ADVERTISEMENT

ಬಳ್ಳಾರಿ | ಹಕ್ಕುಪತ್ರಕ್ಕಾಗಿ ಹೋರಾಟ: ನಟ ಚೇತನ್‌ ಭಾಗಿ

ಸಮ ಸಮಾಜದ ನಿರ್ಮಿಸುವ ಯಾವುದೇ ಹೋರಾಟಕ್ಕೂ ಬರುವುದಾಗಿ ಭರವಸೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 15:33 IST
Last Updated 21 ಫೆಬ್ರುವರಿ 2025, 15:33 IST
ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬಳ್ಳಾರಿಯ ರಾಜೀವ್‌ ಗಾಂಧಿ ನಗರದ ನಿವಾಸಿಗಳು ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಚೇತನ್‌ ಭಾಗವಹಿಸಿ ಬೆಂಬಲ ಸೂಚಿಸಿದರು
ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಬಳ್ಳಾರಿಯ ರಾಜೀವ್‌ ಗಾಂಧಿ ನಗರದ ನಿವಾಸಿಗಳು ಶುಕ್ರವಾರ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ನಟ ಚೇತನ್‌ ಭಾಗವಹಿಸಿ ಬೆಂಬಲ ಸೂಚಿಸಿದರು   

ಬಳ್ಳಾರಿ: ಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ 34ರ ರಾಜೀವ್‌ ಗಾಂಧಿ ನಗರ ನಿವಾಸಿಗಳಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಆಗ್ರಹಿಸಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹೋರಾಟ ನಡೆಯಿತು. ಇದಕ್ಕೂ ಮುನ್ನ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಯಿತು. 

‘ರಾಜೀವ್‌ ಗಾಂಧಿ ನಗರದ ಟಿ.ಎಸ್‌–200ನಲ್ಲಿ 60 ವರ್ಷಗಳಿಂದ ನೆಲೆಸಿರುವ ನಮಗೆ ಹಕ್ಕುಪತ್ರ ನೀಡಬೇಕು. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ’ ಎಂದು ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾತನಾಡಿದ ನಟ ಚೇತನ್‌, ‘ತಳಮಟ್ಟದ ಹೋರಾಟದಿಂದ ಮಾತ್ರ ಬದಲಾವಣೆ ಸಾಧ್ಯ. ನನಗೆ ಈ ಹೋರಾಟ ಇಂದು ಗೊತ್ತಾಗಿದೆ. ಆದರೆ, ಈ ಹೋರಾಟ 60 ವರ್ಷಗಳಿಂದ ನಡೆಯುತ್ತಿದೆ. ಆದರೂ ಆಳುವ ವರ್ಗ ಇದರ ಬಗ್ಗೆ ಮೂಕ ಮತ್ತು ಕಿವುಡಾಗಿದೆ. ಶ್ರೀಮಂತರ ಪರವಾಗಿ ಆಳುವ ವರ್ಗವಿದೆ. ಬಡವರನ್ನು ಮರೆತಿದೆ. ಇವರನ್ನು ಮತಕ್ಕಾಗಿ ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಕರ್ನಾಟಕಕ್ಕೆ ಪರ್ಯಾಯ ಬೇಕು. ಕನ್ನಡಿಗರ ಕಾಳಜಿ ಇರುವ ಸರ್ಕಾರ ಬೇಕು. ಅಧಿಕಾರಕ್ಕೆ ಬರುವ ಮುನ್ನ ಗ್ಯಾರಂಟಿ ಭರವಸೆ ನೀಡಿದವರು, ನಂತರ ಕಡಲೆಕಾಯಿ ತಿನ್ನುತ್ತ ಕೂತರು. ದಿನನಿತ್ಯ ಕೆಲಸ ಮಾಡುವ ನಾಯಕರು ಬೇಕು. ನ್ಯಾಯಬದ್ಧವಾದ ಎಲ್ಲ ಹೋರಾಟಗಳ ಹಾಗೂ ಸಮ ಸಮಾಜದ ಪರ ಇರುತ್ತೇನೆ’ ಎಂದು ಅವರು ಹೇಳಿದರು.  

ADVERTISEMENT

ಹಕ್ಕು ಪತ್ರ ವಿತರಣೆಗೆ ಆಗ್ರಹಿಸಿ ಸರ್ಕಾರಕ್ಕೆ ಬರೆದ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮ್ಮದ್ ಝುಬೇರ ಅವರಿಗೆ ಸಲ್ಲಿಸಲಾಯಿತು.

ಮುಖಂಡರಾದ ನಾರಾಯಣ,  ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ‌ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಪನ್ನರಾಜ್, ಸ್ಥಳೀಯರಾದ ಕಟ್ಟೆಸ್ವಾಮಿ, ಪಿ.ಶೇಖ‌ರ್, ಮಂಜುನಾಥ, ರತ್ನಯ್ಯ, ಮಲ್ಲಿಕಾರ್ಜುನ, ಜೆ.ವಿ.ಮಂಜುನಾಥ, ಷಣ್ಮುಕಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.