ಬಳ್ಳಾರಿ: ಅನ್ನಭಾಗ್ಯ ಅಕ್ಕಿಯನ್ನು ಬಿಪಿಎಲ್ ಕಾರ್ಡುದಾರರಿಂದ ಅಕ್ರಮವಾಗಿ ಸಂಗ್ರಹಿಸಿ, ಹೆಚ್ಚಿನ ದರಕ್ಕೆ ಮಾರಾಟ ಮಾಡುವ ದಂಧೆ ರಾಜ್ಯದಲ್ಲಿ ವ್ಯಾಪಕವಾಗಿ ನಡೆಯುತ್ತಿದೆ. ಈ ವರ್ಷದ ಏಪ್ರಿಲ್‌ನಿಂದ ಜೂನ್ ಅಂತ್ಯದವರೆಗೆ ನಡೆದ ಕಾರ್ಯಾಚರಣೆಯಲ್ಲಿ 7,921.2 ಕ್ವಿಂಟಲ್ ಅಕ್ಕಿಯನ್ನು ವಶಕ್ಕೆ ಪಡೆಯಲಾಗಿದೆ.
ಯಾದಗಿರಿಯಲ್ಲಿ ಭಾರಿ ಪ್ರಮಾಣದ ಪಡಿತರ ಅಕ್ಕಿಯನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಅಕ್ರಮ ಅಕ್ಕಿ ದಂಧೆಯ ಚರ್ಚೆಯೂ ಮುನ್ನೆಲೆಗೆ ಬಂದಿದೆ.
ಮೂರು ತಿಂಗಳಲ್ಲಿ ವಶಕ್ಕೆ ಪಡೆದ ಅಕ್ಕಿಯ ಒಟ್ಟು ಮೌಲ್ಯ ₹1,74,76,396. ಅಗತ್ಯ ವಸ್ತುಗಳ ಕಾಯ್ದೆಯಡಿ ರಾಜ್ಯದಾದ್ಯಂತ 247 ದಾಳಿಗಳು ನಡೆದಿವೆ. 188 ಎಫ್‌ಐಆರ್‌ಗಳು ದಾಖಲಾಗಿವೆ. 213 ಆರೋಪಿಗಳ ಮೇಲೆ ಪ್ರಕರಣಗಳನ್ನು ದಾಖಲು ಮಾಡಲಾಗಿದೆ. 109 ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳ ಒಟ್ಟು ಮೌಲ್ಯ ₹2,89,25,300 ಎಂದು ಅಧಿಕೃತ ದಾಖಲೆಗಳು ಹೇಳುತ್ತಿವೆ.
2024ರ ಏಪ್ರಿಲ್‌ನಿಂದ 2024ರ ಮಾರ್ಚ್ ಅಂತ್ಯದವರೆಗೆ 12,035.65 ಕ್ವಿಂಟಲ್ ಅಕ್ಕಿ ವಶಕ್ಕೆ ಪಡೆಯಲಾಗಿದ್ದು, ಅದರ ಮೌಲ್ಯ ₹3,97,55,912 ಎನ್ನಲಾಗಿದೆ.
ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಈ ವರೆಗೆ 72.02 ಕೋಟಿ ಫಲಾನುಭವಿಗಳಿಗೆ ಒಟ್ಟು ₹11,821.17 ಕೋಟಿ ವೆಚ್ಚ ಮಾಡಿರುವುದಾಗಿ ಸರ್ಕಾರ ಹೇಳುತ್ತಿದೆ. ಆದರೆ, ಅದೇ ಫಲಾನುಭವಿಗಳಿಂದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ, ಮಾರಾಟ ಮಾಡುತ್ತಿರುವ ದಂಧೆಕೋರರು ಫಲಾನುಭವಿಗಳಿಂತಲೂ ಹೆಚ್ಚಿನ ಲಾಭ ಪಡೆಯುತ್ತಿದ್ದಾರೆ. ಹೀಗಾಗಿ ಯೋಜನೆಯ ಪ್ರಮುಖ ಫಲಾನುಭವಿಗಳು ಯಾರು ಎಂಬ ಪ್ರಶ್ನೆ ಉದ್ಭವಿಸಿದೆ.
ಅಧಿಕೃತ ಅಂಕಿಅಂಶಗಳ ಪ್ರಕಾರ ಚಿಕ್ಕಮಗಳೂರು, ಕೊಡಗು, ಉತ್ತರ ಕನ್ನಡದಂಥ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲಿ ದಂಧೆ ವ್ಯವಸ್ಥಿತವಾಗಿ ನಡೆಯುತ್ತಿದೆ.
ಬಳ್ಳಾರಿ, ಬಾಗಲಕೋಟೆ, ಬೆಳಗಾವಿ, ಬೀದರ್, ಚಾಮರಾಜನಗರ, ದಾವಣಗೆರೆ, ಧಾರವಾಡ, ಕಲಬುರಗಿ, ರಾಯಚೂರು, ಕೊಪ್ಪಳ, ವಿಜಯನಗರ, ಯಾದಗಿರಿ ಜಿಲ್ಲೆಗಳಲ್ಲಿ ಈ ದಂಧೆಗೆ ಅಂಕುಶವೇ ಇಲ್ಲದಂತಾಗಿದೆ.
ಹೀಗಾಗಿ ಉತ್ತರ ಕರ್ನಾಟಕ, ಅದರಲ್ಲೂ ಕಲ್ಯಾಣ ಕರ್ನಾಟಕ ಭಾಗವೇ ದಂಧೆಯ ಕಾರಸ್ಥಾನ ಎಂಬಂತಾಗಿದೆ. ಇನ್ನುಳಿದ ಜಿಲ್ಲೆಗಳಲ್ಲಿಯೂ ದಂಧೆ ನಡೆಯುತ್ತಿದೆಯಾದರೂ, ವ್ಯವಸ್ಥಿತವಾಗಿಲ್ಲ. ಇನ್ನೂ ಕೆಲವು ಜಿಲ್ಲೆಗಳಲ್ಲಿ ದಂಧೆ ನಡೆಯುತ್ತಿದ್ದರೂ, ದಾಳಿಗಳು ಸರಿಯಾಗಿ ನಡೆಯುತ್ತಿಲ್ಲ ಎಂಬ ಆರೋಪವಿದೆ.
ಅಕ್ಕಿ ಬೆಳೆಯುವ ಪ್ರದೇಶಗಳಲ್ಲಿ ಪಡಿತರ ರೂಪದಲ್ಲಿ ಅಕ್ಕಿಯನ್ನೇ ನೀಡುವ ಬದಲಿಗೆ ಬೇರೆ ಧಾನ್ಯ ನೀಡುವುದು ಅಥವಾ ಒಪ್ಪಿಗೆ ಮೇರೆಗೆ ಅಕ್ಕಿಯ ಬದಲಾಗಿ ಹಣ ಪಾವತಿಸುವುದು ಸೇರಿದಂತೆ ಪಟ್ಟಭದ್ರರಿಗೆ ಇರುವ ರಾಜಕೀಯ ಮುಖಂಡರ ಬೆಂಬಲ ತಡೆಗಟ್ಟಿದರೆ ಮಾತ್ರ ದಂಧೆಗೆ ಅಂಕುಶ ಹಾಕಬಹುದು ಎಂಬುದು ಅಧಿಕಾರಿಗಳ ವಾದ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.