ADVERTISEMENT

ವಿಷಾಹಾರ ಸೇವನೆ: ಇನ್ನೂ ಚೇತರಿಸಿಕೊಳ್ಳದ 7 ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 8 ಮೇ 2019, 14:46 IST
Last Updated 8 ಮೇ 2019, 14:46 IST

ಹೊಸಪೇಟೆ: ವಿಷಾಹಾರ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಒಟ್ಟು 40 ವಿದ್ಯಾರ್ಥಿನಿಯರ ಪೈಕಿ ಇನ್ನೂ ಏಳು ಜನ ಚೇತರಿಸಿಕೊಂಡಿಲ್ಲ.

ಏಳು ವಿದ್ಯಾರ್ಥಿನಿಯರಿಗೆ ವಿಶೇಷ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಈಗಾಗಲೇ ಚಿಕಿತ್ಸೆ ಪಡೆದು ಮನೆಗೆ ಹಿಂತಿರುಗಿದ ಕೆಲವು ವಿದ್ಯಾರ್ಥಿಗಳು ಬುಧವಾರ ಅಸ್ವಸ್ಥರಾಗಿದ್ದರು. ಅವರಿಗೆ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ.

‘40 ವಿದ್ಯಾರ್ಥಿಗಳ ಪೈಕಿ 33 ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ. ಏಳು ಜನರಿಗೆ ಚಿಕಿತ್ಸೆ ಮುಂದುವರೆಸಲಾಗಿದೆ. ಈಗಾಗಲೇ ಮನೆಗೆ ತೆರಳಿದವರ ಪೈಕಿ ಕೆಲವರ ಆರೋಗ್ಯದಲ್ಲಿ ಏರುಪೇರಾಗಿ ಮತ್ತೆ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಮತ್ತೆ ಚಿಕಿತ್ಸೆ ನೀಡಿ ಕಳುಹಿಸಿಕೊಡಲಾಗಿದೆ. ಏಳು ಜನ ವಿದ್ಯಾರ್ಥಿನಿಯರು ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ನಗರದ ನೂರು ಹಾಸಿಗೆ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಲೀಂ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ವಿ.ವಿ.ಯ ‘ಅಸ್ಮಿತೆ’ ವಿದ್ಯಾರ್ಥಿ ನಿಲಯದಲ್ಲಿ ಸೋಮವಾರ ಮಧ್ಯಾಹ್ನ ಊಟ ಮಾಡಿದ್ದ ವಿದ್ಯಾರ್ಥಿನಿಯರಲ್ಲಿ ಸಂಜೆ ವಾಂತಿ, ಭೇದಿ ಕಾಣಿಸಿಕೊಂಡಿತ್ತು. ಸುಮಾರು 20 ವಿದ್ಯಾರ್ಥಿನಿಯರನ್ನು ಅದೇ ದಿನ ರಾತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ ಅ ಸಂಖ್ಯೆ 40 ತಲುಪಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.