ADVERTISEMENT

ಸಚಿವ ಹೆಗಡೆ ವಿರುದ್ಧ 30ರಂದು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2018, 10:23 IST
Last Updated 24 ಜನವರಿ 2018, 10:23 IST

ಬಳ್ಳಾರಿ: ‘ನಾಯಿ ಬೊಗಳಿದರೆ ತಲೆ ಕೆಡಿಸಿಕೊಳ್ಳುವ ಜನ ನಾವಲ್ಲ ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರು ದಲಿತರ ಕುರಿತು ನೀಡಿರುವ ಹೇಳಿಕೆಯನ್ನು ವಿರೋಧಿಸಿ ಜ.30ರಂದು ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಸಲಾಗುವುದು’ಎಂದು ದಲಿತಪರ ಸಂಘಟನೆಗಳ ಒಕ್ಕೂಟದ ಮುಖಂಡ ಯರಿಕುಲಸ್ವಾಮಿ ಹೇಳಿದರು.

‘ಸಚಿವರ ಹೇಳಿಕೆಯ ವಿರುದ್ಧ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗಕ್ಕೆ ದೂರು ಕೊಡುತ್ತೇವೆ. ಜಾತಿನಿಂದನೆ ದೂರು ದಾಖಲಿಸಲು ನಿರ್ಧರಿಸಿದ್ದೇವೆ. ಅವರನ್ನು ಸಚಿವ ಸಂಪುಟದಿಂದ ಕೈ ಬಿಡುವವರೆಗೂ ಹೋರಾಟ ನಡೆಯಲಿದೆ’ ಎಂದು ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಸಚಿವರ ಸಂವಿಧಾನ ವಿರೋಧಿ ಹೇಳಿಕೆಯನ್ನು ಖಂಡಿಸಿ ಪ್ರವಾಸಿ ಮಂದಿರದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಮುಖಂಡರನ್ನು ಸಂಸದ ಬಿ.ಶ್ರೀರಾಮುಲು ಓಲೈಕೆ ನೆಪದಲ್ಲಿ ದಿಕ್ಕುತಪ್ಪಿಸಿದರು’ ಎಂದೂ ಅವರು ದೂರಿದರು.

ADVERTISEMENT

ಬಂದ್‌: ‘ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಫೆಬ್ರುವರಿ ಮೊದಲ ವಾರ ಜಿಲ್ಲೆಯಲ್ಲಿ ಬಂದ್‌ ಆಚರಿಸಲು ನಿರ್ಧರಿಸಲಾಗಿದೆ’ ಎಂದರು.

‘ಬಿಜೆಪಿ ಸರ್ಕಾರದಲ್ಲಿ ಡಿ.ವಿ.ಸದಾನಂದಗೌಡ ಅವರು ಮುಖ್ಯಮಂತ್ರಿಯಾಗಿದ್ದಾಗಲೇ ವರದಿಯನ್ನು ಸಲ್ಲಿಸಲಾಗಿತ್ತು. ಆಗಲೂ ವರದಿ ಜಾರಿಯಾಗಲಿಲ್ಲ. ಬಿಜೆಪಿ–ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲೂ ಜಾರಿಯಾಗಲಿಲ್ಲ. ಆ ಪಕ್ಷಗಳ ಅಡಿಯಾಳಾಗಿ ನಮ್ಮ ಮುಖಂಡರು ಕೆಲಸ ಮಾಡುತ್ತಿರುವುದೇ ಈ ಪರಿಸ್ಥಿತಿಗೆ ಕಾರಣ’ ಎಂದು ದೂರಿದರು. ಮುಖಂಡರಾದ ಅರ್ಜುನ್‌, ಜಗನ್ನಾಥ್‌, ಸಿದ್ದಣ್ಣ, ಈಶ್ವರಪ್ಪ, ಶಿವಕುಮಾರ್‌, ಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.