
ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಬುಧವಾರ ‘ಅಕ್ಕ ಪಡೆ’ಗೆ ಚಾಲನೆ ನೀಡಲಾಯಿತು.
ಬಳ್ಳಾರಿ: ಜಿಲ್ಲೆಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತೆಗಾಗಿ ‘ಅಕ್ಕ ಪಡೆ’ಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ‘ಅಕ್ಕ ಪಡೆ’ಗೆ ಚಾಲನೆ ನೀಡಿ ಅವರು ಮಾತನಾಡಿದರು.
‘ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳಿಗಿರುವ ಹಕ್ಕುಗಳು, ಕಾನೂನುಗಳ ಅರಿವು ಮೂಡಿಸುವುದು ಮತ್ತು ಅವು ಉಲ್ಲಂಘನೆಯಾದಲ್ಲಿ ಅವರು ನ್ಯಾಯ ಪಡೆಯಲು ಇರುವ ವಿಧಾನಗಳ ಕುರಿತು ಅರಿವು ಮೂಡಿಸುವುದು ‘ಅಕ್ಕ ಪಡೆ’ ಉದ್ದೇಶ’ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ ಪೆನ್ನೇಕರ್ ಮಾತನಾಡಿ, ‘ದೌರ್ಜನ್ಯಕ್ಕೊಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ತಕ್ಷಣದ ಸಹಾಯ, ಕಾನೂನು ಜಾಗೃತಿ ಮತ್ತು ಸಲಹೆ ನೀಡುವುದು ‘ಅಕ್ಕ ಪಡೆ’ ಕಾರ್ಯವಾಗಿದೆ. ಇದರ ಮೇಲ್ವಿಚಾರಣೆಗಾಗಿ ಪರಿಶೀಲನಾ ಸಮಿತಿ ರಚಿಸಲಾಗಿದ್ದು, ಪ್ರತಿ ಮೂರು ತಿಂಗಳಿಗೊಮ್ಮೆ ವರದಿಯ ಪರಿಶೀಲನೆ ನಡೆಸಲಾಗುವುದು’ ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್.ಹೊಸಮನೆ ಮಾತನಾಡಿ, ’ಅಕ್ಕ ಎಂದರೆ ಒಬ್ಬ ಸ್ತ್ರೀ, ತಾಯಿ, ಅಕ್ಕ, ಮಗಳು ಎಲ್ಲವೂ. ಮಹಿಳೆಯರ ಸುರಕ್ಷತೆ ಸಮಾಜದ ಜವಾಬ್ದಾರಿ. ಮಹಿಳೆಯರು ಮತ್ತು ಮಕ್ಕಳ ಮೇಲೆ ನಡೆಯುವ ಕೌಟುಂಬಿಕ ಹಿಂಸೆ, ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ವರದಕ್ಷಿಣೆ ಕಿರುಕುಳ, ಮಹಿಳಾ ಕಳ್ಳಸಾಗಣೆ ಸೇರಿದಂತೆ ಸಾಮಾಜಿಕ ಕೆಡುಕುಗಳನ್ನು ತಡೆಯಲು ಅಕ್ಕ ಪಡೆ ಒಂದು ಸಮುದಾಯ ಆಧಾರಿತ ರಕ್ಷಣಾ ಪಡೆಯಾಗಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಮ್ಮದ್ ಹಾರಿಸ್ ಸುಮೇರ್ ಮಾತನಾಡಿ, ‘ಅಪರಾಧ ನಡೆಯುವುದಕ್ಕೂ ಮುನ್ನ ಮುನ್ನೆಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹಾಗಾಗಿ ಎಲ್ಲಾ ಇಲಾಖೆಗಳ ಸಹಕಾರದೊಂದಿಗೆ ಪೋಕ್ಸೋ, ಬಾಲ್ಯವಿವಾಹದಿಂದಾಗುವ ದುಷ್ಪರಿಣಾಮ ಕುರಿತು ಅರಿವು ಮೂಡಿಸುವ ಕಾರ್ಯವಾಗಬೇಕಿದೆ’ ಎಂದರು.
