ADVERTISEMENT

ನಾಗೇಂದ್ರ ಬಯಸಿದ ಕ್ಷೇತ್ರದಲ್ಲಿ ಅವಕಾಶ

​ಪ್ರಜಾವಾಣಿ ವಾರ್ತೆ
Published 27 ಜನವರಿ 2018, 9:33 IST
Last Updated 27 ಜನವರಿ 2018, 9:33 IST

ಕೂಡ್ಲಿಗಿ: ‘ಬಿಜೆಪಿಯಿಂದ ದೂರವಾಗಿರುವ ಕೂಡ್ಲಿಗಿ ಕ್ಷೇತ್ರದ ಪಕ್ಷೇತರ ಶಾಸಕ ಬಿ. ನಾಗೇಂದ್ರ ಅವರು ಬಯಸಿದರೆ ಪರಿಶಿಷ್ಟ ಪಂಗಡಕ್ಕೆ ಮೀಸಲಿರುವ ಜಿಲ್ಲೆಯ ಯಾವುದೇ ಕ್ಷೇತ್ರದಲ್ಲಾದರೂ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು’ ಎಂದು ಸಂಸದ ಬಿ.ಶ್ರೀರಾಮುಲು ಹೇಳಿದರು. ಪರಿವರ್ತನಾ ಯಾತ್ರೆ ಯಶಸ್ವಿಯಾದ ಪ್ರಯುಕ್ತ ಪಟ್ಟಣದಲ್ಲಿ ಶುಕ್ರವಾರ ಸಂಜೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪಕ್ಷದ ಮುಖಂಡರು ತಮ್ಮನ್ನು ಮಾತನಾಡಿಸಿಲ್ಲ ಎಂದು ನಾಗೇಂದ್ರ ಅವರು ಬೆಂಬಲಿಗರ ಸಭೆಯಲ್ಲಿ ಹೇಳಿರುವುದರಲ್ಲಿ ಯಾವುದೇ ಅರ್ಥವಿಲ್ಲ. ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷನಾಗಿ ನಾನೇ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದೇನೆ. ಯಾವುದೇ ಸಮಯದಲ್ಲಾದರೂ ಅವರು ಬರಬಹುದು. ಪಕ್ಷ ಬಾಗಿಲು ಅವರಿಗೆ ಸದಾ ತೆರೆದಿರುತ್ತದೆ’ ಎಂದು ಸ್ಪಷ್ಟಪಡಿಸಿದರು.

ಯಾತ್ರೆ ಯಶಸ್ವಿ: ಪಟ್ಟಣದಲ್ಲಿ ನಡೆದ ಪರಿವರ್ತನಾ ಯಾತ್ರೆಯು ಅತ್ಯಂತ ಯಶಸ್ವಿಯಾಗಿದ್ದು, ಪಕ್ಷದ ರಾಜ್ಯ ಮತ್ತು ರಾಷ್ಟ್ರಮಟ್ಟದ ನಾಯಕರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿಯೂ ಪಕ್ಷದ ಗೆಲುವಿಗೆ ಎಲ್ಲರೂ ಶ್ರಮಿಸಬೇಕು’ ಎಂದು ಮನವಿ ಮಾಡಿದರು.

ADVERTISEMENT

ಮುಖಂಡರ ಒತ್ತಾಯ: ‘ನಾಗೇಂದ್ರ ಅವರು ಪಕ್ಷಕ್ಕೆ ಬಾರದಿದ್ದರೆ ಹೊರಗಿನಿಂದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೆ ಸ್ಥಳೀಯರಿಗೆ ಅವಕಾಶ ನೀಡಬೇಕು.ಇಲ್ಲದಿದ್ದರೆ ನೀವೇ ಸ್ಪರ್ಧಿಸಬೇಕು’ ಎಂದು ಸಭೆಯಲ್ಲಿದ್ದ ಕೆಲವು ಮುಖಂಡರು ಸಂಸದರನ್ನು ಒತ್ತಾಯಿಸಿದರು.

‘ನಾಗೇಂದ್ರ ಅವರು ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಕಾರಣದಿಂದಲೇ ಈಗ ಕ್ಷೇತ್ರದಲ್ಲಿ ಗಟ್ಟಿ ಅಭ್ಯರ್ಥಿಯ ಹುಡುಕಾಟವೂ ಅನಿವಾರ್ಯವಾದ ಸನ್ನಿವೇಶ ನಿರ್ಮಾಣಗೊಂಡಿದೆ. ಅವರು ಪಕ್ಷದಿಂದ ಸ್ಪರ್ಧಿಸಿದರೆ ಗೆಲುವು ಖಚಿತ. ಹೀಗಾಗಿ ಅವರ ಮನ ಒಲಿಸಬೇಕು. ಆಗದೇ ಇದ್ದರೆ ನೀವೇ ಸ್ಪರ್ಧಿಸಬೇಕು’ ಎಂದು ಮುಖಂಡು ಆಗ್ರಹಿಸಿದರು.

ಅವರಿಗೆ ಪ್ರತಿಕ್ರಿಯಿಸಿದ ಸಂಸದ ಶ್ರೀರಾಮುಲು ‘ಆ ಬಗ್ಗೆ ಈಗಲೇ ನಿರ್ಧರಿಸುವುದು ಬೇಡ. ಇನ್ನೂ ಕಾಲಾವಕಾಶ ಇರುವುದರಿಂದ ನಾಗೇಂದ್ರ ಅವರನ್ನು ಸಂಪರ್ಕಿಸಿ ಅವರ ಮನ ಒಲಿಸುವ ಪ್ರಯತ್ನ ಮುಂದುವರಿಸುವುದು ಸದ್ಯದ ಅಗತ್ಯ. ಮುಂದಿನ ದಿನಗಳಲ್ಲಿ ಮುಖಂಡರೊಂದಿಗೆ ಚರ್ಚೆ ಮಾಡಿ ಅಂತಿಮ ನಿರ್ಧಾರ ಕೈಗೊಳ್ಳಬಹುದು’ ಎಂದು ಅಭಿಪ್ರಾಯಪಟ್ಟರು.

ಮಂಡಲ ಅಧ್ಯಕ್ಷ ಕೆ.ಎಚ್. ವೀರನಗೌಡ, ಕ್ಷೇತ್ರ ಪ್ರಭಾರ ಕೆ.ಎಂ. ತಿಪ್ಪೇಸ್ವಾಮಿ, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಬಂಗಾರು ಹನುಮಂತು, ಜಿಲ್ಲಾ ಪರಿಶಿಷ್ಟ ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯಪಾಪಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಚನ್ನಪ್ಪ, ಎಪಿಎಂಸಿ ಸದಸ್ಯ ತಮ್ಮಣ್ಣ, ಗಾಣಗಟ್ಟೆ ಮಹಾಂತೇಶ, ಟಿ.ಜಿ. ಮಲ್ಲಿಕಾರ್ಜುನಗೌಡ, ತಾಲ್ಲೂಕು ಪಂಚಾಯ್ತಿ ಸದಸ್ಯ ಬಿ. ಚಿನ್ನಾಪ್ರಾಪ್ಪ, ಎಸ್.ಪಿ. ಪ್ರಕಾಶ, ರೈತ ಮೋರ್ಚಾದ ಅಧ್ಯಕ್ಷ ವದ್ದಟ್ಟಿ ನಾಗರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.