
ಹೂವಿನಹಡಗಲಿ: ಕೃಷಿ ಇಲಾಖೆಯಲ್ಲಿ ಟ್ರ್ಯಾಕ್ಟರ್, ಕೃಷಿ ಯಂತ್ರೋಪಕರಣ ಸಬ್ಸಿಡಿ ಯೋಜನೆಗಳ ದುರುಪಯೋಗದ ಬಗ್ಗೆ ದೂರುಗಳಿದ್ದು, ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಬೇಕು ಎಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.
ತಾಲ್ಲೂಕು ಪಂಚಾಯಿತಿ ರಾಜೀವ್ ಗಾಂಧಿ ಸಭಾಂಗಣದಲ್ಲಿ ಮಂಗಳವಾರ ತಾಲ್ಲೂಕು ಪಂಚಾಯಿತಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
‘ಕೃಷಿ ಇಲಾಖೆ ಸಬ್ಸಿಡಿ ಯೋಜನೆಗಳು ಕೆಲವರಿಗೇ ಸೀಮಿತವಾಗಿವೆ. ಸಬ್ಸಿಡಿಯಲ್ಲಿ ಖರೀದಿಸಿದ ಟ್ರ್ಯಾಕ್ಟರನ್ನು ಫಲಾನುಭವಿ ಕೆಲ ದಿನಗಳಲ್ಲೇ ಮಾರಾಟ ಮಾಡಿ, ಮತ್ತೆ ಅರ್ಜಿ ಸಲ್ಲಿಸಿರುವ ಉದಾಹರಣೆಗಳಿವೆ. ಇಂತಹ ಅಕ್ರಮ ತಡೆಯಬೇಕು. ರೈತರಿಗೆ ವಿತರಿಸಬೇಕಿರುವ ಲಘು ಪೋಷಕಾಂಶ, ಕೀಟನಾಶಕ, ಇತರೆ ಪರಿಕರಗಳನ್ನು ಇಲ್ಲಿನ ಕಚೇರಿಗೆ ಪೂರೈಸದೇ ಬುಕ್ ಅಡ್ಜಸ್ಟ್ ಮೆಂಟ್ ಆಗಿರುವ ಮಾಹಿತಿ ಇದೆ. ಕಡ್ಡಾಯವಾಗಿ ತಮ್ಮ ಗಮನಕ್ಕೆ ತಂದು ಫಲಾನುಭವಿಗಳಿಗೆ ಸೌಲಭ್ಯ ಹಂಚಿಕೆ ಮಾಡಬೇಕು ಎಂದು ಸೂಚಿಸಿದರು.
‘ತಾಲ್ಲೂಕು ಕೃಷಿ ಅವಲಂಬಿತವಾಗಿದ್ದರೂ ಎರಡು ದಶಕದಿಂದ ಕೃಷಿಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಸರ್ಕಾರದ ಯೋಜನೆಗಳನ್ನು ಬಳಸಿಕೊಂಡು ರೈತರ ಬದುಕನ್ನು ಸಶಕ್ತಗೊಳಿಸುವಂತಹ ‘ಸಮಗ್ರ ಕೃಷಿ ಮಾದರಿ’ ಯನ್ನು ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಇಲಾಖೆಗಳ ಸಮನ್ವಯದೊಂದಿಗೆ ಸಿದ್ದಪಡಿಸಬೇಕು. ರೈತರಿಗೆ ಅರಿವು ಮೂಡಿಸಿ, ಈ ಮಾದರಿ ಅಳವಡಿಕೆಗೆ ಉತ್ತೇಜನ ನೀಡುತ್ತೇವೆ’ ಎಂದು ತಿಳಿಸಿದರು.
ಬೆಂಬಲ ಬೆಲೆ ಯೋಜನೆಯಲ್ಲಿ ಮೆಕ್ಕೆಜೋಳ ಖರೀದಿಸುವಂತೆ ಮೈಲಾರ ಶುಗರ್ಸ್ ಕಾರ್ಖಾನೆಯವರಿಗೆ ಸರ್ಕಾರ ಆದೇಶಿಸಿದ್ದರೂ ಅವರು ಪಾಲಿಸಿಲ್ಲ. ನಿಗದಿತ ಪ್ರಮಾಣದ ಉತ್ಪನ್ನ ಖರೀದಿಸದಿದ್ದರೆ ಕಾರ್ಖಾನೆಯ ಮೇಲೆ ಕ್ರಮ ಜರುಗಿಸಿ ಎಂದು ತಹಶೀಲ್ದಾರರಿಗೆ ಸೂಚಿಸಿದರು.
