ADVERTISEMENT

ಹಗರಿಬೊಮ್ಮನಹಳ್ಳಿ: ಅಂಕಸಮುದ್ರ ಪಕ್ಷಿಧಾಮಕ್ಕೆ ಸಮರ್ಪಕ ರಸ್ತೆಯೇ ಇಲ್ಲ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 4:43 IST
Last Updated 27 ಅಕ್ಟೋಬರ್ 2025, 4:43 IST
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ವೀಕ್ಷಣಾ ಗೋಪುರಕ್ಕೆ ತೆರಳುವ ರಸ್ತೆ ತಗ್ಗುಗುಂಡಿಗಳಿಂದ ಆವೃತವಾಗಿದೆ
ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದ ವೀಕ್ಷಣಾ ಗೋಪುರಕ್ಕೆ ತೆರಳುವ ರಸ್ತೆ ತಗ್ಗುಗುಂಡಿಗಳಿಂದ ಆವೃತವಾಗಿದೆ   

ಹಗರಿಬೊಮ್ಮನಹಳ್ಳಿ: ರಾಮ್‍ಸಾರ್ ತಾಣ ಖ್ಯಾತಿಯ ತಾಲ್ಲೂಕಿನ ಅಂಕಸಮುದ್ರ ಪಕ್ಷಿಧಾಮದಲ್ಲಿ ಬಾನಾಡಿಗಳ ಕಲರವ ಆರಂಭವಾಗಿದೆ, ವಿದೇಶದಿಂದ ವಲಸೆ ಬಂದಿರುವ ಪಕ್ಷಿಗಳು ತಮ್ಮ ಗಮ್ಯ ಸ್ಥಾನವನ್ನು ತಲುಪಿ ವಿಶ್ರಾಂತಿಗಾಗಿ ತಮ್ಮ ಸ್ಥಳವನ್ನು ಭದ್ರಪಡಿಸಿಕೊಂಡಿವೆ.

ಆದರೆ ಜಿಲ್ಲಾ ಮುಖ್ಯರಸ್ತೆಯಿಂದ ಪಕ್ಷಿಧಾಮದ ವೀಕ್ಷಣಾ ಗೋಪುರ ತಲುಪುವುದಕ್ಕೆ ಪಕ್ಷಿಪ್ರೇಮಿಗಳು ಹರಸಾಹಸ ಪಡುವಂತಾಗಿದೆ. 500 ಮೀಟರ್ ಉದ್ದದ ರಸ್ತೆಯುದ್ದಕ್ಕೂ 1 ಅಡಿ ಆಳದಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ದ್ವಿಚಕ್ರವಾಹನ ಸವಾರರು ಗುಂಡಿಗಳಲ್ಲಿ ಬಿದ್ದು ಗಾಯ ಮಾಡಿಕೊಂಡಿರುವ ಉದಾಹರಣೆಗಳು ಸಾಕಷ್ಟಿವೆ. ಇನ್ನು ಬೇರೆ ವಾಹನಗಳಲ್ಲಿ ಬರುವ ಪ್ರವಾಸಿಗರಿಗಂತೂ ನರಕ ಯಾತನೆ ಉಂಟುಮಾಡುತ್ತದೆ. ಈ ರಸ್ತೆಯ ಆಳವಾದ ಗುಂಡಿಗಳು ಸ್ವಾಗತಿಸುತ್ತಿವೆ. ಅಡಿಯಷ್ಟು ಆಳದ ಗುಂಡಿಗಳಲ್ಲಿ ಮಳೆ ನೀರು ಆವೃತವಾಗಿ ಸಣ್ಣ ಗದ್ದೆಯಂತಾಗಿದೆ, ಕಾಲ್ನಡಿಗೆಯಲ್ಲಿ ತೆರಳುವುದಕ್ಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ರೈತರ ಭತ್ತದ ಗದ್ದೆಯಲ್ಲಿನ ನೀರು ಕೂಡ ರಸ್ತೆಗೆ ನುಗ್ಗುತ್ತಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿಸುವಂತೆ, ಶಾಶ್ವತ ಪರಿಹಾರ ಸಿಗುವವರೆಗೂ ತಾತ್ಕಾಲಿಕ ಪರಿಹಾರ ಎನ್ನುವಂತೆ ತಗ್ಗುಗುಂಡಿಗಳಲ್ಲಿ ಕಲ್ಲುಮಣ್ಣನ್ನಾದರೂ ಹಾಕಿ ಮುಚ್ಚುವಂತೆ ಪಕ್ಷಿಪ್ರೇಮಿಗಳ ಒತ್ತಾಯವಾಗಿದೆ.

’ಅಂಕಸಮುದ್ರ ಪಕ್ಷಿಧಾಮ ವಿಜಯನಗರ ಜಿಲ್ಲೆಯ ಅಸ್ಮಿತೆಯಾಗಿದೆ. ಇಲ್ಲಿಗೆ ಬರುವ ಪಕ್ಷಿ ವೀಕ್ಷಕರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಉತ್ತಮ ರಸ್ತೆ ನಿರ್ಮಾಣವಾಗಬೇಕು, ಮೂಲ ಸೌಕರ್ಯ ಕಲ್ಪಿಸಬೇಕು‘ ಎಂದು ಗುತ್ತಿಗೆದಾರ ಎಚ್.ನಾಗರಾಜ ಹೇಳಿದರು.

ADVERTISEMENT

’ಪಕ್ಷಿಧಾಮದ ಪ್ರವೇಶದ್ವಾರದ ವರೆಗೂ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಅಡಿಯಲ್ಲಿ ಅನುದಾನಕ್ಕೆ ಪ್ರಸ್ತಾವ ಕಳಿಸಲಾಗಿತ್ತು. ಅದಕ್ಕೆ ಸಮ್ಮತಿ ನೀಡಲಾಗಿದೆ, ಕಾಮಗಾರಿಗೆ ಅನುದಾನ ಬಿಡುಗಡೆಯಾಗಿದೆ. ಸಮಗ್ರ ಯೋಜನಾ ವರದಿ ತಯಾರಿಸಬೇಕಿದೆ. 500 ಮೀಟರ್ ಸಿಸಿ ರಸ್ತೆ ನಿರ್ಮಿಸಲಾಗುವುದು, ಮುಂದೆ ಮೆಟಲಿಂಗ್ ರಸ್ತೆ ನಿರ್ಮಿಸಲಾಗುವುದು, ಶೀಘ್ರದಲ್ಲಿಯೇ ಚಾಲನೆ ದೊರೆಯುತ್ತದೆ‘ ೆಂದು ವಲಯ ಅರಣ್ಯಾಧಿಕಾರಿ ಉಮೇಶ್‍ ನಾಯ್ಕ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.