ADVERTISEMENT

ಭೂ ಕಬಳಿಕೆ ಆರೋಪ | ಜಂಟಿ ಸಮೀಕ್ಷೆಗೆ ತಂಡ ರಚನೆ: ಅನಿರುದ್ಧ್‌ ಶ್ರವಣ್‌

ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿರುದ್ಧದ ಭೂ ಕಬಳಿಕೆ ಆರೋಪ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 16 ಸೆಪ್ಟೆಂಬರ್ 2022, 8:59 IST
Last Updated 16 ಸೆಪ್ಟೆಂಬರ್ 2022, 8:59 IST
ಅನಿರುದ್ಧ್‌ ಶ್ರವಣ್‌ ಪಿ.
ಅನಿರುದ್ಧ್‌ ಶ್ರವಣ್‌ ಪಿ.   

ಹೊಸಪೇಟೆ (ವಿಜಯನಗರ): ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ವಿರುದ್ಧದ ಭೂ ಕಬಳಿಕೆಯ ಆರೋಪಕ್ಕೆ ಸಂಬಂಧಿಸಿದಂತೆ ಜಂಟಿ ಸಮೀಕ್ಷೆ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

ಭೂ ಒತ್ತುವರಿ ಸಂಬಂಧ ಮೊದಲ ದೂರು ಬಂದಾಗಲೇ ಜಿಲ್ಲಾಧಿಕಾರಿ ನಗರಾಭಿವೃದ್ಧಿ ಪ್ರಾಧಿಕಾರದಿಂದ (ಹುಡಾ) ವರದಿ ಕೇಳಿದ್ದರು. ಆದರೆ, ಹುಡಾ ಆಯುಕ್ತರು, ನೀರಾವರಿ ಮತ್ತು ಸರ್ವೇ ಇಲಾಖೆಯ ಸಹಕಾರ ಕೇಳಿದ್ದರು. ಈಗ ಮೂರೂ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಲಾಗಿದ್ದು, ಜಂಟಿ ಸಮೀಕ್ಷೆಗೆ ನಿರ್ಧರಿಸಲಾಗಿದೆ. ಈ ವಿಷಯವನ್ನು ಸ್ವತಃ ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಪಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಆದರೆ, ಜಂಟಿ ಸಮೀಕ್ಷೆ ಯಾವಾಗ ಆರಂಭವಾಗಲಿದೆ. ವರದಿ ಸಲ್ಲಿಸುವುದಕ್ಕೆ ತಂಡಕ್ಕೆ ವಿಧಿಸಿರುವ ಗಡುವು ಎಷ್ಟು ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ.

ADVERTISEMENT

‘ಸರ್ವೇ ನಂಬರ್‌ 63ರಲ್ಲಿ ಸಣ್ಣ ಕಾಲುವೆಗೆ ಸೇರಿದ 0.30 ಸೇಂಟ್ಸ್‌, ಸರ್ವೇ ನಂಬರ್‌ 67ಬಿ2ನಲ್ಲಿ ಕರ್ನಾಟಕ ಒಳಚರಂಡಿ ಯೋಜನೆಗೆ ಸೇರಿದ 5 ಸೇಂಟ್ಸ್‌ ಜಾಗ ಒತ್ತುವರಿ ಮಾಡಿಕೊಂಡು ಸಚಿವ ಆನಂದ್‌ ಸಿಂಗ್‌ ಬಂಗ್ಲೆ ನಿರ್ಮಿಸಿದ್ದಾರೆ. ಅವರಿಗೆ ಲೋಕಾಯುಕ್ತ ಕ್ಲೀನ್‌ ಚಿಟ್‌ ಕೊಟ್ಟಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗಳು, ಸರ್ವೇಯರ್‌ಗಳು ನನ್ನ ಹಾಗೂ ಆನಂದ್‌ ಸಿಂಗ್‌ ಸಮ್ಮುಖದಲ್ಲಿ ಜಾಗ ಹದ್ದು ಬಸ್ತು ಮಾಡಬೇಕು’ ಎಂದು ನಗರಸಭೆ ಸದಸ್ಯ ಅಬ್ದುಲ್‌ ಖದೀರ್‌ ಇತ್ತೀಚೆಗೆ ಆಗ್ರಹಿಸಿದ್ದರು.

‘ಒಂದುವೇಳೆ ಸಚಿವರಿಂದ ಸರ್ಕಾರಿ ಜಾಗ ಒತ್ತುವರಿಯಾಗಿಲ್ಲ ಎಂದು ಸರ್ವೇಯಿಂದ ಗೊತ್ತಾದರೆ ನಾನು ನನ್ನ ನಗರಸಭೆ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ. ಒಂದುವೇಳೆ ಆನಂದ್‌ ಸಿಂಗ್‌ ಅವರಿಂದ ಜಾಗ ಒತ್ತುವರಿಯಾಗಿದ್ದರೆ ಅವರು ಅವರ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು’ ಎಂದು ಖದೀರ್‌ ಸವಾಲು ಹಾಕಿದ್ದರು.

