ಹರಪನಹಳ್ಳಿ: ತಾಲ್ಲೂಕಿನ ಇತಿಹಾಸ ಪ್ರಸಿದ್ಧ ಉಚ್ಚಂಗಿದುರ್ಗ ಗುಡ್ಡದ ಮೇಲೆ ಕತ್ತೆ, ಜಾನುವಾರು ಓಡಾಟ ಕುರಿತು ಪುರಾತತ್ವ ಇಲಾಖೆಯ ಅಧಿಕಾರಿಗಳ ತಂಡ ಶುಕ್ರವಾರ ಸಂಜೆ ಭೇಟಿ ನೀಡಿ ಗ್ರಾಮಸ್ಥರು, ಭಕ್ತರೊಂದಿಗೆ ಚರ್ಚಿಸಿದರು.
ಕಲ್ಲುಬಂಡೆ ಮೇಲೆ ನಿರ್ಮಾಣ ಆಗಿರುವ ಕೋಟೆ, ಉಚ್ಚಂಗೆಮ್ಮ ದೇವಸ್ಥಾನದ ಸುತ್ತಮುತ್ತ ಜಾನುವಾರು ಓಡಾಟದಿಂದ ಭಕ್ತರಿಗೆ ತೊಂದರೆ ಮತ್ತು ಸ್ಮಾರಕಗಳ ಸ್ಥಿತಿಗತಿಗಳ ಕುರಿತು ಪರಿಶೀಲಿಸಿದರು. ಗುಡ್ಡದ ಮೇಲೆ ಕತ್ತೆಗಳ ಓಡಾಟ ಮತ್ತು ಜಾನುವಾರ ಸಂಚಾರ ಸಂಪೂರ್ಣ ನಿಷೇಧಿಸುವ ಕುರಿತು ಶೀಘ್ರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಪುರಾತತ್ವ ಇಲಾಖೆ ಅಧಿಕಾರಿಗಳು ಚರ್ಚಿಸಿದರು ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಮಾಹಿತಿ ನೀಡಿದರು.
ಪುರಾತತ್ವ ಇಲಾಖೆ, ಮುಜರಾಯಿ ಇಲಾಖೆ, ಅರಣ್ಯ ಇಲಾಖೆಗಳ ನಡುವಿನ ಗೊಂದಲದಿಂದಾಗಿ ಗುಡ್ಡದ ಮೇಲೆ ಅಭಿವೃದ್ಧಿ ಕೆಲಸಗಳು ಆಗಿಲ್ಲ. ಪ್ರತಿ ವರ್ಷ 25 ಲಕ್ಷ ಭಕ್ತರು ಬಂದು ಹೋಗುವ ಉಚ್ಚಂಗೆಮ್ಮ ದೇವಿ ಗುಡ್ಡ ಮತ್ತು ಹಾಲಮ್ಮನ ತೋಪಿನಲ್ಲಿ ಮೂಲ ಸೌಕರ್ಯ ಒಳಗೊಂಡು ಅಭಿವೃದ್ಧಿ ಪಡಿಸಬೇಕು ಎಂದು ಗ್ರಾಮಸ್ಥರು ಮನವಿ ಸಲ್ಲಿಸಿದರು.
ಹಂಪಿ ವೃತ್ತದ ಅಧೀಕ್ಷಕ ಪುರಾತತ್ವ ಶಾಸ್ತ್ರಜ್ಞ ಕೊಂಡುಲು ರಾಮಕೃಷ್ಣ ರೆಡ್ಡಿ, ಉಪಧೀಕ್ಷಕ ಎಂಜಿನಿಯರ್ ಸಿ.ಭರಣಿಧರನ್, ಸಹಾಯಕ ಎಂಜಿನಿಯರ್ ಎಂ.ಟಿ.ವಿನೋಜ್ ಕುಮಾರ, ಸಂರಕ್ಷಣಾ ಸಹಾಯಕ ಸುನೀಲ್ ಕುಮಾರ , ಮುಜರಾಯಿ ಇಲಾಖೆಯ ಮಲ್ಲಪ್ಪ, ಗಂಗಾಧರ, ರೇವಣಸಿದ್ದ ಶಿವಾಚಾರ್ಯ ಸ್ವಾಮೀಜಿ, ಕೆಂಚಪ್ಪ, ಶಿವಕುಮಾರ ಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.