‘ಜಿಲ್ಲೆಯಲ್ಲಿ ಬಾಲ್ಯವಿವಾಹ, ಬಾಲಗರ್ಭಿಣಿ ಪ್ರಕರಣಗಳಿಗೆ ಕಡಿವಾಣ ಹಾಕಬೇಕು. ಈ ಕುರಿತು ಪ್ರಕರಣ ಹೆಚ್ಚು ಕಂಡುಬರುವ ತಾಲ್ಲೂಕುಗಳಲ್ಲಿ ಜಾಗೃತಿ ನೀಡಬೇಕು. ಇದಕ್ಕೆ ಗಸ್ತು ನಡೆಸಬೇಕು. ಅಕ್ಕಪಡೆ ಯೋಜನೆಯು ಯಶಸ್ವಿಯಾಗಿ ಅನುಷ್ಠಾನಗೊಳ್ಳಲು ಎಲ್ಲಾ ಇಲಾಖೆಗಳ ಸಹಕಾರವೂ ಅಗತ್ಯವಾಗಿದೆ’ ಎಂದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳಾದ ಕೆ.ಪಿ ರವಿಕುಮಾರ್, ನವೀನ್ ಕುಮಾರ್.ಎನ್., ಗೃಹರಕ್ಷಕ ದಳದ ಜಿಲ್ಲಾ ಕಮಾಂಡೆಂಟ್ ಶೇಕ್ ಸಾಬ್, ಪದವಿ ಪೂರ್ವ ಶಿಕ್ಷಣಾ ಇಲಾಖೆಯ ಉಪನಿರ್ದೇಶಕ ಲಕ್ಷಣ್ ಹಳ್ಳದಮನೆ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಜಲಾಲಪ್ಪ.ಕೆ ಇದ್ದರು.
ಅಕ್ಕ ಪಡೆ ಕಾರ್ಯನಿರ್ವಹಣೆ ಹೇಗೆ?
ಮಹಿಳಾ ಮತ್ತು ಮಕ್ಕಳ ಅಭಿವೃದಿ ಇಲಾಖೆಯ ಉಪನಿರ್ದೇಶಕ ರಾಮಕೃಷ್ಣ.ಎಂ ಮಾತನಾಡಿ ‘ಜಿಲ್ಲಾ ಪೊಲೀಸ್ ಇಲಾಖೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲ್ಲಿ ಈ ಉಪಕ್ರಮವು ಪೊಲೀಸ್ ಗೃಹ ರಕ್ಷಕ ಸಿಬ್ಬಂದಿ ಮತ್ತು ತರಬೇತಿ ಪಡೆದ ಎನ್‌ಎಸ್‌ಸಿ ಕೆಡೆಟ್‌ಗಳ ತಂಡಗಳನ್ನು ಒಳಗೊಂಡಿದೆ. ನಾಲ್ಕು ಮಹಿಳಾ ಸಿಬ್ಬಂದಿ ಒಳಗೊಂಡ ವಾಹನ ಸಾರ್ವಜನಿಕ ಸ್ಥಳಗಳಲ್ಲಿ ಪಾಳಿ ವೇಳೆಯಲ್ಲಿ ಗಸ್ತು ತಿರುಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಹಿಂಸೆ ಸೇರಿದಂತೆ ಇತರೆ ಅಪರಾಧ ಚಟುವಟಿಕೆ ಕಂಡುಬಂದಲ್ಲಿ ತುರ್ತು ಸಹಾಯವಾಣಿ-112 ಮಹಿಳಾ ಸಹಾಯವಾಣಿ-181 ಮತ್ತು ಮಕ್ಕಳ ಸಹಾಯವಾಣಿ-1098 ಗೆ ಕರೆ ಮಾಡಿ ಮಾಹಿತಿ ನೀಡಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.