‘ನಾನು ಜಮೀನು ಒತ್ತುವರಿ ಮಾಡಿರುವುದು ಸಾಬೀತಾದರೆ ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡುವೆ. ಒಂದುವೇಳೆ ಒತ್ತುವರಿ ಆಗಿರದಿದ್ದರೆ ನನ್ನ ವಿರುದ್ಧ ಗಂಭೀರ ಆರೋಪ ಮಾಡಿರುವ ನಗರಸಭೆ ಸದಸ್ಯ ಅಬ್ದುಲ್‌ ಖದೀರ್‌ ರಾಜೀನಾಮೆ ಕೊಡಬೇಕು’ ಎಂದು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಅದಕ್ಕೆ ಪ್ರತಿ ಸವಾಲು ಹಾಕಿದ್ದರು.

‘ಸರ್ವೇ ನಂಬರ್‌ 63, 67ರ ಸಂಪೂರ್ಣ ಪರಿಶೀಲನೆ ನಡೆಸಿಯೇ ಲೋಕಾಯುಕ್ತರು ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ. ಉಪ ಸರ್ವೇಗಳಿಗೆ ಕ್ಲೀನ್‌ ಚಿಟ್‌ ಕೊಟ್ಟಿದ್ದಾರೆ ಎಂದು ಎಲ್ಲೂ ಹೇಳಿಲ್ಲ. ಒತ್ತುವರಿ ಸಂಬಂಧ ಖದೀರ್‌ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಜಂಟಿ ಸರ್ವೇಗೆ ಆಗ್ರಹಿಸಲಿ. ನಾನು ಅಲ್ಲಿಗೆ ಬರುವುದಿಲ್ಲ. ಬಂದರೆ ಪ್ರಭಾವ ಬೀರುತ್ತಾರೆ ಎಂದು ಆರೋಪಿಸಬಹುದು. ಅವರ ಸಮಕ್ಷಮದಲ್ಲೇ ಸರ್ವೇ ನಡೆಸಲಿ. ಅದಕ್ಕೆ ತಿಂಗಳ ಗಡುವು ಕೊಡುವೆ. ಅಷ್ಟರೊಳಗೆ ಸರ್ವೇ ಮಾಡಿಸದಿದ್ದರೆ ಅದು ನನ್ನ ತಪ್ಪಲ್ಲ’ ಎಂದೂ ಆನಂದ್‌ ಸಿಂಗ್‌ ಹೇಳಿದ್ದರು.

ಹೀಗೆ ಆನಂದ್‌ ಸಿಂಗ್‌, ಅಬ್ದುಲ್‌ ಖದೀರ್‌ ಆರೋಪ–ಪ್ರತ್ಯಾರೋಪದಲ್ಲಿ ತೊಡಗಿರುವುದರ ಮಧ್ಯೆಯೇ ಜಿಲ್ಲಾಡಳಿತ ಜಂಟಿ ಸರ್ವೇಗೆ ಮುಂದಾಗಿದ್ದು, ಸತ್ಯಾಂಶ ಆದಷ್ಟು ಬೇಗ ಹೊರಜಗತ್ತಿಗೆ ಗೊತ್ತಾಗಲಿ ಎನ್ನುವುದು ಸಾರ್ವಜನಿಕರ ಹಕ್ಕೊತ್ತಾಯವಾಗಿದೆ.

****

ಸರ್ವೇ ನಂಬರ್‌ 63, 67ಬಿ2 ವಿವಾದದ ಕೇಂದ್ರ:

ಸರ್ವೇ ನಂಬರ್‌ 63, 67ಬಿ2 ಈಗ ವಿವಾದದ ಕೇಂದ್ರ ಬಿಂದು. ಸರ್ವೇ ನಂಬರ್‌ 63ರಲ್ಲಿ ನೀರಾವರಿ ಇಲಾಖೆಯ ಸಣ್ಣ ಕಾಲುವೆಗೆ ಸೇರಿದ 0.30 ಸೇಂಟ್ಸ್‌, ಸರ್ವೇ ನಂಬರ್‌ 67ಬಿ2ನಲ್ಲಿ ಕರ್ನಾಟಕ ಒಳಚರಂಡಿ ಯೋಜನೆಗೆ ಸೇರಿದ 5 ಸೇಂಟ್ಸ್‌ ಜಾಗವನ್ನು ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಸರ್ವೇ ನಂಬರ್‌ 63, 82/1, 82/2, 82/3 ಸರ್ಕಾರಕ್ಕೆ ಸೇರಿದ ಜಾಗವನ್ನು ಸುರಕ್ಷಾ ಎಂಟರ್‌ಪ್ರೈಸೆಸ್‌ ಮತ್ತು ಪ್ರಭಾವಿಗಳು ಸೇರಿಕೊಂಡು ಒತ್ತುವರಿ ಮಾಡಿದ್ದಾರೆ ಎಂಬ ಆರೋಪವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.