ಬಳ್ಳಾರಿ: ಸರ್ಕಾರದ ಸೂಚನೆಯಂತೆ ಪ್ರತಿ ತಿಂಗಳ ಮೂರನೇ ಸೋಮವಾರ ಪ್ರತಿ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಅಂಗವಿಕಲರ ಅಹವಾಲು ಸಭೆ ನಡೆಯಬೇಕು. ಆದರೆ, ಬಹುತೇಕ ಜಿಲ್ಲೆಗಳಲ್ಲಿ ಸಭೆಗಳೇ ನಡೆದಿಲ್ಲ.
ಅಂಗವಿಕಲರ ಅಧಿನಿಯಮ 2016ರ ಪರಿಣಾಮಕಾರಿ ಅನುಷ್ಠಾನಕ್ಕೆ ಮತ್ತು ಅವರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರಕ್ಕೆ ತಲುಪಿಸಲು ಈ ಸಭೆಗಳು ಮುಖ್ಯ. ಅಧಿನಿಯಮ ಜಾರಿಯಾದ ಬಳಿಕ 2023ರ ನವೆಂಬರ್ 27ರಂದು ಸರ್ಕಾರವು ಸುತ್ತೋಲೆ ಹೊರಡಿಸಿ, ಸಭೆಗಳನ್ನು ನಡೆಸಲು ಸೂಚಿಸಿತು.
2024ರ ಅಂತ್ಯಕ್ಕೆ ಒಂದು ವರ್ಷದ ಅವಧಿಯಲ್ಲಿ ಬೆಂಗಳೂರು ನಗರ ಜಿಲ್ಲೆ–1, ಬೆಂಗಳೂರು ಗ್ರಾಮಾಂತರ–1, ಬಾಗಲಕೋಟೆ –1, ದಕ್ಷಿಣ ಕನ್ನಡ–2, ದಾವಣಗೆರೆ–1, ಹಾಸನ –1, ಶಿವಮೊಗ್ಗ–1, ಉಡುಪಿ –1, ಯಾದಗಿರಿ–1, ಚಿಕ್ಕಬಳ್ಳಾಪುರ–1, ವಿಜಯನಗರದಲ್ಲಿ–2 ಸಭೆಗಳು ನಡೆದಿದ್ದು ಹೊರತುಪಡಿಸಿದರೆ, ಇತರೆ ಜಿಲ್ಲೆಗಳಲ್ಲಿ ನಡೆದಿಲ್ಲ.
‘ಅಂಗವಿಕಲರ ಕಲ್ಯಾಣಕ್ಕೆ ಸರ್ಕಾರವು ಕಾಯಿದೆ ಜಾರಿಗೊಳಿಸಿ, ಹತ್ತಾರು ಕಾರ್ಯಕ್ರಮ ರೂಪಿಸಿದೆ. ಆದರೆ, ಇವುಗಳ ಅನುಷ್ಠಾನದಲ್ಲಿ ಅಕ್ರಮ, ವಿಳಂಬ ಆಗುತ್ತಿದೆ. ಈ ಕುರಿತ ಸಮಸ್ಯೆ ಆಲಿಸಲು ಕುಂದು ಕೊರತೆ ಆಲಿಕೆ ಸಭೆ ನಡೆಯಬೇಕು. ಸಭೆಯೇ ನಡೆಸದಿದ್ದರೆ, ಸಮಸ್ಯೆ ಪರಿಹಾರ ಆಗುವುದಾದರೂ ಹೇಗೆ? ನಮ್ಮ ಹಕ್ಕು ಕೇಳಲು ಹೋದರೆ, ನಮ್ಮನ್ನೇ ಬೆದರಿಸಲಾಗುತ್ತದೆ’ ಎಂದು ರಾಜ್ಯ ಅಂಗಕವಿಕಲರ ಹಾಗೂ ಪಾಲಕರ ಒಕ್ಕೂಟದ ಸದಸ್ಯ ಎನ್. ಕುಮಾರಪ್ಪ ತಿಳಿಸಿದರು.
‘ಸವಲತ್ತು, ಸಲಕರಣೆಗಳು ಅನರ್ಹರ ಪಾಲಾಗುತ್ತಿವೆ. ಗುರುತಿನ ಚೀಟಿ ಮಾಡಿಸಲೂ ಲಂಚ ಕೊಡಬೇಕಿದೆ. ಇಲಾಖೆಗಳಲ್ಲಿ ಶೇ 5ರ ಅನುದಾನ ಮೀಸಲಿಡುತ್ತಿಲ್ಲ, ಮೀಸಲಿಟ್ಟ ಅನುದಾನ ಸದ್ಬಳಕೆಯಾಗಿಲ್ಲ. 2023–24ನೇ ಸಾಲಿನಲ್ಲಿ ರಾಜ್ಯದಾದ್ಯಂತ 15,670 ಯಂತ್ರಚಾಲಿತ ವಾಹನಗಳನ್ನು ನೀಡಿರುವುದು ದಾಖಲೆಗಳಲ್ಲಿದೆ. ಆದರೆ, ಅಂಗವೈಕಲ್ಯ ಇಲ್ಲದವರಿಗೂ ವಾಹನಗಳು ಸಿಕ್ಕಿವೆ. ಪ್ರತಿಯೊಂದಕ್ಕೂ ಲಂಚ ಕೊಟ್ಟು, ಕೆಲಸ ಮಾಡಿಸಿಕೊಳ್ಳಬೇಕಾದ ಪರಿಸ್ಥಿತಿ ಇದೆ’ ಎಂದು ಅವರು ತಿಳಿಸಿದರು.
‘2011ರ ಜನಗಣತಿಯ ಪ್ರಕಾರ, ರಾಜ್ಯದಲ್ಲಿ 13,24,205 ಅಂಗವಿಕಲರು ಇದ್ದರು. ಈ 13 ವರ್ಷಗಳಲ್ಲಿ ಈ ಸಂಖ್ಯೆ ಏರಿಕೆಯಾಗಿದೆ. ಆದರೆ, ಸದ್ಯ 10,17,093 ಅಂಗವಿಕಲರಿಗೆ ಮಾಸಾಶನ ಸಿಗುತ್ತಿದೆ.
ನಮ್ಮ ರಾಜ್ಯದಲ್ಲಿ ಅಂಗವಿಕಲರ ಕಲ್ಯಾಣ ಕಾರ್ಯಗಳು ಚೆನ್ನಾಗಿ ಆಗುತ್ತಿವೆ. ಆದರೂ ತಿಂಗಳಿಗೆ ಒಂದಾದರೂ ಅಹವಾಲು ಸಭೆ ನಡೆಸಲು ಜಿಲ್ಲಾಧಿಕಾರಿಗಳಿಗೆ ತಿಳಿಸಿದ್ದೇನೆ– ದಾಸ್ ಸೂರ್ಯವಂಶಿ ಅಂಗವಿಕಲ ವ್ಯಕ್ತಿಗಳ ಹಕ್ಕು ಅಧಿನಿಯಮ ಅನುಷ್ಠಾನದ ರಾಜ್ಯ ಆಯುಕ್ತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.