ADVERTISEMENT

ವಿದೇಶಿ ಸಂಶೋಧಕರು, ವಿದ್ಯಾರ್ಥಿಗಳ ಸೆಳೆಯೋಣ..

ವಿಎಸ್‌ಕೆ ವಿವಿ: ವಿದ್ಯಾ ವಿಧಾಯಕ ಪರಿಷತ್‌ಸಭೆಯಲ್ಲಿ ಕುಲಪತಿ ಪ್ರೊ.ಸುಭಾಷ್

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2018, 13:16 IST
Last Updated 5 ಅಕ್ಟೋಬರ್ 2018, 13:16 IST
ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್ ಮಾತನಾಡಿದರು. ಕುಲಸಚಿವರಾದ ಪ್ರೊ.ಹೊನ್ನು ಸಿದ್ಧಾರ್ಥ ಮತ್ತು ಪ್ರೊ.ತುಳಸಿಮಾಲಾ ಇದ್ದರು.
ಸಭೆಯಲ್ಲಿ ಕುಲಪತಿ ಪ್ರೊ.ಎಂ.ಎಸ್‌.ಸುಭಾಷ್ ಮಾತನಾಡಿದರು. ಕುಲಸಚಿವರಾದ ಪ್ರೊ.ಹೊನ್ನು ಸಿದ್ಧಾರ್ಥ ಮತ್ತು ಪ್ರೊ.ತುಳಸಿಮಾಲಾ ಇದ್ದರು.   

ಬಳ್ಳಾರಿ; ‘ವಿದೇಶಿ ಸಂಶೋಧಕರು ಮತ್ತು ವಿದ್ಯಾರ್ಥಿಗಳನ್ನು ಸೆಳೆಯುವುದರಿಂದ ವಿಶ್ವವಿದ್ಯಾಲಯದ ಘನತೆ ಹೆಚ್ಚಾಗುತ್ತದೆ’ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಸ್. ಸುಭಾಷ್‌ ಪ್ರತಿಪಾದಿಸಿದರು.

ನಗರದಲ್ಲಿ ಶುಕ್ರವಾರ ನಡೆದ ವಿಶ್ವವಿದ್ಯಾಲಯದ ವಿದ್ಯಾ ವಿಧಾಯಕ ಪರಿಷತ್ ಸಭೆಯಲ್ಲಿ ಮಾತನಾಡಿದ ಅವರು, ‘ಮೈಸೂರು ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಸಂಶೋಧಕರು ಭೇಟಿ ನೀಡುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳೂ ದಾಖಲಾಗುತ್ತಾರೆ. ಆದರೆ ವಿಶ್ವವಿಖ್ಯಾತ ಹಂಪಿಗೆ ಭೇಟಿ ನೀಡುವ ಯಾವೊಬ್ಬ ಸಂಶೋಧಕರು ನಮ್ಮ ವಿವಿಗೆ ಭೇಟಿ ನೀಡುತ್ತಿಲ್ಲ. ಅವರನ್ನು ಸೆಳೆಯುವಲ್ಲಿ ವಿಫಲರಾಗಿದ್ದೇವೆ’ ಎಂದು ವಿಷಾದಿಸಿದರು.

ವಿಭಾಗಗಳಲ್ಲಿ ಬಲವಿಲ್ಲ: ವಿದೇಶಿ ಸಂಶೋಧಕರನ್ನು ಸೆಳೆದರೆ ವಿಶ್ವವಿದ್ಯಾಲಯದ ಸಹಯೋಗದಲ್ಲೆ ಸಂಶೋಧನೆ ನಡೆಸಲು ಅವರಿಗೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳು ಇಲ್ಲಿಯೇ ಕಲಿಯುವಂತಾಗುತ್ತದೆ. ಆದರೆ ಈ ಅವಕಾಶಗಳನ್ನು ವಿಶ್ವ ವಿದ್ಯಾಲಯ ಬಳಸಿಕೊಳ್ಳುತ್ತಿಲ್ಲ. ಏಕಂದರೆ ನಮ್ಮ ವಿಭಾಗಗಳು ಅದಕ್ಕೆ ತಕ್ಕಂತೆ ಬಲಗೊಂಡಿಲ್ಲ’ ಎಂದರು.

ADVERTISEMENT

‘ಈ ಬಗ್ಗೆ ಮೈಸೂರು ವಿಶ್ವ ವಿದ್ಯಾಲಯದ ಪ್ರೊ.ಆರ್.ಇಂದಿರಾ ಅವರೊಂದಿಗೆ ಚರ್ಚಿಸಿದ್ದು. ಸಹಕರಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ದಾಖಲೆ ಪರಿಶೀಲನೆ: ‘ಸ್ವಾಯತ್ತವಾಗಿರುವ ನಗರದ ಸರಳಾದೇವಿ ಸತೀಶ್‌ಚಂದ್ರ ಅಗರವಾಲ್‌ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವತಂತ್ರವಾದ ವಿದ್ಯಾ ವಿಧಾಯಕ ಪರಿಷತ್‌ ಮತ್ತು ಅಧ್ಯಯನ ಮಂಡಳಿಗಳಿರಬೇಕು ಎಂಬ ಪ್ರಾಥಮಿಕ ಸಂಗತಿಯೂ ಅಲ್ಲಿನ ಪ್ರಮುಖರಿಗೆ ತಿಳಿದಿಲ್ಲ’ ಎಂದು ಕುಲಪತಿ ವಿಷಾದಿಸಿದರು.

