ADVERTISEMENT

ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಗಣತಿ: 155 ಪ್ರಭೇದಗಳ ಪಕ್ಷಿಗಳು ವಾಸ್ತವ್ಯ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 2:40 IST
Last Updated 4 ಜನವರಿ 2026, 2:40 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಪಕ್ಷಿ ತಜ್ಞರು ಗಣತಿ ಕಾರ್ಯ ಕೈಗೊಂಡರು
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಪಕ್ಷಿ ತಜ್ಞರು ಗಣತಿ ಕಾರ್ಯ ಕೈಗೊಂಡರು   

ಹಗರಿಬೊಮ್ಮನಹಳ್ಳಿ: ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಗ್ರೀನ್ ಎಚ್‍ಬಿಎಚ್, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ(ಬಿಎನ್‍ಎಚ್‍ಎಸ್) ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶನಿವಾರ ಪಕ್ಷಿಗಳ ಗಣತಿ ಕಾರ್ಯ ನಡೆಯಿತು.

ತಾಲ್ಲೂಕು ಸೇರಿದಂತೆ ಹೊಸಪೇಟೆ, ಬೆಂಗಳೂರು, ಗಂಗಾವತಿ, ಕುಂದಾಪುರ, ಶಿವಮೊಗ್ಗ ಹಾಗೂ ರಾಜ್ಯದ ವಿವಿಧ ಕಡೆಗಳಿಂದ ಬಂದಿದ್ದ 25ಕ್ಕೂ ಹೆಚ್ಚು ಪಕ್ಷಿ ತಜ್ಞರು, ವೀಕ್ಷಕರು, ಪಕ್ಷಿಪ್ರೇಮಿಗಳು ಸತತ 4ಗಂಟೆಗಳ ಕಾಲ, ಬೆಳಿಗ್ಗೆ 6ರಿಂದ 10ರವರೆಗೂ ಗಣತಿ ಕೈಗೊಂಡರು. ವಿವಿಧ ತಂಡಗಳನ್ನು ರಚಿಸಿ ವಾಸ್ತವ್ಯ ಹೂಡಿರುವ 155 ಪ್ರಭೇದಗಳ ಲಕ್ಷಾಂತರ ಸಂಖ್ಯೆಯ ಬಾನಾಡಿಗಳನ್ನು ಗುರುತಿಸಿದರು. ಮುಖ್ಯವಾಗಿ ಇವುಗಳಲ್ಲಿ 40ಕ್ಕೂ ಹೆಚ್ಚು ಪ್ರಭೇದಗಳು ವಲಸೆ ಹಕ್ಕಿಗಳಾಗಿವೆ.

ನಾರ್ಥರನ್ ಪಿನ್‍ಟೈಲ್(ಸೂಜಿ ಬಾಲದ ಬಾತು) 20ಸಾವಿರ, ಗಾರ್ಗೆನಿ(ಬಿಳಿ ಹುಬ್ಬಿನ ಬಾತು) 15ಸಾವಿರ, ನಾರ್ಥನ್ ಶೋವೆಲರ್(ಚಲುಕ ಬಾತು), ಫುಲ್ವಸ್ ವಿಸಿಲಿಂಗ್ ಡಕ್ಸ್, ಲೆಸರ್ ವಿಸಿಲಿಂಗ್ ಡಕ್ಸ್(ಚಿಕ್ಕ ಶಿಳ್ಳೆಬಾತು), ಕಾಮನ್ ಟೀಲ್(ಸೋಲರಿ ಹಕ್ಕಿ), ಇಂಡಿಯನ್ ಸ್ಪಾಟ್ ಬಿಲ್ಡ್ ಡಕ್( ವರಟೆ ಬಾತು), ಮಲಾರ್ಡ್( ಪಚ್ಚಿ ತಲೆಯ ಬಾತು), ಗಾಡ್‍ವಲ್( ಕೆಂಪು ರೆಕ್ಕೆಯ ಬಾತು), ಯುರೇಷಿಯನ್ ವಿಜನ್(ನಾಮದ ಬಾತು) ಅತೀ ಹೆಚ್ಚು ಸಂಖ್ಯೆಯಲ್ಲಿ ಕಂಡು ಬಂದವು ಎಂದು ಪಕ್ಷಿ ತಜ್ಞರು ತಿಳಿಸಿದರು. ಇವುಗಳ ಜತೆಯಲ್ಲಿ ಪೇಂಟೆಂಡ್ ಸ್ಟಾಕ್ರ್ಸ್(ಬಣ್ಣದ ಕೊಕ್ಕರೆ), ಡಾರ್ಟರ್(ಹಾವಕ್ಕಿ), ಓಪನ್ ಬಿಲ್ ಸ್ಟಾರ್ಕ್(ಬಾಯ್ಕಳಕ), ಸ್ಪೂನ್‍ಬಿಲ್ಸ್, ನಾಬ್ ಬಿಲ್ಡ್ ಡಕ್ಸ್(ಗುಬುಟು ಕೊಕ್ಕಿನ ಬಾತು) ಪಕ್ಷಿಗಳನ್ನು ದಾಖಲಿಸಿದರು.