ಕುಡುಕರ ಹಾವಳಿ ನಿಯಂತ್ರಿಸಿ : ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿರುವ ಕಳ್ಳತನ ಪ್ರಕರಣ ತಡೆಯಬೇಕು. ಪಟ್ಟಣದ ಖಾಲಿ ಲೇಔಟ್ ಗಳಲ್ಲಿ ಸಂಜೆಹೊತ್ತು ಕುಡುಕರ ಹಾವಳಿ ಹೆಚ್ಚಾಗಿ ಸಾರ್ವಜನಿಕರಿಗೆ ಕಿರಿಕಿರಿಯಾಗಿದೆ. ರಸ್ತೆಗಳಲ್ಲಿ ವಾಹನಗಳನ್ನು ಅಡ್ಡಾದಿಡ್ಡಿ ನಿಲುಗಡೆ ಮಾಡುವವರ ಮೇಲೆ ಕ್ರಮ ಜರುಗಿಸಿ ಎಂದು ತಿಳಿಸಿದರು.
‘ರಾತ್ರಿ ಬೀಟ್ ಗಳನ್ನು ಬಿಗಿಗೊಳಿಸಿದ್ದೇವೆ. ಆಯಕಟ್ಟಿನ ಸ್ಥಳಗಳಲ್ಲಿ ಸಿ.ಸಿ.ಕ್ಯಾಮೆರಾ ಅಳವಡಿಸಿದರೆ ಕಳ್ಳತನ, ಇತರೆ ಅಕ್ರಮ ತಡೆಯಲು ಅನುಕೂಲವಾಗುತ್ತದೆ’ ಎಂದು ಪಿಎಸ್ಐ ಮಣಿಕಂಠ ಹೇಳಿದರು. ‘ಸದ್ಯದಲ್ಲೇ ಸುಧಾರಿತ ತಂತ್ರಜ್ಞಾನದ ಸಿಸಿ ಕ್ಯಾಮೆರಾಗಳ ಅಳವಡಿಸುತ್ಥೇವೆ’ ಎಂದು ಶಾಸಕರು ಹೇಳಿದರು.
ತಹಶೀಲ್ದಾರ್ ಕೆ.ಎಂ.ಗುರುಬಸವರಾಜ, ತಾ.ಪಂ. ಇಒ ಜಿ.ಪರಮೇಶ್ವರ ಉಪಸ್ಥಿತರಿದ್ದರು.
ಸಸ್ಪೆಂಡ್ ರಿವೋಕ್ ಮಾಡ್ಸಿದ್ರೂ ಬದಲಾಗಿಲ್ಲ: ‘ನಿಮ್ಮನ್ನು ಸಸ್ಪಂಡ್ ಮಾಡ್ಸಿ ನಂತರ ರಿವೋಕ್ ಮಾಡ್ಸಿದೆ. ವರ್ಗಾವಣೆ ಮಾಡ್ಸಿದೆ ಆದ್ರೂ ನಿಮ್ಮ ಕಾರ್ಯಶೈಲಿ ಬದಲಾಗಿಲ್ಲ’ ಎಂದು ಮಿರಾಕೊರನಹಳ್ಳಿ ಮೊರಾರ್ಜಿ ಶಾಲೆ ಪ್ರಾಚಾರ್ಯ ಶ್ರೀಧರ ಅವರನ್ನು ಶಾಸಕ ಕೃಷ್ಣನಾಯ್ಕ ತರಾಟೆಗೆ ತೆಗೆದುಕೊಂಡರು. ‘ವಾರ್ಡ್ ನ್ ಹುದ್ದೆ ಲಾಭದಾಯಕ ಇರುವುದರಿಂದ ನಿಮ್ಮಲ್ಲಿ ಪೈಪೋಟಿ ಹೆಚ್ಚಿದೆ. ನಿಮ್ಮ ಒಳ ಜಗಳ ಮಕ್ಕಳ ಮೇಲೆ ಪರಿಣಾಮ ಬೀರಬಾರದು. ವಸತಿ ಶಾಲೆಗಳಲ್ಲಿ ರಾಜಕೀಯ ಹಾಗೂ ಸ್ಥಳೀಯರ ಪ್ರಭಾವಗಳಿಗೆ ಮಣೆ ಹಾಕಬಾರದು ಎಂದು ಸೂಚಿಸಿದರು. ‘ವಸತಿ ಶಾಲೆಗಳಿಗೆ ಸೋಪು ಕಿಟ್ ಸೊಳ್ಳೆ ಪರದೆ ಬ್ಯಾಗ್ ಸಮರ್ಪಕ ಪೂರೈಕೆಯಾಗುತ್ತಿಲ್ಲ. ಈ ಕುರಿತು ಮಕ್ಕಳು ಪೋಷಕರ ಪ್ರಶ್ನಿಸಿದಾಗ ಮುಜಗರವಾಗುತ್ತಿದೆ. ಪ್ರತಿ ವಸತಿ ಶಾಲೆಯಲ್ಲಿ ಪಾಲಕರ ವೇಟಿಂಗ್ ರೂಂ. ನಿರ್ಮಿಸುವುದು ಅಗತ್ಯವಿದೆ’ ಎಂದು ಹಂಪಸಾಗರ ಮೊರಾರ್ಜಿ ಶಾಲೆ ಪ್ರಾಚಾರ್ಯ ಯಮನೂರುಸ್ವಾಮಿ ಸಭೆಯ ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.