‘ಕೆಲವು ಸ್ನಾತಕೋತ್ತರ ಕೋರ್ಸ್‌ಗಳನ್ನು ನಡೆಸುತ್ತಿರುವ ಕಾಲೇಜು ಅದಕ್ಕೆ ಮಾನ್ಯತೆ ನೀಡಬೇಕು ಎಂದು ಮನವಿ ಸಲ್ಲಿಸಿದೆ. ಅದಕ್ಕೂ ಮುಂಚೆ ಅಲ್ಲಿನ ಪರಿಷತ್ತು ಮತ್ತು ಅಧ್ಯಯನ ಮಂಡಳಿ ಅನುಮೋದನೆ ಪಡೆಯಬೇಕು. ಆದರೆ ಅವೆರಡೂ ಅಲ್ಲಿ ಇಲ್ಲ. ಹೀಗಾಗಿ ಎಲ್ಲ ಕೋರ್ಸ್‌, ವಿದ್ಯಾರ್ಥಿಗಳು, ಪರೀಕ್ಷೆಗಳ ದಾಖಲೆಗಳನ್ನು ಪರಿಶೀಲನೆಗೆ ಸಲ್ಲಿಸಿದೆ. ಅವುಗಳನ್ನು ಪರಿಶೀಲಿಸಿಯೇ ಮಾನ್ಯತೆ ನೀಡಬಹುದು’ ಎಂದರು.

ಪರೀಕ್ಷಾ ಅಕ್ರಮ ಎಸಗಿರುವ ವಿದ್ಯಾರ್ಥಿಗಳಿಂದ ವಸೂಲು ಮಾಡುವ ಶುಲ್ಕವನ್ನು ₨ ೨ ಸಾವಿರದಿಂದ ₨ ೩ ಸಾವಿರಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಮರುಪರಿಶೀಲನೆ ಮಾಡಬೇಕು’ ಎಂದು ಪರಿಷತ್ತಿನ ಸದಸ್ಯ ಬಸವರಾಜ ಸ್ವಾಮಿ ಮಳಿಮಠ ಆಗ್ರಹಿಸಿದರು.

ಕುಲಸಚಿವರಾದ ಸುವರ್ಣಮಾಲಾ ಮತ್ತು ಪ್ರೊ.ಹೊನ್ನು ಸಿದ್ದಾರ್ಥ ಪಾಲ್ಗೊಂಡಿದ್ದರು. ಇದೇ ಮೊದಲ ಬಾರಿಗೆ ನಗರದ ಬೆಳಗಲ್‌ ರಸ್ತೆಯಲ್ಲಿರುವ ವಿಶ್ವವಿದ್ಯಾಲಯದ ಅತಿಥಿ ಗೃಹದ ಸಭಾಂಗಣದಲ್ಲಿ ಸಭೆಯು ನಡೆಯಿತು.

***

ಡಿಬಾರ್ ಆದವ ಮತ್ತೆ ಪರೀಕ್ಷೆಗೆ ಬಂದ!
ಬಳ್ಳಾರಿ: ಪರೀಕ್ಷಾ ಅಕ್ರಮದ ಬಗ್ಗೆ ಸಭೆಯಲ್ಲಿ ಗಮನ ಸೆಳೆದ ಕಾಲೇಜು ಅಭಿವೃದ್ಧಿ ಮಂಡಳಿ ನಿರ್ದೇಶಕ ಸುರೇಶ್ ಬಾಬು, ‘ಗಂಗಾವತಿಯ ಎಸ್ವಿಕೆ ಕಾಲೇಜಿನಲ್ಲಿ ಪರೀಕ್ಷಾ ಅಕ್ರಮ ನಡೆಸಿದ ಡಿಬಾರ್ ಆಗಿದ್ದ ವಿದ್ಯಾರ್ಥಿಯೊಬ್ಬ ಮಾರನೇ ದಿನ ಮತ್ತೆ ಪರೀಕ್ಷೆಗೆ ಬಂದಿದ್ದ. ಹೇಗೆ ಬಂದೆ ಎಂದು ಕೇಳಿದ್ದಕ್ಕೆ ಪ್ರಾಂಶುಪಾಲರು ಪ್ರವೇಶ ಪತ್ರ ಕೊಟ್ಟರು ಬಂದೆ ಎಂದ’ ಎಂದು ಅಚ್ಚರಿ ವ್ಯಕ್ತಪಡಿಸಿದರು.
‘ಅಕ್ರಮ ನಡೆಸಿ ಒಮ್ಮೆ ಡಿಬಾರ್ ಆದವರ ಪ್ರವೇಶ ಪತ್ರಗಳು ಮತ್ತೆ ಆನ್‌ಲೈನ್‌ನಲ್ಲಿ ದೊರಕದಂತೆ ಮಾಡಬೇಕು’ ಆಗ ಮಾತ್ರ ಅಕ್ರಮಕ್ಕೆ ಕಡಿವಾಣ ಹಾಕುವುದು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.