈ ಕೆಲಸವೂ ಅದಕ್ಕೆ ಸರಿಯಾಗಿ ಮಾಡಲು ಆಗದಿದ್ದರೆ ಅದು ಯಾಕಿರಬೇಕು’ ಎಂದು ಮತ್ತೂ ಪ್ರಶ್ನಿಸಿದರು.

‘ಸ್ವಚ್ಛ ಭಾರತದ ಬಗ್ಗೆ ಪಾಲಿಕೆಯೇ ಪ್ರಚಾರ ಮಾಡುತ್ತದೆ. ಆದರೆ ಅದೇ ಸ್ವಚ್ಛತೆ ಕಡೆ ಗಮನಹರಿಸುತ್ತಿಲ್ಲ. ನಗರದ ಪ್ರಮುಖ ಜನನಿಬಿಡ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಮಹಿಳೆಯರು ತಲೆ ಎತ್ತಿ ಓಡಾಡು ವಂತಹ ವಾತಾವರಣ ಸೃಷ್ಟಿಸಬೇಕು’ ಎಂದರು.

‘ಮಳೆಗಾಲಕ್ಕೆ ಇನ್ನೇನು ಕೆಲವೇ ದಿನಗಳು ಉಳಿದಿವೆ. ಜನ ಎಲ್ಲೆಂದರಲ್ಲಿ ಹೀಗೇ ಮೂತ್ರ ವಿಸರ್ಜನೆ ಮಾಡುತ್ತಿದ್ದರೆ ಸಾಂಕ್ರಾಮಿಕ ರೋಗ ಹರಡಬಹುದು. ಹಾಗಾಗಿ ಪ್ರಮುಖ ಸ್ಥಳಗಳಲ್ಲಿ ಶೌಚಾಲಯ ನಿರ್ಮಿಸಬೇಕು. ಅಲ್ಲಿವರೆಗೆ ಸಂಚಾರಿ ಶೌಚಾಲಯಕ್ಕೆ ವ್ಯವಸ್ಥೆ ಮಾಡಬೇಕು’ ಎಂದು ನಗರದ ಮ್ಯಾನೇಜ್‌ಮೆಂಟ್‌ ವಿದ್ಯಾರ್ಥಿ ರಾಕೇಶ್‌ ತಿಳಿಸಿದರು.

ಸಾರ್ವಜನಿಕ ಶೌಚಾಲಯ ನಿರ್ಮಿಸಿದರೆ ಯಾರೂ ರಸ್ತೆಬದಿ ಮೂತ್ರ ವಿಸರ್ಜನೆ ಮಾಡುವುದಿಲ್ಲ. ಆದರೆ ಯಾವುದೇ ವ್ಯವಸ್ಥೆ ಇಲ್ಲದಕ್ಕೆ ಜನ ಅನಿವಾರ್ಯವಾಗಿ ಎಲ್ಲೆಂದರಲ್ಲಿ ಹೊಲಸು ಮಾಡುತ್ತಾರೆ ಎಂದು ವಿಷಾದ ವ್ಯಕ್ತಪಡಿಸಿದರು.

ನಗರದಲ್ಲಿ ಇ–ಟಾಯ್ಲೆಟ್‌ ನಿರ್ಮಿಸಲಾಗುವುದು. ಈಗಾಗಲೇ ನಿರ್ಮಿಸಿರುವ ಶೌಚಾಲಯಗಳನ್ನು ಸರಿಯಾಗಿ ನಿರ್ವಹಣೆ ಮಾಡಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು
-ಮಂಜುನಾಥ ನಲ್ವಡಿ, ಆಯುಕ್ತರು, ಮಹಾನಗರಪಾಲಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.