ADVERTISEMENT

`ಸದಾಶಿವಯ್ಯರ ಸೇವೆ ಅನನ್ಯ'

​ಪ್ರಜಾವಾಣಿ ವಾರ್ತೆ
Published 14 ಜೂನ್ 2013, 5:59 IST
Last Updated 14 ಜೂನ್ 2013, 5:59 IST

ಸಿರುಗುಪ್ಪ: ಆಯುರ್ವೇದ ಪದ್ಧತಿಯಿಂದ ಎ್ಲ್ಲಲ ರೋಗಗಳಿಗೂ ಔಷಧೋಪಚಾರ ನೀಡಿ ಗುಣಪಡಿಸುವ ಪರಿಣಿತಿ ಹೊಂದಿದ್ದ ಡಾ. ಎಂ. ಸದಾಶಿವಯ್ಯನವರ ಸೇವೆ ಅನನ್ಯ ಎಂದು ವಳಬಳ್ಳಾರಿಯ ಸಿದ್ಧಲಿಂಗ ಸ್ವಾಮೀಜಿ ಸ್ಮರಿಸಿದರು.

ತಾಲ್ಲೂಕಿನ ಆರಳಿಗನೂರು ಗ್ರಾಮದಲ್ಲಿ ಗುರುವಾರ ಜರುಗಿದ ಸದಾಶಿವಯ್ಯನವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು ಅವರ ಸಮಾಧಿ ಬಳಿ ಬಿಲ್ವ ಸಸಿಗಳನ್ನು ನೆಟ್ಟು ಶ್ರೀಗಳು ಮಾತನಾಡಿದರು.

ಐದು ದಶಕಗಳ ಕಾಲ ಆಯುರ್ವೇದ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿದ ಅವರು, ಹೊಸ ಚಿಕಿತ್ಸಾ ಪದ್ಧತಿ, ಸಂಶೋಧನೆಗಳಲ್ಲಿ  ಮೈಗೂಡಿಸಿಕೊಂಡಿದ್ದರು. ಹಣ ಸಂಪಾದನೆಗೆ ಒತ್ತು ಕೊಡದೇ ವೈದ್ಯ ಸೇವೆಯನ್ನು ಕಾಯಕವನ್ನಾಗಿಸಿಕೊಂಡಿದ್ದ ಅವರು ಆಯುರ್ವೇದ ಔಷಧಗಳಿಂದ ಕಾಮಾಲೆ, ಬಂಜೆತನ ನಿವಾವರಣೆ, ಸಂಧಿಶೂಲ  ರೋಗಗಳಿಗೆ ಚಿಕಿತ್ಸೆ ನೀಡಿ ಗುಣಪಡಿಸುವಲ್ಲಿ ಯಶಸ್ವಿಯಾಗಿದ್ದರು ಎಂದು ನೆನೆದರು.

ಬಳ್ಳಾರಿ, ಮೈಸೂರು, ಬೆಂಗಳೂರು ಸರ್ಕಾರಿ ಆಯುರ್ವೇದ ಆಸ್ಪತ್ರೆಗಳಲ್ಲಿ ಬಡರೋಗಿಗಳಿಗೆ ಚಿಕಿತ್ಸೆ ನೀಡಿ ಚಿರಪರಿಚಿತರಾಗಿದ್ದರು.

ಮೈಸೂರಿನಲ್ಲಿ ಸುತ್ತೂರು ಶ್ರೀಗಳಿಂದ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯನ್ನು ಆರಂಭಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಎಂದು ಹಾಲ್ವಿಯ ಅಭಿನವ ಮಹಾಂತ ಶ್ರೀಗಳು ಶ್ಲಾಘಿಸಿದರು. ದಕ್ಷ ಆಡಳಿತಗಾರರಾಗಿ, ಸಮಯಪಾಲನೆ, ಕರ್ತವ್ಯನಿಷ್ಠೆ, ಸರಳ ಸಜ್ಜನಿಕೆಯ ವ್ಯಕ್ತಿಯಾಗಿದ್ದ ಅವರು, ತಮ್ಮ ಅಮುಲ್ಯವಾದ ವೈದ್ಯಕೀಯ ವೃತ್ತಿಯನ್ನು ಕೊನೆಯುಸಿರು ಇರುವತನಕ ಸೇವೆಗೆ ಮುಡುಪಾಗಿಟ್ಟಿದ್ದರು, ಈಗಿನ ಯುವ ವೈದ್ಯರಿಗೆ ಮಾದರಿಯಾಗಿದ್ದಾರೆ ಎಂದು ಬಟಕುರ್ಕಿ ಬಸವಲಿಂಗ ಶ್ರೀಗಳು ನುಡಿದರು.

ಅಂತ್ಯಕ್ರಿಯೆ: ಬುಧವಾರ ಮೈಸೂರಿನಲ್ಲಿ ನಿಧನರಾದ ಡಾ. ಸದಾಶಿವಯ್ಯನವರ ಅಂತ್ಯಕ್ರಿಯೆ ತಾಲ್ಲೂಕಿನ ಆರಳಿಗನೂರು ಗ್ರಾಮದ ಅವರ ತೋಟದಲ್ಲಿ ಗುರುವಾರ ವೀರಶೈವ ವಿಧಿವಿಧಾನದಂತೆ ನಡೆಯಿತು. ಅವರ ಪುತ್ರರಾದ ಅಲ್ಲಮಪ್ರಭು, ಉಮೇಶ್, ರಾಜು ಧಾರ್ಮಿಕ ವಿಧಾನಗಳನ್ನು ನೆರವೇರಿಸಿದರು.

ಅಖಿಲ ಭಾರತ ವೀರಶೈವ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಆರ್.ಚನ್ನಬಸವನಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಶಿವಶಂಕರಗೌಡ, ಸಾಹಿತಿ ನಾ.ಮ.ಸಿದ್ದರಾಮಯ್ಯ, ಹೆರಕಲ್ಲು ಕುಮಾರಸ್ವಾಮಿ, ಆರ್.ಮಲ್ಲಿಕಾರ್ಜುನಪ್ಪ, ಆರ್.ಬಸವಲಿಂಗಪ್ಪ, ಗ್ರಾಮಸ್ಥರು ಹಾಗೂ ಆಪಾರ ಬಂಧುಬಳಗ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.