ADVERTISEMENT

‘ವಿಜಯ’ನಗರದ ಕದನಕ್ಕೆ ವೇದಿಕೆ ಸಿದ್ಧ

ಇನ್ನಷ್ಟು ತಾರಕಕ್ಕೇರಲಿರುವ ಪ್ರಚಾರ; ಘಟಾನುಘಟಿ ಮುಖಂಡರ ಪ್ರವಾಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST
ಜೆ.ಡಿ.ಎಸ್‌. ಬೆಂಬಲಿಸಿ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಿ.ಎಸ್‌.ಪಿ. ಅಭ್ಯರ್ಥಿ ಎಚ್‌. ಶಬ್ಬೀರ್‌ ಅವರನ್ನು ಜೆ.ಡಿ.ಎಸ್‌. ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ನೂರ್‌ ಅಹಮ್ಮದ್‌ ಅವರು ಗುರುವಾರ ಹೊಸಪೇಟೆಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು
ಜೆ.ಡಿ.ಎಸ್‌. ಬೆಂಬಲಿಸಿ ಚುನಾವಣಾ ಕಣದಿಂದ ಹಿಂದೆ ಸರಿದಿರುವ ಬಿ.ಎಸ್‌.ಪಿ. ಅಭ್ಯರ್ಥಿ ಎಚ್‌. ಶಬ್ಬೀರ್‌ ಅವರನ್ನು ಜೆ.ಡಿ.ಎಸ್‌. ರಾಜ್ಯ ಯುವ ಘಟಕದ ಕಾರ್ಯಾಧ್ಯಕ್ಷ ನೂರ್‌ ಅಹಮ್ಮದ್‌ ಅವರು ಗುರುವಾರ ಹೊಸಪೇಟೆಯಲ್ಲಿ ಪಕ್ಷಕ್ಕೆ ಬರಮಾಡಿಕೊಂಡರು   

ಹೊಸಪೇಟೆ: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಅಂತಿಮ ಕಣದಲ್ಲಿ 13 ಅಭ್ಯರ್ಥಿಗಳು ಉಳಿದುಕೊಂಡಿದ್ದು, ಚುನಾವಣಾ ಕದನಕ್ಕೆ ವೇದಿಕೆ ಸಿದ್ಧಗೊಂಡಂತಾಗಿದೆ.

ಗುರುವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು. ಆದರೆ, ಬಿಜೆಪಿ, ಕಾಂಗ್ರೆಸ್‌, ಜೆ.ಡಿ.ಎಸ್‌. ಹಾಗೂ ಪಕ್ಷೇತರ ಅಭ್ಯರ್ಥಿಗಳು ಎರಡು ವಾರಗಳ ಹಿಂದಿನಿಂದಲೇ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ.

ಬಿಜೆಪಿ ಪರ ರಾಜ್ಯ ನಾಯಕರ ದಂಡೇ ಕ್ಷೇತ್ರದಲ್ಲಿ ಪ್ರಚಾರ ಕೈಗೊಂಡಿದೆ. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಆರೋಗ್ಯ ಸಚಿವ ಬಿ. ಶ್ರೀರಾಮುಲು, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಸಂಸದರಾದ ವೈ.ದೇವೇಂದ್ರಪ್ಪ, ಕರಡಿ ಸಂಗಣ್ಣ, ಶಾಸಕರಾದ ಹಾಲಪ್ಪ ಆಚಾರ್‌, ರಾಜುಗೌಡ ಅವರು ಕ್ಷೇತ್ರಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ರವಿಕುಮಾರ ಕ್ಷೇತ್ರದಲ್ಲೇ ತಳವೂರಿದ್ದು, ಅವರ ನೇತೃತ್ವದಲ್ಲೇ ಪ್ರಚಾರ ನಡೆಯುತ್ತಿದೆ.

ADVERTISEMENT

ಇನ್ನೂ ಕಾಂಗ್ರೆಸ್‌ ಅಭ್ಯರ್ಥಿ ವೆಂಕಟರಾವ ಘೋರ್ಪಡೆ ಅವರು ಪಕ್ಷದ ಸ್ಥಳೀಯ ಮುಖಂಡರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಕಾರಣಾಂತರಗಳಿಂದ ಪಕ್ಷ ಬಿಟ್ಟು ಹೋಗಿದ್ದವರ ಮನವೊಲಿಸಿ ವಾಪಸ್‌ ಕರೆಸಿಕೊಂಡಿದ್ದಾರೆ. ಕಾಂಗ್ರೆಸ್‌ ಎಸ್ಸಿ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎಫ್‌.ಎಚ್‌. ಜಕ್ಕಪ್ಪನವರ ಪ್ರಚಾರ ನಡೆಸಿ ಹೋಗಿದ್ದಾರೆ. ಒಬ್ಬೊಬ್ಬರೇ ರಾಜ್ಯ ನಾಯಕರು ಬಂದು ಅವರ ಪರ ಮತಯಾಚಿಸುವರು.