ADVERTISEMENT

ಪಕ್ಷಿಧಾಮದಿಂದ ಸಾವಿರಾರು ಸಂಖ್ಯೆಯಲ್ಲಿ ಹಿನ್ನೀರು ಪ್ರದೇಶಕ್ಕೆ ತೆರಳಿದವುಗಳಲ್ಲಿ ಬ್ಲಾಕ್ ಹೆಡೆಡ್ ಐಬೀಸ್ (ಕರಿತಲೆ ಕೆಂಬರಲು), ಗ್ಲೋಸಿ ಐಬೀಸ್( ಮಿಂಚು ಕೆಂಬರಲು), ರೋಸಿ ಸ್ಟಾರ್ಲಿಂಗ್ಸ್(ಗುಲಾಬಿ ಕಬ್ಬಕ್ಕಿ) ಲಿಟಿಲ್ ಇಗ್ರೀಟ್ಸ್(ಸಣ್ಣ ಬೆಳ್ಳಕ್ಕಿ), ಲಿಟಲ್ ಕಾರ್ಮೋರೆಂಟ್(ಪುಟ್ಟ ನೀರು ಕಾಗೆ) ಪಕ್ಷಿಗಳು ಭಾರಿ ಸಂಖ್ಯೆಯಲ್ಲಿ ತೆರಳಿದ್ದು ಕಂಡ ತಜ್ಞರು ಕೆಲ ಕಾಲ ಪಕ್ಷಿಧಾಮದ ದಂಡೆಯಲ್ಲಿ ಧ್ಯಾನಸ್ಥರಾಗಿ ಮೋಡದೆಡೆಗೆ ಮುಖ ಮಾಡಿ ನಿಂತಿದ್ದರು. ಗ್ರೀನ್ ಎಚ್‍ಬಿಎಚ್‍ನ ಆನಂದ್‍ಬಾಬು, ವಿಜಯ್ ಇಟ್ಟಿಗಿ, ಅಶೋಕ ಬಾವಿಕಟ್ಟಿ, ಶ್ರೀನಿವಾಸರಾವ್, ಪರಿಸರ ತಜ್ಞ ಬಾಬಿ, ಬಿಎನ್‍ಎಚ್‍ಎಸ್ ನ ಪಕ್ಷಿ ಸಂಶೋಧಕ ಎಚ್.ರಮೇಶ್, ವಿದ್ಯಾರ್ಥಿ ಸಂಚಾಲಕ ಕಾರ್ತೀಕ್, ಗಿರೀಶ್ ವಾಲ್ಮೀಕಿ, ಯೋಗಾನಂದ, ರಾಜು, ಕೆ.ಮಂಜುನಾಥ, ಲವ, ಕುವೆಂಪು ವಿಶ್ವವಿದ್ಯಾಲಯದ ವನ್ಯಜೀವಿ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಗಣತಿಯಲ್ಲಿ ಪಾಲ್ಗೊಂಡಿದ್ದರು.

ದಕ್ಷಿಣ ಭಾರತದಲ್ಲಿಯೇ ಮೊದಲ ಬಾರಿಗೆ ಅಂಕಸಮುದ್ರ ಪಕ್ಷಿಧಾಮದಲ್ಲಿ ಸಂತಾನೋತ್ಪತ್ತಿ ನಡೆಸಿರುವ ಫುಲ್ವಸ್ ವಿಸಿಲಿಂಗ್ ಡಕ್ ಆರಂಭದಲ್ಲಿ ಕೇವಲ 4ಸಂಖ್ಯೆ ಇದ್ದುದ್ದು ಈಗ 120ಕ್ಕೆ ಹೆಚ್ಚಿಸಿಕೊಂಡಿದೆ ಪೈಡ್ ಸ್ಟಾರ್ಲಿಂಗ್ ಕೂಡ ಸಂತಾನೋತ್ಪತ್ತಿ ನಡೆಸಲು ಆರಂಭಿಸಿರುವುದು ಒಳ್ಳೆಯ ಬೆಳವಣಿಗೆ
ವಿಜಯ್ ಇಟ್ಟಿಗಿ ಪಕ್ಷಿ ತಜ್ಞ
ಬೆಳಗಿನ ಜಾವದಲ್ಲಿ 2.5ಲಕ್ಷದಷ್ಟು ಪಕ್ಷಿಗಳು ಪಕ್ಷಿಧಾಮದಿಂದ ತುಂಗಭದ್ರಾ ಹಿನ್ನೀರಿನ ಕಡೆಗೆ ತೆರಳಿದವು ಇದಲ್ಲದೆ ಪಕ್ಷಿಧಾಮದಲ್ಲಿ 60ಸಾವಿರಕ್ಕೂ ಹೆಚ್ಚು ಪಕ್ಷಿಗಳು ಕಂಡುಬಂದವು ಇಷ್ಟೊಂದು ಸಂಖ್ಯೆಯ ಪಕ್ಷಿಗಳು ವಾಸ್ತವ್ಯ ಹೂಡಿದ್ದು ಇದೇ ಮೊದಲು ಬಾನಾಡಿಗಳ ಬದುಕಿಗೆ ಪೂರಕವಾದ ಜೀವ ವೈವಿದ್ಯ ಪಕ್ಷಿಗಳ ಆವಾಸ ಹೆಚ್ಚಾಗಲು ಕಾರಣವಾಗಿದೆ.
ರಾಜೀವ್ ಪಕ್ಷಿ ತಜ್ಞ ಹೊಸಪೇಟೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.