ADVERTISEMENT

ಶೌಚಾಲಯ ದುರಸ್ತಿ: ಗ್ರಾ.ಪಂ ಕಚೇರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 9:00 IST
Last Updated 11 ಅಕ್ಟೋಬರ್ 2012, 9:00 IST

ಕಂಪ್ಲಿ: ಸಮೀಪದ ಬುಕ್ಕಸಾಗರ ಗ್ರಾಮದ 1ನೇ ವಾರ್ಡಿನ ಮಹಿಳಾ ಶೌಚಾಲಯ ದುರಸ್ತಿ ಮಾಡಿಸುವಂತೆ ಆಗ್ರಹಿಸಿ ಕರವೇ ಕಾರ್ಯಕರ್ತರು ಮತ್ತು ಮಹಿಳೆಯರು ಮಂಗಳವಾರ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ಶೌಚಾಲಯ ದುರಸ್ತಿ ಇಲ್ಲದೆ ಹಾಳಾಗಿದ್ದು, ನಿತ್ಯ ಬಹಿರ್ದೆಸೆಗೆ ಬಯಲನ್ನು ಆಶ್ರಯಿಸಬೇಕಿದೆ. ಕೆಲವೊಮ್ಮೆ ಕರಡಿಗಳ ಕಾಣಿಸಿಕೊಳ್ಳುತ್ತಿದ್ದು, ಜೀವಭಯದಿಂದ ಹಿಂತಿರುಗಬೇಕಾಗುತ್ತದೆ ಎಂದು ಮಹಿಳೆಯರು ಗೋಳು ತೋಡಿಕೊಂಡರು.

ಕೂಡಲೇ ಶೌಚಾಲಯ ದುರಸ್ತಿ ಮಾಡಿ ದಾರಿಯುದ್ದಕ್ಕೂ ಬೆಳೆದಿರುವ ಮುಳ್ಳುಕಂಟಿಗಳನ್ನು ತೆರವು ಮಾಡಿ ಸೂಕ್ತ ದಾರಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮಹಿಳೆಯರು ಆಗ್ರಹಿಸಿದರು.

ನಮ್ಮ ಬೇಡಿಕೆಯನ್ನು ಈಡೇರಿಸದಿದ್ದಲ್ಲಿ ಮತ್ತೆ ಹೋರಾಟ ಹಮ್ಮಿಕೊಳ್ಳುವುದಾಗಿ ಕರವೇ ಬುಕ್ಕಸಾಗರ ಗ್ರಾಮ ಘಟಕ ಅಧ್ಯಕ್ಷ ಕೆ. ಭಾಷ ಎಚ್ಚರಿಸಿದರು.

ಪ್ರತಿಭಟನಕಾರರಿಂದ ಮನವಿ ಸ್ವೀಕಸಿದ ಗ್ರಾ.ಪಂ ಅಧ್ಯಕ್ಷೆ ರಮಾದೇವಿ, ಮಹಿಳಾ ಶೌಚಾಲಯ ಶೀಘ್ರ ದುರಸ್ತಿಗೊಳಿಸುವುದಾಗಿ ಭರವಸೆ ನೀಡಿದರು.

ಗ್ರಾ.ಪಂ ಕಾರ್ಯದರ್ಶಿ ಮಲ್ಲಿಕಾರ್ಜುನ, 1ನೇ ವಾರ್ಡ್ ಸದಸ್ಯ ಕೃಷ್ಣಪ್ಪ, ವಿ.ಕೆ. ಹನುಮಂತಪ್ಪ, ವಸಂತಮ್ಮ, ಆರ್. ರಜಿಯಾಬಿ, ಕೆ. ಖಾಜಾಬನಿ, ಗೌಸಿಯಾ, ಜಿ. ನಾಗರತ್ನ, ರೇಷ್ಮ, ರಮೀಜಾ, ಕರವೇ ಪ್ರದಾನ ಕಾರ್ಯದರ್ಶಿ ಶಶಿಧರ, ಕೆ. ಶೇಖರ್,ಕೆ. ರಫೀಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.