
ಹೂವಿನಹಡಗಲಿ: ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳನ್ನು ವಿಲೀನಗೊಳಿಸುವ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ತೀರ್ಮಾನವನ್ನು ಸರ್ಕಾರ ಕೈ ಬಿಡಬೇಕು ಎಂದು ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ಎಫ್) ಕಾರ್ಯಕರ್ತರು ಆಗ್ರಹಿಸಿದರು.
ಫೆಡರೇಷನ್ ಪದಾಧಿಕಾರಿಗಳು ಶನಿವಾರ ತಾಲ್ಲೂಕು ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಎಸ್ಎಫ್ ಸಂಚಾಲಕ ಪಿ.ಎಂ.ತೋಂಟದಾರ್ಯ ಮಾತನಾಡಿ, ಸರ್ಕಾರ ವಿಲೀನ ಪ್ರಕ್ರಿಯೆ ಕೈಗೊಂಡರೆ ರಾಜ್ಯದಲ್ಲಿ 27,000 ಕನ್ನಡ ಶಾಲೆಗಳು ಮುಚ್ಚಲ್ಪಡುತ್ತವೆ. ರಾಷ್ಟ್ರೀಯ ಶಿಕ್ಷಣ ನೀತಿಗೆ ವಿರುದ್ಧದ ಈ ತೀರ್ಮಾನದಿಂದ ಗ್ರಾಮೀಣ ಭಾಗದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ದುಡಿಯುವ ವರ್ಗದ ಮಕ್ಕಳನ್ನು ಅಕ್ಷರದಿಂದ ವಂಚಿತರನ್ನಾಗಿಸುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು.
ಶಾಲೆಗಳು ದೂರವಾಗುವುದರಿಂದ ಹೆಣ್ಣು ಮಕ್ಕಳು ಶಿಕ್ಷಣ ಮೊಟಕುಗೊಳಿಸುತ್ತಾರೆ. ಅಂಗವಿಕಲ ಮಕ್ಕಳಿಗೂ ತೊಂದರೆಯಾಗುತ್ತದೆ. ಹಳ್ಳಿಗಳಲ್ಲಿ ಶಾಲೆ ಇರದಿದ್ದರೆ ಬಾಲ ಕಾರ್ಮಿಕರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಇಂತಹ ಪ್ರಸ್ತಾವವನ್ನು ಮುಖ್ಯಮಂತ್ರಿಗಳು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.
ಎಐಎಸ್ಎಫ್ ಶಾಂತರಾಜ ಜೈನ್, ಜಂಗ್ಲಿಸಾಬ್, ಮಾಲತೇಶ, ಹನುಮಂತ, ಅಭಿ ಇದ್ದರು.