ADVERTISEMENT

ಮೂಲ ಸೌಕರ್ಯ ಕಲ್ಪಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 14 ಜನವರಿ 2018, 8:49 IST
Last Updated 14 ಜನವರಿ 2018, 8:49 IST

ಕುರುಗೋಡು: ‘ವಿದ್ಯಾರ್ಥಿಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು’ ಎಂದು ಆಗ್ರಹಿಸಿ ಎಐಡಿಎಸ್ಒ ಸಂಘಟನೆ ನೇತೃತ್ವದಲ್ಲಿ ನೂರಾರು ವಿದ್ಯಾರ್ಥಿಗಳು ಇಲ್ಲಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಿಂದ ವಿಶೇಷ ತಹಶೀಲ್ದಾರ್ ಕಚೇರಿವರೆಗೆ ಶುಕ್ರವಾರ ಮೆರವಣಿಗೆ ನಡೆಸಿದರು.

‘ಪಟ್ಟಣದ ಸುತ್ತಲಿನ ಬಸವಪುರ, ಗೆಣಿಕೆಹಾಳು, ಕ್ಯಾದಿಗೆಹಾಳು ಮತ್ತು ಮುಷ್ಟಘಟ್ಟೆ ಗ್ರಾಮಗಳ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ವೇಳೆಯಲ್ಲಿ ಸಮರ್ಪಕವಾದ ಬಸ್‌ ಸೌಲಭ್ಯವಿಲ್ಲ. ಹಾಗಾಗಿ ವಿದ್ಯಾರ್ಥಿಗಳು ಪರ್ಯಾಯವಾಗಿ ಆಟೊಗಳ ಹಾಗೂ ನಡೆದುಕೊಂಡು ಮನೆ ಸೇರುವಂತಾಗಿದೆ. ಈ ಕುರಿತು ಸಾರಿಗೆ ಇಲಾಖೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜವಾಗಿಲ್ಲ. ಒಂದು ವೇಳೆ ಬೇಡಿಕೆ ಈಡೇರಿಸದಿದ್ದರೆ ಉಗ್ರವಾದ ಹೋರಾಟ ಮಾಡಲಾಗುವುದು’ ಎಂದು ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ಎಚ್ಚರಿಸಿದರು.

‘ಸ್ಥಳೀಯ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡದ ನಿರ್ಮಾಣ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ತಾತ್ಕಾಲಿಕವಾಗಿ ತರಗತಿ ನಡೆಸುತ್ತಿರುವ ಕಟ್ಟಡಗಳಲ್ಲಿ ಮೂಲ ಸೌಕರ್ಯಗಳು ಇಲ್ಲ. ಹೀಗಾಗಿ ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ಕೂಡಲೆ ಕ್ರಮ ಕೈಗೊಳ್ಳಬೇಕು’ ಎಂದು ಮುಖಂಡ ಹನುಮಪ್ಪ ಆಗ್ರಹಿಸಿದರು.

ADVERTISEMENT

ಬಳಿಕ ಈ ಸಂಬಂಧ ವಿಶೇಷ ತಹಶೀಲ್ದಾರ್ ಬಸವರಾಜ ಅವರಿಗೆ ಮನವಿ ಸಲ್ಲಿಸಿದರು. ಎಐಡಿಎಸ್ಒ ಸಂಘಟನೆ ಜಿಲ್ಲಾ ಘಟಕದ ಉಪಾಧ್ಯಕ್ಷ ವಿ.ಎನ್. ಜಗದೀಶ್, ಜಿಲ್ಲಾ ಕಾರ್ಯದರ್ಶಿ ಸುರೇಶ್ ಪಾಲ್ಗೊಂಡಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.