ಈ ಹಿಂದೆ ಮಂಕಾಗಿದ್ದ ಜೆ.ಡಿ.ಎಸ್‌.ನಲ್ಲಿ ಹೊಸ ಹುರುಪು ಕಾಣಿಸಿಕೊಂಡಿದೆ. ನಾಮಪತ್ರ ಸಲ್ಲಿಸುವ ವೇಳೆ ಶಕ್ತಿ ಪ್ರದರ್ಶನದೊಂದಿಗೆ ಸದ್ದು ಮಾಡಿದ್ದ ಆ ಪಕ್ಷದ ಅಭ್ಯರ್ಥಿ ಕ್ಷೇತ್ರದಾದ್ಯಂತ ಬಿರುಸಿನ ಪ್ರಚಾರ ಕೈಗೊಂಡಿದ್ದಾರೆ. ನ. 23ರಂದು ಅವರ ಪರ ಜೆ.ಡಿ.ಎಸ್‌. ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ನಂತರ ಜೆ.ಡಿ.ಎಸ್‌. ವರಿಷ್ಠ ಎಚ್‌.ಡಿ. ದೇವೇಗೌಡ ಅವರು ಪ್ರವಾಸ ಕೈಗೊಳ್ಳಲಿದ್ದಾರೆ.

ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿರುವ ಕವಿರಾಜ ಅರಸ್‌ ಅತಿ ಉತ್ಸಾಹದಲ್ಲಿದ್ದು, ವ್ಯಾಪಕ ಪ್ರಚಾರ ಕೈಗೊಂಡಿದ್ದಾರೆ. ಅದೇ ರೀತಿ ರಾಷ್ಟ್ರೀಯವಾದಿ ಕಾಂಗ್ರೆಸ್‌ನ ಮಮತಾ, ಕರ್ನಾಟಕ ರಾಷ್ಟ್ರ ಸಮಿತಿಯ ಪ.ಯ.ಗಣೇಶ್‌, ಉತ್ತಮ ಪ್ರಜಾಕೀಯ ಪಕ್ಷದ ಮಹೇಶ ಲಂಬಾಣಿ, ಪಕ್ಷೇತರರಾದ ಕಿಚಿಡಿ ಕೊಟ್ರೇಶ್‌, ಅಲಿ ಹೊನ್ನೂರು, ಕೆ.ಉಮೇಶ, ಕಂಡಕ್ಟರ್‌ ಪಂಪಾಪತಿ, ಮಾರ್ಕಂಡಪ್ಪ, ಸಿ.ಎಂ. ಮಂಜುನಾಥ ಕ್ಷೇತ್ರದಾದ್ಯಂತ ಓಡಾಡುತ್ತಿದ್ದಾರೆ.

ಎಲ್ಲರ ಗುರಿ ಆನಂದ್‌ ಸಿಂಗ್‌:ಎಲ್ಲಾ ಪಕ್ಷದ ಅಭ್ಯರ್ಥಿಗಳು ಆನಂದ್‌ ಸಿಂಗ್‌ ಅವರನ್ನು ಗುರಿಯಾಗಿರಿಸಿ ಪ್ರಚಾರ ನಡೆಸುತ್ತಿದ್ದಾರೆ. ‘ಜನ ಅವರನ್ನು ಐದು ವರ್ಷದ ಅವಧಿಗೆ ಆಯ್ಕೆ ಮಾಡಿದ್ದರು. ಆದರೆ, ಜನರ ತೀರ್ಪನ್ನು ಧಿಕ್ಕರಿಸಿ, ಪಕ್ಷಾಂತರ ಮಾಡಿ ಚುನಾವಣೆ ನಡೆಯಲು ಕಾರಣೀಕರ್ತರಾಗಿದ್ದಾರೆ. ಅಂತಹವರನ್ನು ಜನ ತಿರಸ್ಕರಿಸಬೇಕು. ಹೊಸಬರಿಗೆ ಅವಕಾಶ ಕೊಡಬೇಕು’ ಎಂದು ಮತ ಯಾಚಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.